ಬರಪರಿಹಾರ: ನಾಳೆ ಅಮಿತ್‌ ಷಾ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು : ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಷಾ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿ ಕುರಿತು ವಿವರಿಸಲಾಗಿದ್ದು, ಡಿಸೆಂಬರ್‌ 23 ರಂದು ಅಮಿತ್‌ ಷಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಪರಿಹಾರ ಬಿಡುಗಡೆ ಕುರಿತು ತೀರ್ಮಾನವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬರಪರಿಹಾರ ಸೇರಿದಂತೆ ರಾಜ್ಯದ ಬೇಡಿಕೆಗಳಿಗೆ  ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅವುಗಳನ್ನು ಕೇಂದ್ರ ಸರ್ಕಾರ  ಈಡೇರಿಸುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಾಭಾವ ವ್ಯಕ್ತಪಡಿಸಿದರು.

ನವದೆಹಲಿಯಲ್ಲಿ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದು, ಅವರು ಬರಪರಿಸ್ಥಿತಿಯ ಬಗ್ಗೆ ನಾಳೆ 23 ರಂದು ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಧಾನ ಮಂತ್ರಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಬರ ಪರಿಸ್ಥಿತಿಯ ಜೊತೆಗೆ ಮಹಾದಾಯಿ , ಮೇಕೆದಾಟು, ಭದ್ರಾಮೇಲ್ದಂಡೆ ಯೋಜನೆಗಳ ಬಗ್ಗೆ, ಹಾಗೂ ನರೇಗಾ ಯೋಜನೆಯಡಿ ಮಾನವ ದಿನಗಳನ್ನು 150 ದಿನಗಳಿಗೆ ವಿಸ್ತರಿಸುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲು ಮನವಿ ಮಾಡಲಾಗಿದೆ.

 

ಪ್ರಧಾನಿ ಮೋದಿಯವರು ಕರ್ನಾಟಕ ಬರ ಪರಿಸ್ಥಿತಿ ಹಾಗೂ ಮೇಲಿನ ಬೇಡಿಕೆಗಳ ಬಗ್ಗೆ ಸಮಾಧಾನಚಿತ್ತರಾಗಿ ಆಲಿಸಿ, ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

ಕೋವಿಡ್ – ಜನರು ಆತಂಕ ಪಡಬೇಕಾಗಿಲ್ಲ

ಮೈಸೂರಿನಲ್ಲಿ 6 ಜನರಿಗೆ ಕೋವಿಡ್ ತಗುಲಿದ್ದು, ಅವರಿಗೆ ಇತರೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಭವಿಷ್ಯದಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಮಾಡುವ ಸಾಧ್ಯತೆ ಇದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ,  ಈಗ ಸಧ್ಯದ ಪರಿಸ್ಥಿತಿಯಲ್ಲಿ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಸಂಸದರ ಅಮಾನತ್ತು : ಪ್ರಜಾಪ್ರಭುತ್ವದ ಕಗ್ಗೊಲೆ- ಸಿಎಂ ಸಿದ್ದರಾಮಯ್ಯ

ಸಂಸತ್ತಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಸದರನ್ನು ಅಮಾನತ್ತು ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷದವರ ವಾದವನ್ನು ಕೇಳಬೇಕು. ಜನರ ತೀರ್ಪಿನಂತೆ ಸಂಸದರು ಲೋಕಸಭೆ ಅಥವಾ ವಿಧಾನಸಭೆಗೆ ಬಂದಿರುತ್ತಾರೆ. ಅವರ ಹಕ್ಕುಗಳನ್ನು ಕಸಿದುಕೊಳ್ಳಲು ಸಭಾಧ್ಯಕ್ಷರು ಸೇರಿದಂತೆ ಯಾರಿಗೂ ಸಾಧ್ಯವಿಲ್ಲ ಎಂದರು.

ಲೋಕಸಭೆಯ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಸದರನ್ನು ಅಮಾನತ್ತು ಮಾಡಿರಲಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಕೇಂದ್ರ ಸರ್ಕಾರದವರು ಪ್ರಭಾಪ್ರಭುತ್ವವನ್ನು ಹಾಗೂ ಜನರ ಭಾವನೆಯನ್ನು ಗೌರವಿಸುತ್ತಿಲ್ಲ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜನರು ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ ಎಂದರು.

ಇಂಡಿಯ ಸಭೆಯಲ್ಲಿ ತೀರ್ಮಾನ :

ಇಂಡಿಯ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಪ್ರಸ್ತಾಪ ಮಾಡಲಾಗಿರುವ ಕುರಿತು ಅಭಿಪ್ರಾಯ ಕೇಳಿದ್ದಕ್ಕೆ, ಇಂಡಿಯ ಸಭೆಯಲ್ಲಿ ತೀರ್ಮಾನ ಮಾಡಬೇಕು ಎಂದು ತಿಳಿಸಿದರು.

 

ಜಮೀರ್‌ ಅಹ್ಮದ್‌ ಅವರ ಜೊತೆ ಐಷಾರಾಮಿ ವಿಮಾನದಲ್ಲಿ ತಿರುಗಾಡಿದ ಕುರಿತು ಬಿಜೆಪಿಯವರು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ನರೇಂದ್ರ ಮೋದಿಯವರು ಯಾವುದರಲ್ಲಿ ತಿರುಗಾಡುತ್ತಾರೆ ಎಂದು ಅವರಿಗೇ ಕೇಳಿ ಎಂದು ತಿಳಿಸಿದರು. 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top