ಕೊಪ್ಪಳ: ಕಾಲದ ಹಣ್ಣು ಆದ ಮಾವು ಮೇಳ ಆರಂಭವಾಗಿದೆ. ಇದೇ ಮೇ 30 ರವರೆಗೆ ತೋಟಗಾರಿಕೆ ಇಲಾಖೆ ಮಾವು ಮೇಳ ಆಯೋಜಿಸಿದೆ. ಮಾವು ಮೇಳವನ್ನು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರು ಸೋಮವಾರ ದಂದು ಚಾಲನೆ ನೀಡಿದರು. ಮಾವು ಮೇಳದಲ್ಲಿ ವಿವಿಧ ಬಗೆಯ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಎಂಟು ದಿನಗಳ ವರೆಗೆ ನಡೆಯುತ್ತಿದ್ದು, ಮಾವು ಪ್ರಿಯರನ್ನು ಮೇಳದ ಕಡೆಗೆ ಸೆಳೆಯುತ್ತಿದೆ.

ಹಣ್ಣುಗಳ ರಾಜ ಎಂದೇ ಖಾತೆ ಹೊಂದಿರುವ ಮಾವು, ಈ ಸಲ ತಡವಾಗಿ ಬಂದಿದೆಯಾದರೂ, ವಿವಿಧ ಬಗೆಯ ಮಾವುಗಳು ಕೊಪ್ಪಳ ನಗರದಲ್ಲಿ ಈಗ ಒಂದೇ ಸೂರಿನಡಿ ಸಿಗುತ್ತಿವೆ. ಮೇಳದಲ್ಲಿ ಸುಮಾರು 20 ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದ್ದು, ಈ ಮಳಿಗೆಗಳ ಮೂಲಕ ಗ್ರಾಹಕರು ನೇರವಾಗಿ ರೈತರಿಂದ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ವಿವಿಧ ಬಗೆಯ ಮಾವಿನ ಹಣ್ಣುಗಳ ಪ್ರದರ್ಶನ ನಡೆಯುತ್ತಿದ್ದು, ಪ್ರಮುಖವಾಗಿ ಈ ಮೇಳದಲ್ಲಿ ಆಪೋಸ್, ಬೆನೆಷಾನ್, ರಸಪೂರಿ, ಕೇಸರಿ, ದಶಾಹರಿ ಸೇರಿದಂತೆ ಅನೇಕ ತಳಿಯ ಮಾವಿನ ಹಣ್ಣುಗಳು ಮಾರಾಟಕ್ಕೆ ಲಭ್ಯವಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಇಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ಗ್ರಾಹಕರ ಮತ್ತು ರೈತರ ನಡುವೆ ಮಾವಿನ ಹಣ್ಣುಗಳ ಮಾರಾಟ ನಡೆಯುತ್ತಿದ್ದು, ಇದು ರೈತರು ಹಾಗೂ ಗ್ರಾಹಕರಿಗೆ ಮಾವಿನ ಹಣ್ಣುಗಳು ಕಡಿಮೆ ಬೆಲೆಗೆ ದೊರೆಯುತ್ತಿದೆ. ಈ ಮೇಳದಲ್ಲಿ ಯಾವುದೇ ರಾಸಾಯನಿಕ ಬಳಸದೆ ಕೇವಲ ನೈಸರ್ಗಿಕವಾಗಿ ಬೆಳೆದ ಮಾವಿನ ಹಣ್ಣುಗಳ ಮಾರಾಟಕ್ಕಿಡಲಾಗಿದೆ.

ಇದು ಗ್ರಾಹಕರನ್ನು ಸೆಳೆಯುವಲ್ಲಿ ಕಾರಣವಾಗಿದೆ. ಈ ಬಾರಿ ಮಾವಿನ ಹಣ್ಣುಗಳು ತಡವಾಗಿ ಬಂದರೂ ಮಾರಾಟವಾಗಬಹುದು ಎಂಬ ನಿರೀಕ್ಷೆಯನ್ನು ತೋಟಗಾರಿಕೆ ಇಲಾಖೆಯು ಹೊಂದಿದೆ. ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮುಂದೆ ಬಂದು ಇಲಾಖೆ ನೆರವಿನ ಮೂಲಕ ಮಾವು ಬೆಳೆಗಾರರಿಗೆ ಮಾರುಕಟ್ಟೆಗೆ ಅವಕಾಶ ಮಾಡಿ ಕೊಡುವುದಲ್ಲದೆ, ವಿವಿಧ ಮಾವಿನ ತಳಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಕೈಗೊಳ್ಳುತ್ತಿರುವುದು ಕೊಪ್ಪಳ ಜಿಲ್ಲೆಯ ಮಾವು ಬೆಳೆಗಾರರಿಗೆ ಶಕ್ತಿ ತುಂಬಿದಂತಾಗಿದೆ. ಕೃಷ್ಣ ಉಕ್ಕುಂದ ರವರ ಕಾರ್ಯವನ್ನು ಮಾವು ಬೆಳೆಗಾರರು ಶಾಘ್ಲಿಸುತ್ತಿದ್ದಾರೆ. ಮಾವು ಮೇಳದಲ್ಲಿ ಮಾವು ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಿವಿಧ ತಳಿಗಳ ಮಾವುಗಳನ್ನು ಖರೀದಿ ಮಾಡಿ, ಈ ಸೌಲಭ್ಯವನ್ನು ಸದುಪಯೋಗ ಪಡಿಸಕೊಂಡು ಈ ವಿನೂತನ ಮಾವು ಮೇಳಕ್ಕೆ ಬಂದು ಮಾವಿನ ಸವಿ ರುಚಿಯನ್ನು ಸವಿಯಬಹುದು.

ಈ ವೇಳೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಮುನಿರಾಬಾದ್ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಯೋಜನೆಯ (ಕಾಡಾ) ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಬಿ.ಹೆಚ್.ಎಮ್.,ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ ಫೌಜಿಯಾ ತರನ್ನುಮ್, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ಬಿ. ಪಾಟೀಲ್,
ತೋಟಗಾರಿಕೆ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಅನೇಕರು ಇದ್ದರು.