ಬಳ್ಳಾರಿ: ಆನ್‌ಲೈನ್ ಮೂಲಕ ಮೂಲಭೂತವಾದಿ ಚಟುವಟಿಕೆಗಳಿಗೆ ಪ್ರಚೋದನೆ ನೀಡಿದ ಹಾಗೂ ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬುಧವಾರ ಬಳ್ಳಾರಿಯಲ್ಲಿ ಶೋಧ ಕಾರ್ಯ ನಡೆಸಿದರು.
ನಗರದ ಕೌಲಬಜಾರ್ ಪ್ರದೇಶದಲ್ಲಿರುವ ಅಬ್ದುಲ್ ಸಲಾಮ್ ಅವರ ನಿವಾಸಕ್ಕೆ ಎನ್‌ಐಎ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಪ್ರಕರಣವು ಆಂಧ್ರ ಪ್ರದೇಶದ ಎನ್‌ಟಿಆರ್ ಜಿಲ್ಲೆಯಲ್ಲಿ ದಾಖಲಾಗಿದ್ದು, ಅದರ ತನಿಖೆಯ ಅಂಗವಾಗಿ ಅಧಿಕಾರಿಗಳು ಬಳ್ಳಾರಿಗೆ ಆಗಮಿಸಿದ್ದಾರೆ.
ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೆಹಮತುಲ್ಲ ಷರೀಫ್ ವಿರುದ್ಧ ಆನ್‌ಲೈನ್ ಮೂಲಕ ಮೂಲಭೂತವಾದಿ ವಿಚಾರಧಾರೆಗಳನ್ನು ಹರಡುವುದು ಹಾಗೂ ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ಈತನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇರೆಗೆ ಬಳ್ಳಾರಿ ಮೂಲದ ಅಬ್ದುಲ್ ಸಲಾಮ್ ಅವರನ್ನು ಇದೇ ವರ್ಷದ ಮಾರ್ಚ್ 26ರಂದು ಬಂಧಿಸಲಾಗಿತ್ತು.
ಪ್ರಸ್ತುತ ತನಿಖೆಯ ಮುಂದುವರಿದ ಹಂತವಾಗಿ ಎನ್‌ಐಎ ಅಧಿಕಾರಿಗಳು ಮತ್ತೊಮ್ಮೆ ಅಬ್ದುಲ್ ಸಲಾಮ್ ಅವರ ನಿವಾಸದಲ್ಲಿ ಶೋಧ ನಡೆಸಿದ್ದು, ತನಿಖೆಗೆ ಸಂಬಂಧಿಸಿದ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಕುರಿತು ಎನ್‌ಐಎ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
ಪ್ರಕರಣದ ತನಿಖೆ ಮುಂದುವರಿದಿದ್ದು, ಡಿಜಿಟಲ್ ಸಾಕ್ಷ್ಯಗಳು ಹಾಗೂ ಆರೋಪಿಗಳ ನಡುವಿನ ಸಂಪರ್ಕದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.