ಮೋದಿ ಕಾಲದಲ್ಲಿ ಜನ ಸಂಪದ್ಬರಿತ ಆಗಿದ್ದಾರೆ!

ಬೆಂಗಳೂರು,ಮಾ,23 : ಅಭಿವೃದ್ಧಿ ಪೂರಕ ಚರ್ಚೆ ಮಾಡಲು ಬಿಜೆಪಿಯವರ ಬಳಿ ಸರಕಿಲ್ಲ. ಅದಕ್ಕಾಗಿಯೇ ಅವರು ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು. ವಿಧಾನಸೌಧದ ಬಳಿ ಇಂದು ಮಾಧ್ಯಮಗಳ ಜತೆ ಮಾತನಾಡಿದರು ಅವರು. ಮೂರು ನಾಲ್ಕು ತಿಂಗಳ ಹಿಂದೆಯೇ ನಾನು ಈ ಬಗ್ಗೆ ಹೇಳಿದ್ದೆ. ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಭಾವನಾತ್ಮಕ ವಿಚಾರಗಳನ್ಮು ಸಾರ್ವಜನಿಕವಾಗಿ ತೆಗೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದ್ದೆ. ಅದರಂತೆ ರಾಜ್ಯದಲ್ಲಿ ಅಶಾಂತಿ ವಾತವಾರದ ನಿರ್ಮಾಣ ಮಾಡಲಾಗುತ್ತಿದೆ. ಈಗ ಆರಂಭವಾಗಿದೆ ಅಷ್ಟೇ ಎಂದು ಅವರು ಹೇಳಿದರು. ಅಭಿವೃದ್ಧಿ ಪೂರಕ ಚರ್ಚೆ ಮಾಡುವುದು ಸರಕಾರಕ್ಕೆ ಬೇಕಿಲ್ಲ. ಉತ್ತರ ಭಾರತದ ಚುನಾವಣಾ ವಿಚಾರವನ್ನು ಕರ್ನಾಟಕಕ್ಕೆ ಪರಿಚಯಿಸುವ ಕೆಲಸ ಮಾಡ್ತಿದ್ದಾರೆ ಬಿಜೆಪಿಯವರು. ಮುಂದೆ ಏನೆಲ್ಲಾ ಆಗುತ್ತದೋ ನನಗಂತೂ ಗೊತ್ತಿಲ್ಲ ಎಂದು ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಬರೆದಿದ್ದಾರೆ. ಅವರು ಬರೆದ ಗೀತೆಯನ್ನು ನಾವು ನಾಡಗೀತೆಯಾಗಿ ಅಳವಡಿಸಿಕೊಂಡಿದ್ದೇವೆ. ಇಂಥ ಸರ್ವ ಜನಾಂಗದ ತೋಟಕ್ಕೆ ಕೊಳ್ಳಿ ಇಡುವ ಕೆಲಸ ಆರಂಭವಾಗಿದೆ. ಇವರು ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಕೋಮು ಸಂಘರ್ಷ ಉಂಟು ಮಾಡಲು ಇದೆಲ್ಲ ಮಾಡುತ್ತಿದ್ದಾರೆ. ಕರಾವಳಿಯ ಸಂಘರ್ಷವನ್ನು ಇಡೀ ರಾಜ್ಯಕ್ಕೆ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದರು.

ಮೋದಿ ಕಾಲದಲ್ಲಿ ಜನ ಸಂಪದ್ಭರಿತ ಆಗಿದ್ದಾರೆ!: ಪ್ರಧಾನಿ ಮೋದಿ ಆಡಳಿತದಲ್ಲಿ ಜನ ಸಂಪದ್ಭರಿತರಾಗಿದ್ದಾರೆ. ಹೀಗಾಗಿ ಜನ ಬೆಲೆ ಏರಿಕೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು. ಬಹುಶಃ ಈ ಕಾರಣಕ್ಕೆ ಅವರು ಪ್ರತಿಭಟನೆ ಮಾಡುತ್ತಿಲ್ಲ. ಈಗಲಾದರೂ ಎಲ್ಲರೂ ಎಚ್ಚೆತ್ತು ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕಿದೆ ಎಂದು ಕುಮಾರಸ್ವಾಮಿ ಅವರು ಉತ್ತರ ನೀಡಿದರು. ಜನರು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೇನು ದುರಂತ ಕಾದಿದೆಯೊ ಗೊತ್ತಿಲ್ಲ. ದುರಂತ ಎಂದರೆ ಬೆಲೆ ಏರಿಕೆ ವಿಚಾರ ಜನರಿಗೆ ಬೇಡವಾಗಿದೆ. ನಮ್ಮದು ಕೀರಲು ದನಿಯಾಗಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *

Translate »
Scroll to Top