ಪ್ರೊ|| ಸಿಎನ್ಆರ್ ರಾವ್- ಜ್ಞಾನ ಮತ್ತು ಶಕ್ತಿಯ ಕಣಜ

ಬೆಂಗಳೂರು, ಮಾರ್ಚ್ 23 : ಭಾರತ ರತ್ನ ಪ್ರೊ|| ಸಿಎನ್ಆರ್ ರಾವ್ ಜ್ಞಾನ ಮತ್ತು ಶಕ್ತಿಯ ಕಣಜವಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಯುವ ವಿಜ್ಞಾನಿಗಳು ಮಾನವಕುಲಕ್ಕೆ ಒಳಿತಾಗುವಂತಹ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಭಾಭವನದಲ್ಲಿ ಪ್ರೊ|| ಸಿಎನ್ಆರ್ ರಾವ್ ಅವರಿಗೆ ಪ್ರತಿಷ್ಠಿತ ಎನಿ ಎನರ್ಜಿ ಪ್ರಶಸ್ತಿ 2020 ಪ್ರದಾನ ಮಾಡಿ ಮಾತನಾಡಿದರು.

ಅಪ್ರತಿಮ ಸಾಧಕರಾದ ಸಿಎನ್ ಆರ್ ರಾವ್ ಅವರದು ನಿಸ್ವಾರ್ಥ ಸೇವೆ. ಮನುಷ್ಯನ ಭವಿಷ್ಯದ ಜನಾಂಗಕ್ಕೆ ತಮ್ಮ ಜೀವನವನ್ನೇ ಮುಡುಪಿಟ್ಟಿದ್ದಾರೆ. ತಮ್ಮ ವಯಸ್ಸನ್ನು ಮಿತಿಯಾಗಿಸಿಕೊಳ್ಳದೇ ಕಠಿಣ ಸವಾಲುಗಳನ್ನು ಎದುರಿಸಿದವರು. ಶಕ್ತಿಯ ಕೇಂದ್ರವಾಗಿರುವ ಶ್ರೀಯುತರು ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ಪರಿಪೂರ್ಣ ಸಂಯೋಜನೆಯಾಗಿದ್ದಾರೆ. ವಿಜ್ಞಾನದಲ್ಲಿ ಸಂಶೋಧನೆ ನಿರಂತರ. ಮೂಲಭೂತ ವಿಜ್ಞಾನ ಅನ್ವಯಿಕ ವಿಜ್ಞಾನಕ್ಕೆ ಆಧಾರವಾಗಿದೆ. ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಭಾಭವನದಲ್ಲಿ ಮೂಲಭೂತ ವಿಜ್ಞಾನದ ಮೇಲೆ ಸಂಶೋಧನೆಗಳು ಹೆಚ್ಚು ಒತ್ತನ್ನು ನೀಡಲಾಗುತ್ತಿದೆ ಎಂದರು.

ನವೀಕೃತ ಇಂಧನಕ್ಕೆ ಹೆಚ್ಚಿನ ಪ್ರಾಶಸ್ತ್ಯ :
ಈಗಿನ ಕಾಲಮಾನದಲ್ಲಿ ನವೀಕೃತ ಇಂಧನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ಪರಿಸರಸ್ನೇಹಿಯಾದ, ಪ್ರಕೃತಿಯಲ್ಲಿ ಹೇರಳವಾಗಿ ಕಡಿಮೆ ವೆಚ್ಚದಲ್ಲಿ ಪಡೆಯಬಹುದಾಗಿದೆ. ನವೀಕೃತ ಇಂಧನವನ್ನು ವಿವಿಧ ಮಾದರಿಯಲ್ಲಿ ಬಳಕೆಗೆ ದೊರೆಯುವಂತೆ ಮಾಡುವುದು ಒಂದು ಸವಾಲಾಗಿದೆ. ಸೌರಶಕ್ತಿ, ಪವನಶಕ್ತಿ ಸೇರಿದಂತೆ ಯಾವುದೇ ರೀತಿಯ ನವೀಕೃತ ಇಂಧನಗಳ ಸಂಗ್ರಹ ಸವಾಲಾಗಿ ಪರಿಣಮಿಸಿದೆ. ಜಲವಿದ್ಯುತ್ ಯೋಜನೆಗಳಲ್ಲಿ ಸೌರಶಕ್ತಿಯನ್ನು ಬಳಸಲು ಸಂಶೋಧನೆಗೆ ಸರ್ಕಾರ ಪ್ರಾಮುಖ್ಯತೆ ನೀಡುತ್ತಿದೆ. ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಒಂದಕ್ಕೊಂದು ಪೂರಕವಾಗಿರಬೇಕು. ವಿಜ್ಞಾನ ಮಾನವನ ಒಳಿತಿಗೆ ಬಳಕೆಯಾಗಬೇಕೇ ಹೊರತು ವಿನಾಶಕ್ಕೆ ಕಾರಣವಾಗಬಾರದು. ಇಂಧನ ಶಕ್ತಿಗಳ ಸಂಶೋಧನೆ ಹಾಗೂ ಅದರ ಸದ್ಬಳಕೆ ಉತ್ತಮ ರೀತಿಯಲ್ಲಿ ಆಗಬೇಕಿದೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top