ಅನರ್ಹಗೊಂಡ ಬಗರ್ ಹುಕುಂ ಅರ್ಜಿಗಳ ಪುನರ್ ಪರಿಶೀಲನೆ: ಸಚಿವ ಕೃಷ್ಣ ಬೈರೇಗೌಡ ಭರವಸೆ

ಬಗರ್ ಹುಕುಂ ಅಡಿ ಒಬ್ಬರಿಂದಲೇ 25 ಅರ್ಜಿ ಸಲ್ಲಿಕೆ

ನಮೂನೆ 57ರ ಅಡಿಯಲ್ಲಿ ಒಟ್ಟಾರೆ 9,85,000 ಅರ್ಜಿ

ಭೂ ಮಂಜೂರಾತಿಗೆ ಬೇಕಿದೆ 54 ಲಕ್ಷ ಎಕರೆ ಸರ್ಕಾರಿ ಭೂಮಿ

ನಿಯಮ ಮೀರಿ ಅನರ್ಹಗೊಂಡ ಅರ್ಜಿಗಳ ಪುನರ್ ಪರಿಶೀಲನೆ

ಬೆಂಗಳೂರು: ಸಾಗುವಳಿ ಭೂ ಮಂಜೂರಾತಿಗಾಗಿ ಬಗರ್ ಹುಕುಂ (ಅಕ್ರಮ ಸಕ್ರಮ) ಯೋಜನೆಯ ಅಡಿ ತಿರಸ್ಕೃತಗೊಂಡ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ಭರವಸೆ ನೀಡಿದರು.

 

ಸೋಮವಾರ ಪ್ರಶ್ನೋತ್ತರ ಅವಧಿಯ ವೇಳೆ ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಬಗರ್ ಹುಕುಂ ಯೋಜನೆ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಅನರ್ಹಗೊಂಡ ಅರ್ಜಿಗಳ ಸಂಖ್ಯೆ ಎಷ್ಟು? ಮತ್ತು ಅನರ್ಹಗೊಳಿಸಲು ಕಾರಣವೇನು? ಎಂದು ಪ್ರಶ್ನಿಸಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಬಗರ್ ಹುಕುಂ ಕಾನೂನನ್ನು ಜಾರಿಗೆ ತಂದಿರುವುದೇ ಬಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ. ಅರ್ಹ ಫಲಾನುಭವಿಗಳಿಗೆ ಭೂ ಮಂಜೂರು ಮಾಡುವುದು ಸರ್ಕಾರದ ಕರ್ತವ್ಯವೂ ಹೌದು. ಹೀಗಾಗಿ ತಿರಸ್ಕೃತ ಅಥವಾ ಅನರ್ಹಗೊಂಡ ಬಗರ್ ಹುಕುಂ ಅರ್ಜಿಗಳಲ್ಲಿ ತಪ್ಪಾಗಿದ್ದರೆ, ನಿಯಮ ಮೀರಿ ಅನರ್ಹಗೊಂಡಿದ್ದರೆ ಮತ್ತೊಮ್ಮೆ ಪುನರ್ ಪರಿಶೀಲನೆಗೆ ಸೂಚಿಸಲಾಗುವುದುಎಂದು ಭರವಸೆ ನೀಡಿದರು.

ಬಗರ್ ಹುಕುಂ ಅರ್ಜಿಗಳನ್ನು ಅನರ್ಹಗೊಳಿಸಲು ಕಾರಣವೇನು? ಎಂಬ ಬಗ್ಗೆಯೂ ಮಾಹಿತಿ ನೀಡಿದ ಸಚಿವರು,”ಗೋಮಾಳ ಜಮೀನಿನ ಮಂಜೂರಾತಿಗೆ ಸಂಬಂಧಿಸಿದ ಅರ್ಜಿಗಳನ್ನು ಮಾತ್ರ ಅನರ್ಹಗೊಳಿಸಿಲ್ಲ. ಬದಲಾಗಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಬರುವ ಭೂಮಿಗೂ ಅರ್ಜಿ ಸಲ್ಲಿಸಲಾಗಿದೆ. ಆದರೆ, ಕಾನೂನಿನ ಪ್ರಕಾರ ಸದರಿ ವ್ಯಾಪ್ತಿಯಲ್ಲಿರುವ ಭೂಮಿಯನ್ನು ಬಗರ್ ಹುಕುಂ ಅಡಿಯಲ್ಲಿ ಮಂಜೂರು ಮಾಡಲು ಸಾಧ್ಯವಿಲ್ಲಎಂದು ತಿಳಿಸಿದರು.

 

ಮುಂದುವರೆದು, “ಗೋಮಾಳ ಜಮೀನಿನ ಮಂಜೂರಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಕಟ್ಟುನಿಟ್ಟಿನ ಸೂಚನೆಗಳಿವೆ. ಗೋಮಾಳದಲ್ಲಿ ಹೆಚ್ಚುವರಿ ಜಮೀನಿನ ಲಭ್ಯತೆ ಇದ್ದಲ್ಲಿ ಮಾತ್ರ ಬಗರ್ ಹುಕುಂ ಅರ್ಜಿದಾರರಿಗೆ ಭೂ ಮಂಜೂರು ಮಾಡಬಹುದು. ಜಿಲ್ಲಾಧಿಕಾರಿಗಳ ಘೋಷಣೆಯ ನಂತರ ಮುಂದಿನ ಪ್ರಕ್ರಿಯೆಗಳು ಚಾಲನೆಗೊಳ್ಳುತ್ತವೆ. ಆದರೆ, ಹೆಚ್ಚುವರಿ ಭೂಮಿ ಇಲ್ಲದಿದ್ದರೆ ಗೋಮಾಳ ಜಮೀನಿನ ಮಂಜೂರಾತಿ ಸಾಧ್ಯವಿಲ್ಲ. ಒಂದು ವೇಳೆ ಮಂಜೂರುಗೊಳಿಸಿದರೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ ಎದುರು ನಾವು ತಪ್ಪಿತಸ್ಥರಾಗಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತದೆಎಂದು ಮಾಹಿತಿ ನೀಡಿದರು.

ಬಗರ್ ಹುಕುಂ ದುರುಯೋಗ: ಸಚಿವರು ವಿಷಾದ 

ಬಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಜಾರಿಗೆ ತಂದಿರುವ ಬಗರ್ ಹುಕುಂ ಯೋಜನೆಯನ್ನು ಅನೇಕರು ಉದ್ದೇಶಪೂರ್ವಕವಾಗಿ ದುರುಪಯೋಗಗೊಳಿಸುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಷಾದ ವ್ಯಕ್ತಪಡಿಸಿದರು.

ಕೆಲವರು ಬಗರ್ ಹುಕುಂ ಜಮೀನು ಮಂಜೂರಾತಿಗೆ 25ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ಅರ್ಜಿದಾರರಿಗೆ 2005ಕ್ಕೆ ಕನಿಷ್ಠ 18 ವರ್ಷವಾಗಿರಬೇಕು. ಆದರೆ, ಈಗ 18 ವರ್ಷವಾದವರೂ ಅರ್ಜಿ ಸಲ್ಲಿಸಿದ್ದಾರೆ. ನಮೂನೆ 57ರ ಅಡಿಯಲ್ಲಿ ಒಟ್ಟಾರೆ 9,85,000 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲರಿಗೂ ಜಮೀನು ಮಂಜೂರು ಮಾಡಬೇಕೆಂದರೆ 54 ಲಕ್ಷ ಎಕರೆ ಜಮೀನಿನ ಅಗತ್ಯವಿದೆ. ಆದರೆ, ರಾಜ್ಯದಲ್ಲಿ ಸರ್ಕಾರಿ ಜಮೀನೆ ಅಷ್ಟಿಲ್ಲ.

 

ಅನರ್ಹರಿಗೆ ಭೂ ಮಂಜೂರುಗೊಳಿಸಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹೀಗಾಗಿ ಅನೇಕರ ಅರ್ಜಿಗಳು ಅನರ್ಹಗೊಂಡಿವೆ. ಆದರೆ, ಅರ್ಜಿಗಳನ್ನು ತಿರಸ್ಕೃತಗೊಳಿಸುವ ಸಂದರ್ಭದಲ್ಲಿ ನಿಯಮಗಳನ್ನು ತಪ್ಪಾಗಿ ಅರ್ಥೈಸಿದ್ದರೆ ಖಂಡಿತವಾಗಿ ಪುನರ್ ಪರಿಶೀಲನೆಗೆ ಒಳಪಡಿಸಲಾಗುವುದು ಎಂದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top