ದರ್ಶನ್ ಕೇಸ್ ಬಗ್ಗೆ ರಮ್ಯಾ ರಿಯಾಕ್ಷನ್
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿಯಾಗಿರುವ ದರ್ಶನ್ ಸೇರಿದಂತೆ ಇತರೆ ಏಳು ಮಂದಿಯ ಜಾಮೀನು ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು (ಜುಲೈ 24) ನಡೆದಿತ್ತು. ದರ್ಶನ್, ಪವಿತ್ರಾ ಗೌಡ ಸೇರಿ ಏಳು ಮಂದಿಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಈ ಕೇಸ್‌ನ ವಿಚಾರಣೆ ವೇಳೆ ಹೈಕೋರ್ಟ್ ಜಾಮೀನು ನೀಡಿದ್ದರ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನವನ್ನು ಹೊರ ಹಾಕಿತ್ತು.
ರಾಜ್ಯ ಸರ್ಕಾರದ ಪರ ವಕೀಲರು ಹಾಗೂ ದರ್ಶನ್ ಪರ ವಕೀಲರು ಮಂಡಿಸಿದ ವಾದ ವಿವಾದದ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದಾರೆ. ರೇಣುಕಾಸ್ವಾಮಿ ಆರೋಪಿಗಳ ಜಾಮೀನು ರದ್ದು ಮಾಡುವ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರ ಪೀಠವು ದರ್ಶನ್ ಹಾಗೂ ಉಳಿದ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ್ದಕ್ಕೆ ಅಸಮಾಧಾನ ಹೊರ ಹಾಕುತ್ತಲೇ ಇದೆ. ಇಂದು “ಹೈಕೋರ್ಟ್ ಮಾಡಿದ ತಪ್ಪನ್ನು ತಾನು ಮಾಡುವುದಿಲ್ಲ” ಎಂದು ಹೇಳಿದೆ
ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಗಳ ಅಭಿಪ್ರಾಯವನ್ನು ಹೊರಬೀಳುತ್ತಿದ್ದಂತೆ ಮೋಹಕತಾರೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ಮಾಧ್ಯಮದ ವರದಿಯನ್ನು ಉಲ್ಲೇಖಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, “ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಎದ್ದು ಕಾಣುತ್ತಿದೆ” ಎಂದು ಹೇಳಿಕೊಂಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದ ದಿನಗಳಿಂದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಮೋಹಕತಾರೆ ರಮ್ಯಾ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಅಷ್ಟಕ್ಕೂ ರಮ್ಯಾ ಏನು ಹೇಳಿದ್ದಾರೆಂದು ನೋಡುವುದಾರೇ,
ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಗಳು ವಿಚಾರಣೆ ಬಳಿಕ ಅಸಮಾಧಾನ ವ್ಯಕ್ತಪಡಿಸಿ ನೀಡಿದ ಹೇಳಿಕೆಗಳ ಮಾಧ್ಯಮ ವರದಿಯನ್ನು ಪೋಸ್ಟ್ ಮಾಡಿ “ಸುಪ್ರೀಂ ಕೋರ್ಟ್ ಭಾರತದ ಜನಸಾಮಾನ್ಯರಿಗೆ ಭರವಸೆಯ ಬೆಳಕಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಹಾಗೆ ಕಾಣುತ್ತಿದೆ” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ರಮ್ಯಾ ಬರೆದುಕೊಂಡಿದ್ದಾರೆ. ರಮ್ಯಾ ಪ್ರತಿಕ್ರಿಯೆಗೆ ಕೆಲ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಕೂಡ ದರ್ಶನ್ ಹಾಗೂ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ರಮ್ಯಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಈಗ ಮತ್ತೊಮ್ಮೆ ದರ್ಶನ್ ಕೇಸ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಭಿಪ್ರಾಯವನ್ನು ತಿಳಿದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ದರ್ಶನ್ ಪರ ವಕೀಲರಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೇಳಿದ ಪ್ರಶ್ನೆಗಳು ನಟನನ್ನು ಸಂಕಷ್ಟಕ್ಕೆ ಸಿಲುಕಿಸಬಹುದೆಂಬ ಸುಳಿವು ಸಿಕ್ಕಿದೆ. ಅದರಲ್ಲಿ ರೇಣುಕಾಸ್ವಾಮಿ ಕೇಸ್‌ನಂತೆಯೇ ಇತರ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡುತ್ತದೆಯೇ? ಈ ಪ್ರಕರಣಕ್ಕೆ ಯಾಕಿಷ್ಟು ಗಮನ ಕೊಡಲಾಗುತ್ತಿದೆ? ಈ ಘಟನೆಯೇ ನಂಬಲು ಅರ್ಹ ಅಲ್ಲವೇ? ಇಬ್ಬರು ಪ್ರತ್ಯಕ್ಷದರ್ಶಿಗಳು ನಂಬಲು ಅರ್ಹ ಅಲ್ಲವೇ? ಇಂತಹ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಪ್ರಶ್ನೆ ಮಾಡಿದ್ದಾರೆ.
ರಾಜ್ಯದ ಸರ್ಕಾರದ ಪರ ವಕೀಲರ ವಾದ, ದರ್ಶನ್ ಪರ ವಕೀಲರ ಪ್ರತಿವಾದಗಳನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ವಾದಿಸಿದ್ದಾರೆ.ಇಬ್ಬರಿಗೂ ಮೂರು ಪುಟಗಳ ಲಿಖಿತ ವಾದಾಂಶವನ್ನು ಸಲ್ಲುಸುವಂತೆ ನ್ಯಾಯಾಧೀಶರು ಸೂಚಿನೆ ನೀಡಿದ್ದಾರೆ. ಅಲ್ಲದೆ 10 ದಿನಗಳವರೆಗೂ ದರ್ಶನ್ ಜಾಮೀನು ಅರ್ಜಿಯನ್ನು ಕಾಯ್ದಿರಿಸಿದ್ದಾರೆ. ಹೀಗಾಗಿ ದರ್ಶನ್ ಜಾಮೀನು ರದ್ದಾಗುತ್ತಾ? ಇಲ್ಲಾ ಮುಂದುವರೆಯುತ್ತಾ? ಅನ್ನೋದು 10 ದಿನಗಳ ಬಳಿಕವೇ ಗೊತ್ತಾಗಲಿದೆ. ಇತ್ತ ದರ್ಶನ್ ‘ಡೆವಿಲ್’ ಸಿನಿಮಾದ ಶೂಟಿಂಗ್‌ನಲ್ಲಿ ವಿದೇಶದಲ್ಲಿದ್ದಾರೆ. ಥೈಲ್ಯಾಂಡ್‌ನಲ್ಲಿ ದರ್ಶನ್ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಜುಲೈ 25ಕ್ಕೆ ಭಾರತಕ್ಕೆ ಹಿಂತಿರುಗುವ ಸಾಧ್ಯತೆಯಿದೆ ಎನ್ನಲಾಗಿದ್ದು, ಬಂದ್ಮೇಲೆ ಕಾರ್ಯತಂತ್ರ ರೂಪಿಸುವ ಸಾಧ್ಯತೆಯಿದೆ.