ಬೆಂಗಳೂರು : ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತ್ತೊಂದು ಹೊಸ ಏರ್‍ಪೆÇೀರ್ಟ್ ಸ್ಥಾಪನೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಶೀಘ್ರವೇ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ಮೂರು ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ಬಳ್ಳಾರಿ ಜಿಲ್ಲೆಯಲ್ಲಿ ನಿರ್ಮಿಸಲಾಗುವುದು.
ಈ ಸಂಬಂಧ ಶೀಘ್ರವೇ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಮುಂ ದಿನ ಹೆಜ್ಜೆ ಇಡಲಾಗುವುದು ಎಂದು ಕೈಗಾರಿಕೆ ಹಾಗೂ ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ ಶುಕ್ರವಾರ ಮಾಹಿತಿ ನೀಡಿದರು.
ಬಜೆಟ್ ಅಧಿವೇಶನದಲ್ಲಿ ಗಂಗಾವತಿಯ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರು ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಎಂಬಿ ಪಾಟೀಲರು ವಿವರವಾಗಿ ಉತ್ತರಿಸಿದರು. ಬಳ್ಳಾರಿ, ಹೊಸಪೇಟೆ, ಹಂಪೆ, ಆನೆಗೊಂದಿ, ಸಂಡೂರು, ಕೊಪ್ಪಳ, ಕುರುಗೋಡು, ಸಿರಗುಪ್ಪ ಮುಂತಾದ ಭಾಗಗಳಿಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣ ಬರಬೇಕೆಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಬಳ್ಳಾರಿ ಸಮೀಪ 19 ಕಿ.ಮೀ. ದೂರದಲ್ಲಿ ಜಾಗವನ್ನು ಗುರುತಿಸಲಾಗಿದೆ. ಇದು ಕಾರ್ಯಸಾಧು ಎನಿಸಿದರೆ ಎಲ್ಲ ಜನಪ್ರತಿನಿಧಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಂಡು ಪ್ರಕಟಿಸಲಾಗುವುದು. ಬಳ್ಳಾರಿ ವಿಮಾನ ನಿಲ್ದಾಣದಿಂದ ಆ ಜಿಲ್ಲೆಯ ಜತೆಗೆ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಜನರಿಗೂ ಸಂಚಾರಕ್ಕೂ ಪ್ರಯೋಜನ ಆಗಬೇಕು. ಬಳ್ಳಾರಿ ಏರ್‍ಪೆÇೀರ್ಟ್ ನಿಂದ ನೆರೆಯ ಆಂಧ್ರ ಪ್ರದೇಶಕ್ಕೂ ಲಾಭವಾಗಲಿದೆ.
ಈ ಯೋಜನೆಯ ಅನುಷ್ಠಾನಕ್ಕಾಗಿ ಶೀಘ್ರವೇ ಸದರಿ ಮೂರು ಜಿಲ್ಲೆಗಳ ಸಂಬಂಧ ಮೂರೂ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆಯಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಯೋಜನೆಯ ಸಾಧಕ ಬಾಧಕಗಳನ್ನು ಸಮಾಲೋಚಿಸುತ್ತೇವೆ ಎಂದರು.
ಬಳ್ಳಾರಿ ಜಿಲ್ಲೆಯ ಬಹುದಿನಗಳ ಕನಸಾದ ವಿಮಾನ ನಿಲ್ದಾಣ ಯೋಜನೆಗೆ ಹೊಸ ಚಾಲನೆ ಸಿಕ್ಕಿದೆ. ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಅನುಕೂಲವಾಗುವಂತೆ, ಹಂಪಿಯಂತಹ ಪ್ರವಾಸಿ ತಾಣಗಳಿಗೆ ಹತ್ತಿರವಿರುವ ಹೊಸ ಆಯಕಟ್ಟಿನ ಸ್ಥಳವನ್ನು ಸರ್ಕಾರ ಗುರುತಿಸಿದೆ.
ಮೂರು ಜಿಲ್ಲೆಗಳ ಜನರಿಗೆ ಅನುಕೂಲ
ಬಳ್ಳಾರಿ ವಿಜಯನಗರ ಕೊಪ್ಪಳ 3 ಜಿಲ್ಲೆಗಳ ಈ ಭಾಗಗಳಿಂದ ಏರ್‍ಪೆÇೀರ್ಟ್ ದೂರವೆಷ್ಟು? ಈಗ ಹೊಸದಾಗಿ ಗುರುತಿಸಿರುವ ಸ್ಥಳದಿಂದ ಹೊಸಪೇಟೆಗೆ 33 ಕಿ.ಮೀ., ಹಂಪೆಗೆ 26 ಕಿ.ಮೀ, ಸಂಡೂರಿಗೆ 33 ಕಿ.ಮೀ, ಕೊಪ್ಪಳಕ್ಕೆ 75 ಕಿ.ಮೀ, ಕುರುಗೋಡಿಗೆ 14 ಕಿ.ಮೀ, ತೋರಣಗಲ್ಲಿಗೆ 13 ಕಿ.ಮೀ ಮತ್ತು ಸಿರಗುಪ್ಪಕ್ಕೆ 43 ಕಿ.ಮೀ ಆಗಲಿದೆ. ಸದರಿ ಉದ್ದೇಶಿತ ಜಾಗವು ವಿಮಾನ ನಿಲ್ದಾಣಕ್ಕೆ ಎಷ್ಟರ ಮಟ್ಟಿಗೆ ಸೂಕ್ತ ಎನ್ನುವುದನ್ನು ಮುಂದೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ಧರಿಸಲಿದೆ ಎಂದು ಸಚಿವ ಎಂಬಿ ಪಾಟೀಲ ವಿವರಿಸಿದರು.