ಬಳ್ಳಾರಿ: ಬಳ್ಳಾರಿಯ ಅಧಿದೇವತೆ, ಲಕ್ಷಾಂತರ ಭಕ್ತಾದಿಗಳ ಆರಾಧ್ಯ ದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದ `ಸಿಡಿಬಂಡಿ ರಥೋತ್ಸವ’ವು ನಾಳೆ ಫೆ.24ರಂದು ಮಂಗಳವಾರ ಸಂಜೆ 5.30ಕ್ಕೆ ಭಕ್ತ ಸಾಗರದ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀ ದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವ ಕಾರ್ಯಕ್ರಮದಲ್ಲಿ ಬಳ್ಳಾರಿ, ವಿಜಯನಗರ ಜಿಲ್ಲೆಗಳೂ ಸೇರಿದಂತೆ, ರಾಜ್ಯದ ನೆರೆಯ ಜಿಲ್ಲೆಗಳಾದ ಚಿತ್ರದುರ್ಗ, ರಾಯಚೂರು, ಕೊಪ್ಪಳ, ದಾವಣಗೆರೆ, ಹಾಗೂ ನೆರೆಯ ಆಂಧ್ರಪ್ರದೇಶದ ಅವಿಭಜಿತ ಅನಂತಪುರಂ, ಕರ್ನೂಲು ಜಿಲ್ಲೆಗಳ ಮತ್ತು ವಿವಿಧ ರಾಜ್ಯಗಳಿಂದಲೂ ಶ್ರೀ ಕನಕದುರ್ಗಮ್ಮ ದೇವಿಯ ಭಕ್ತ ಸಮೂಹ ಆಗಮಿಸುವ ನಿರೀಕ್ಷೆ ಇದೆ.
ನಾಳೆ ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಭಕ್ತಾದಿಗಳು ಸರದಿಯಲ್ಲಿ ನಿಂತು ಶ್ರೀ`ದೇವಿ’ಯ ದರುಶನ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ದೇವಾಲಯವನ್ನು ವಿದ್ಯುತ್‍ದೀಪಗಳಿಂದ ಅಲಂಕರಿಸಲಾಗಿದೆ. ದುರ್ಗಮ್ಮ ಗುಡಿಯ ರಸ್ತೆ, ಅಂಡರ್‍ಬ್ರಿಡ್ಜ್ ರಸ್ತೆಗಳಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪಗಳು ಝಗಮಗಿಸುತ್ತಿವೆ. ಅಂತೆಯೇ ಮಂಗಳವಾರ ರಾತ್ರಿ ಶ್ರೀ ಕನಕದುರ್ಗಮ್ಮ ದೇವಸ್ಥಾನದ ವತಿಯಿಂದ `ಕಮಸಂ’ ಇಲಾಖೆಯ ಸಹಯೋಗದೊಂದಿಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಬಳ್ಳಾರಿ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ದೇವಸ್ಥಾನದ ಆಡಳಿತ ಅಧಿಕಾರಿಗಳಾದ, ಸಹಾಯಕ ಆಯುಕ್ತ ಹೆಚ್.ಡಿ.ರಾಜೇಶ್ ಸೂಚನೆಯಂತೆ, ಹಿಂ.ಧಾ.ಸಂ.ಧ.ದ ಬಳ್ಳಾರಿಯ ಸಹಾಯಕ ಆಯುಕ್ತರಾದ ಹೆಚ್. ಸವಿತಾ ಅವರಲ್ಲದೇ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಟಿ.ಸೆಲ್ವಮಣಿ, ಮತ್ತಿತರರು ಹಾಗೂ ಸಿಬ್ಬಂದಿ ವತಿಯಿಮದ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.
ಸೋಮವಾರ ಮಧ್ಯರಾತ್ರಿಯಿಂದಲೇ ಶ್ರೀ ಕನಕದುರ್ಗಮ್ಮ ದೇವಾಲಯಕ್ಕೆ ಭಕ್ತಾದಿಗಳು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಾಳೆ ಸಂಜೆ ಸಿಡಿಬಂಡಿ ರಥೋತ್ಸವದಲ್ಲಿ ಲಕ್ಷಾಂತರ ಜನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.
ಪೊಲೀಸ್ ಅಧಿಕಾರಿಗಳು ನಗರದಾದ್ಯಂತ ಬಿಗಿಯಾದ ಭದ್ರತೆ ಏರ್ಪಡಿಸಿದ್ದಾರೆ. ವಾಹನಗಳ ಸಂಚಾರಿ ಮಾರ್ಗವನ್ನೂ ಬದಲಾಯಿಸಲಾಗಿದೆ. ಸಿಡಿಬಂಡಿ ರಥೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಏರ್ಪಾಟು ಮಾಡಲಾಗಿದೆ. ವಿವಿಧೆಡೆ ಸಿಸಿ ಟಿವಿಗಳ ಮತ್ತು ಡ್ರೋನ್‍ಕ್ಯಾಮೆರಾಗಳ ಕಣ್ಗಾವಲನ್ನು ಹಾಕಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.