ದುಬಾರಿ ಬೆಲೆಯ ಮದ್ಯದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಸರ್ಕಾರ

ಬೆಂಗಳೂರು: ವಿಸ್ಕಿ,ವೈನ್ ಸೇರಿದಂತೆ ದುಬಾರಿ ಬೆಲೆಯ ಮದ್ಯದ ಬೆಲೆಯನ್ನು ಕಡಿಮೆ ಮಾಡಿ ಸುಮಾರು 5000 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಆದಾಯವನ್ನು ಗಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ದುಬಾರಿ ಬೆಲೆಯ ಮದ್ಯದ ಮೇಲಿನ ತೆರಿಗೆಯನ್ನು ಗಣನೀಯವಾಗಿ ಕಡಿತಗೊಳಿಸಿದರೆ ಹೆಚ್ಚು ಮದ್ಯ ಮಾರಾಟವಾಗಲಿದೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಸರ್ಕಾರ ಈ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ವಿವರ ನೀಡಿವೆ.

ಈ ಸಂಬಂಧ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು,ಇದರ ಬೆನ್ನಲ್ಲೇ ಇದಕ್ಕೆ ಪ್ರೇರಣೆ ನೀಡಿದ ದೆಹಲಿ,ಮಹಾರಾಷ್ಟ್ರ,ತೆಲಂಗಾಣ ಸೇರಿದಂತೆ ನಾಲ್ಕು ರಾಜ್ಯಗಳಿಗೆ ಅಧ್ಯಯನ ತಂಡವನ್ನು ಕಳಿಸಲು ನಿರ್ಧರಿಸಿದ್ದಾರೆ. ಆದರೆ ಹಿಂದಿನಂತೆ ಅಬಕಾರಿ ಇಲಾಖೆಯ ಡಿಸಿ ಹಂತದ ಅಧಿಕಾರಿಗಳ ಬದಲು ಖುದ್ದಾಗಿ ತಾವೂ ಒಂದು ರಾಜ್ಯಕ್ಕೆ ತಂಡದೊಂದಿಗೆ ಭೇಟಿ ನೀಡಲಿದ್ದಾರೆ. ಉಳಿದಂತೆ ಅಬಕಾರಿ ಇಲಾಖೆಯ ಆಯುಕ್ತರು,ಜಂಟಿ ಆಯುಕ್ತರು,ಸಹಾಯಕ ಆಯುಕ್ತರ ನೇತೃತ್ವದ ತಂಡಗಳು ಈ ಯೋಜನೆಯ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಲು ಬೇರೆ ಬೇರೆ ರಾಜ್ಯಗಳಿಗೆ ತೆರಳಲಿವೆ.

ದುಬಾರಿ ಬೆಲೆಯ ವಿಸ್ಕಿ,ವೈನ್ ಸೇರಿದಂತೆ ವಿವಿಧ ಮದ್ಯದ ಉತ್ಪನ್ನಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿತ ಮಾಡುವ ಮೂಲಕ ದೆಹಲಿ,ಮಹಾರಾಷ್ಟ್ರ,ತೆಲಂಗಾಣ ಸೇರಿದಂತೆ ನಾಲ್ಕು ರಾಜ್ಯಗಳು ಅಬಕಾರಿ ಆದಾಯದಲ್ಲಿ ಗಣನೀಯ ಏರಿಕೆ ಕಂಡಿವೆ. ಅದೇ ರೀತಿ ಕರ್ನಾಟಕದಲ್ಲಿ ದುಬಾರಿ ಬೆಲೆಯ ಮಧ್ಯದ ಹಾಲಿ ಮಾರುಕಟ್ಟೆ ಬೆಲೆ ಒಂದು ಸಾವಿರ,ಎರಡು ಸಾವಿರ ರೂಪಾಯಿಗಳಷ್ಟು ಕಡಿಮೆ ಆದರೆ ಮದ್ಯದ ಮಾರಾಟ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ.ಆ ಮೂಲಕ ತೆರಿಗೆ ಕಡಿತ ಮಾಡಿದರೂ ಆದಾಯದಲ್ಲಿ ದೊಡ್ಡ ಏರಿಕೆ ಆಗಲಿದೆ ಎಂಬುದು ಸಚಿವ ಗೋಪಾಲಯ್ಯ ಅವರ ಲೆಕ್ಕಾಚಾರ ಎಂದು ಮೂಲಗಳು ಹೇಳಿವೆ.

ಆದರೆ ಈ ತೆರಿಗೆ ಕಡಿಮೆ ಮುಖಬೆಲೆಯ ಮದ್ಯಕ್ಕೆ ಅನ್ವಯಿಸದಿರಲು ತೀರ್ಮಾನಿಸಲಾಗಿದ್ದು ದುಬಾರಿ ಬೆಲೆಯ ಮದ್ಯವನ್ನೇ ಕೇಂದ್ರ ಬಿಂದುವನ್ನಾಗಿಟ್ಟುಕೊಳ್ಳಲಾಗಿದೆ. ಈ ಮಧ್ಯೆ ಕರ್ನಾಟಕವನ್ನು ಮಾದರಿಯಾಗಿಟ್ಟುಕೊಂಡ ಪಶ್ಚಿಮ ಬಂಗಾಳ ಸರ್ಕಾರ ಮದ್ಯದ ಮೇಲಿನ ತೆರಿಗೆ ಪ್ರಮಾಣವನ್ನು ಹೆಚ್ಚಳ ಮಾಡಿದ ಪರಿಣಾಮವಾಗಿ ಅದರ ಅಬಕಾರಿ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂಬುದು ಮೂಲಗಳ ವಿವರಣೆ. ಅಂದ ಹಾಗೆ ಕಳೆದ ಸಾಲಿನಲ್ಲಿ ರಾಜ್ಯದ ಅಬಕಾರಿ ಆದಾಯ ಹತ್ತತ್ತಿರ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳಷ್ಟಾಗಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ ಆದಾಯದ ಪ್ರಮಾಣ 26 ಸಾವಿರ ಕೋಟಿ ರೂಪಾಯಿಗಳನ್ನು ದಾಟಿತ್ತು.

ಇದೇ ಕಾರಣಕ್ಕಾಗಿ ಈ ಸಾಲಿನ ಬಜೆಟ್ ನಲ್ಲಿ ಅಬಕಾರಿ ಬಾಬ್ತಿನಿಂದ 29 ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಆದಾಯವನ್ನು ನಿರೀಕ್ಷಿಸಲಾಗಿದೆಯಾದರೂ ಈ ಪ್ರಮಾಣ ಮೂವತ್ತು ಸಾವಿರ ಕೋಟಿ ರೂಪಾಯಿಗಳಷ್ಟಾಗಬಹುದು ಎಂಬ ಅಂದಾಜಿದೆ. ಇಂತಹ ಸಂದರ್ಭದಲ್ಲಿ ದುಬಾರಿ ಬೆಲೆಯ ಮದ್ಯದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದರೆ ಇನ್ನೂ ಹೆಚ್ಚುವರಿಯಾಗಿ 5000 ಕೋಟಿ ರೂಪಾಯಿಗಳಷ್ಟು ಆದಾಯ ಬೊ‍ಕ್ಕಸಕ್ಕೆ ಹರಿದು ಬರಲಿದೆ ಎಂದು ಅಂದಾಜಿಸಲಾಗಿದೆ. ದುಬಾರಿ ಬೆಲೆಯ ಮದ್ಯ ಖರೀದಿಸುವವರಿಗೂ ಅನುಕೂಲವಾಗಬೇಕು,ಅದೇ ರೀತಿ ಸರ್ಕಾರದ ಆದಾಯದ ಪ್ರಮಾಣವೂ ಹೆಚ್ಚಬೇಕು ಎಂಬುದು ಸರ್ಕಾರದ ನಿಲುವು. ಸರ್ಕಾರಕ್ಕೆ ಈಗಿರುವ ಮಾಹಿತಿಯ ಪ್ರಕಾರ ದೆಹಲಿ,ಮಹಾರಾಷ್ಟ್ರ,ತೆಲಂಗಾಣದಂತಹ ರಾಜ್ಯಗಳಲ್ಲಿ ಮದ್ಯದ ಮೇಲಿನ ತೆರಿಗೆ ಪ್ರಮಾಣ ಕಡಿಮೆ ಇರುವುದರಿಂದ ಆ ರಾಜ್ಯಗಳಿಗೆ ಭೇಟಿ ನೀಡುತ್ತಿರುವ ಮದ್ಯಪ್ರಿಯರು ಐದು,ಆರು ಬಾಟಲಿಗಳನ್ನು ಖರೀದಿಸಿ ತರುತ್ತಿದ್ದಾರೆ.

ಮಹಾರಾಷ್ಟ್ರ,ತೆಲಂಗಾಣ ರಾಜ್ಯಗಳಿಂದ ಈ ರೀತಿ ರಾಜ್ಯಕ್ಕೆ ಹರಿದು ಬರುತ್ತಿರುವ ಮದ್ಯದ ಪ್ರಮಾಣ ಸಾವಿರಾರು ಕೋಟಿ ರೂಪಾಯಿಗಳಷ್ಟಿದೆ ಎಂಬ ವರದಿಯೂ ರಾಜ್ಯ ಸರ್ಕಾರದ ನಿದ್ದೆಗೆಡಿಸಿತ್ತು. ಹೊರರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಇಂತಹ ಮದ್ಯ ಬರುವುದಾದರೆ ಆ ಮದ್ಯ ಅಲ್ಲಿನ ಬೆಲೆಗೇ ಇಲ್ಲಿ ಸಿಗುವಂತಾದರೆ ಬೊಕ್ಕಸಕ್ಕೂ ಲಾಭ ಎಂಬುದು ಸರ್ಕಾರದ ಯೋಚನೆ ಎಂದು ಉನ್ನತ ಮೂಲಗಳು ವಿವರ ನೀಡಿವೆ. ಆದರೆ ತೆರಿಗೆ ಕಡಿತ ಕೇವಲ ದುಬಾರಿ ಬೆಲೆಯ ಮದ್ಯಕ್ಕೆ ಮಾತ್ರ ಅನ್ವಯಿಸಲಿದ್ದು,ಕಡಿಮೆ ಮೌಲ್ಯದ ಮದ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಇವೇ ಮೂಲಗಳು ಹೇಳಿವೆ.

Leave a Comment

Your email address will not be published. Required fields are marked *

Translate »
Scroll to Top