ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಧಾರ್ಮಿಕ ವಲಯ ಕೈಜೋಡಿಸಬೇಕು ರಾಜ್ಯಪಾಲ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಧಾರ್ಮಿಕ ಸಮುದಾಯ ಒಳಗೊಂಡಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಹೇಳಿದ್ದಾರೆ. ಯಶವಂತರಪುರ ಉದಯ ಭಾನು ಪಬ್ಲಿಕ್ ಶಾಲೆಯ ಆಟದ ಮೈದಾನಲ್ಲಿ ಆಚಾರ್ಯ ನರ್ರರತ್ನ ಸುರೂಜಿ ಮಹಾರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 11 ಮಂದಿ ಬಾಲಕರು ಮತ್ತು ಬಾಲಕಿಯರಿಗೆ ಸನ್ಯಾಸ ಧೀಕ್ಷೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲರು, ದೇಶದಲ್ಲಿ ಹಲವಾರು ಸಮಸ್ಯೆಗಳಿದ್ದು, ಇವೆಲ್ಲವುಗಳಿಗೂ ಪರಿಹಾರಗಳಿವೆ. ಜೈನ ಧರ್ಮ ಹಾಗೂ ಪ್ರಧಾನಮಂತ್ರಿ ನರೇಂದ್ರ ಮಫೋದಿ ಅವರು ಸ್ವಾವಲಂಬಿ ಭಾರತದ ಚಿಂತನೆಗಳನ್ನು ನೀಡಿದ್ದಾರೆ. ಇಂತಹ ಚಿಂತನೆಗಳನ್ನು ಸಾಕಾರಗೊಳಿಸಲು ಧಾರ್ಮಿಕ ವರ್ಗ ಕೈಜೋಡಿಸಬೇಕು ಎಂದರು.

ಹಿಂಸೆಯಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಅಹಿಂಸೆಯೇ ಎಲ್ಲದಕ್ಕೂ ಮದ್ದು ಎಂದು ಜೈನ ಧರ್ಮ ನಮಗೆ ಕಲಿಸಿಕೊಟ್ಟಿದೆ. ಇದೇ ಉದ್ದೇಶದಿಂದ ನಮ್ಮ ಪೂರ್ವಜರು ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ನೀಡಿದ್ದಾರೆ. ಇಡೀ ವಿಶ್ವ, ಇಡೀ ಬ್ರಹ್ಮಾಂಡ ನಮ್ಮ ಪರಿವಾರವಾಗಿದ್ದು, ನಾವು ಕೇವಲ ಪರಿವಾರದ ಸದಸ್ಯರು. ಇದೇ ಮಾರ್ಗದಲ್ಲಿ ನಡೆಯುವುದು ನಮ್ಮ ದ್ಯೇಯವಾಗಿದೆ. ಎಲ್ಲರೂ ಸುಖಿಯಾಗಿದ್ದರೆ, ಎಲ್ಲರೂ ನಿರೋಗಿಯಾಗುತ್ತಾರೆ. ನಾವು ಬದುಕಬೇಕು. ಮತ್ತೊಬ್ಬರಿಗೂ ಬದಕಲು ಬಿಡಬೇಕು. ನಮ್ಮ ಬದುಕು ಪ್ರೇಮ ಭಾವನೆಯಿಂದ ಕೂಡಿರಬೇಕು. ಇಂತಹ ಮನೋಭಾವನೆಗಳಿಂದ ತೊಂದರೆಗಳು ದೂರಾಗಲಿವೆ ಎಂದು ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಅಂಶಗಳನ್ನು ಅಳವಡಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಎಷ್ಟೇ ಸಮಸ್ಯೆ ಎದುರಾರೂ ನಮ್ಮ ನಿಲುವಿನಿಂದ ವಿಮುಖವಾಗುವುದಿಲ್ಲ. ಪ್ರಸಕ್ತ ವರ್ಷ ಒಂದು ಪಠ್ಯವಾಗಿ ನೈತಿಕ ಶಿಕ್ಷಣವನ್ನು ಜಾರಿಗೊಳಿಸುತ್ತೇವೆ ಎಂದರು. ನಾವು ಬ್ರಿಟಿಷ್ ಮಾದರಿಯ ಶಿಕ್ಷಣ ವ್ಯವಸ್ಥೆಯಿಂದ ಇನ್ನೂ ಮುಕ್ತವಾಗಿಲ್ಲ. ಒಂದು ಅಥವಾ ಎರಡನೇ ತರಗತಿಯಲ್ಲಿ ನೈತಿಕ ಶಿಕ್ಷಣದ ಪಾಠಗಳನ್ನು ಅಳವಡಿಸುತ್ತೇವೆ. ಹೀಗಾಗಿ ರಾಷ್ಟ್ರೀಯ ವಾದಿ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆಯನ್ನು ಬದಲಾವಣೆ ಮಾಡದಿದ್ದರೆ ಜನ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಇದೇ ಹಾದಿಯಲ್ಲಿ ಸರ್ಕಾರ ಮುನ್ನಡೆಯುತ್ತಿದೆ. ನಮಗೆ ದೇಶದಲ್ಲಿ ಔಪಚಾರಿಕ ಶಿಕ್ಷಣ ಬಹಳಷ್ಟು ಕಡೆಗಳಲ್ಲಿ ಸಿಗುತ್ತದೆ. ತಾಯಿ, ನಂತರ ಗುರುಗಳಿಂದಲೂ ಶಿಕ್ಷಣ ದೊರೆಯುತ್ತಿದೆ ಎಂದರು. ಸಂಸದ ಪಿ.ಸಿ. ಮೋಹನ್ ಮಾತನಾಡಿ, ಕಾಲ ಬದಲಾವಣೆಯಾಗುತ್ತಿದೆ. ಸಣ್ಣ ಮಗು ಕೂಡ ಹತ್ತು ನಿಮಿಷಗಳ ಕಾಲ ಮೊಬೈಲ್ ಇಲ್ಲದೇ ಇರಲು ಸಾಧ್ಯವಾಗುತ್ತಿಲ್ಲ. ಸನ್ಯಾಸ ಸ್ವೀಕರಿಸಲು ಆಗಮಿಸಿರುವವರು ಶ್ರೀಮಂತ ಕುಟುಂಬದವರು. ಇವರು ನಾಳೆಯಿಂದ ವಾಹನಗಳಲ್ಲಿ ಓಡಾಡುವಂತಿಲ್ಲ. ಯಾರೋ ಕೊಟ್ಟಿರುವುದನ್ನು ತಿನ್ನಬೇಕಾಗುತ್ತದೆ. ಇದೊಂದು ಕಠೋರವಾದ ತಪಸ್ಸು. ದೇಶದ ಗೌರವ ಎತ್ತಿ ಹಿಡಿಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಂಟು ವರ್ಷಗಳಲ್ಲಿ ಮಾಡಿದ್ದಾರೆ. ಇವರ ಸಾಧನೆಯಿಂದಾಗಿ ಇಂದು ಜಗತ್ತಿನ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದರು.

Leave a Comment

Your email address will not be published. Required fields are marked *

Translate »
Scroll to Top