ಯಾವ ಕಾಯಕವೂ ಮೇಲೂ ಅಲ್ಲ-ಕೀಳೂ ಅಲ್ಲ. ಎಲ್ಲ ಕಾಯಕವೂ ಸಮಾನ ಘನತೆ ಹೊಂದಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಯಾವ ಕಾಯಕವೂ ಮೇಲು ಅಲ್ಲ. ಕೀಳು ಅಲ್ಲ. ಎಲ್ಲ ಕಾಯಕವೂ ಸಮಾನ ಮತ್ತು ಸಮಾನ ಘನತೆ ಹೊಂದಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

 

ಸವಿತಾ ಸಮಾಜ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಲೇಖಕ ಡಾ.ಎಂ.ಎಸ್.ಮುತ್ತುರಾಜ್ ಅವರ ಮಂಗಳವಾದ್ಯ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. 

ನಟರಾಗಿ ಜನಪ್ರಿಯತೆಗಳಿಸಿರುವ  ಎಂ.ಆರ್.ಮುತ್ತೂರಾಜ್ ಅವರು ಬಹುಮುಖ ಪ್ರತಿಭೆ. ವೃತ್ತಿ ಘನತೆಯನ್ನು ಕಾಪಾಡುವ ವ್ಯಕ್ತಿತ್ವ. ಇವರು ಕಾಯಕ ಜೀವಿ. ಪ್ರತಿಯೊಬ್ಬರೂ ಘನತೆಯಿಂದ ಕಾಯಕ ಮಾಡಬೇಕು. ಇದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಕೈಲಾಸ, ಸ್ವರ್ಗ, ನರಕ ಎನ್ನುವುದು ಬೇರೆಲ್ಲೂ ಇಲ್ಲ. ಎಲ್ಲವೂ ಇಲ್ಲೇ ಇದೆ ಎಂದರು.

 

ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಬಸವಣ್ಣನವರು ಹೇಳಿದ್ದು ಈ ಕಾರಣಕ್ಕೇ. ಪರಸ್ಪರ ಮನುಷ್ಯರನ್ನು ಮನುಷ್ಯರು ಗೌರವಿಸುವುದೇ ದೊಡ್ಡ ಮೌಲ್ಯ. ಮನುಷ್ಯ ದ್ವೇಷಕ್ಕಿಂತ ಕೆಟ್ಟ ಮೌಲ್ಯ ಬೇರೆ ಇಲ್ಲ. ಅದಕ್ಕೇ ರಾಷ್ಟ್ರಕವಿ ಕುವೆಂಪು ಅವರು “ಸರ್ವ ಜನಾಂಗದ ಶಾಂತಿಯ ತೋಟ”  ಎಂದು ಕರೆದಿದ್ದಾರೆ ಎಂದು ವಿವರಿಸಿದರು. 

ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ ಮುಸ್ಲೀಮರನ್ನು, ದಲಿತರನ್ನು, ಶೂದ್ರರನ್ನು, ಶ್ರಮಿಕ‌ ವರ್ಗದವರನ್ನು ದ್ವೇಷಿಸುವುದು ಅತ್ಯಂತ ಅಮಾನವೀಯವಾದ, ಕೆಟ್ಟ ನಡವಳಿಕೆ ಎಂದರು.

ಜನರಿಗೆ ಅರ್ಥ ಆಗುವ ರೀತಿಯಲ್ಲಿ ಸರಳವಾದ ಜನರ ಭಾಷೆಯಲ್ಲಿ ಮನುಷ್ಯನ ಮೌಲ್ಯಗಳನ್ನು ಬಸವಾದಿ ಶರಣರು ಹೇಳಿದ್ದಾರೆ ಎಂದರು.

ನಾರಾಯಣ ಗುರುಗಳು, ಒಂದೇ ಜಾತಿ-ಒಂದೇ ಮತ-ಒಂದೇ ದೇವರು ಎಂದರು. ಕನಕದಾಸರು ಮತ್ತು ಬಸವಾದಿ ಶರಣರು ಹೇಳಿದ್ದೂ ಇದೇ ಮೌಲ್ಯ ಎಂದರು.

 

ನಿಮ್ಮನ್ನು ಯಾವ ದೇವಸ್ಥಾನಕ್ಕೆ ಒಳಗೆ ಬಿಡುವುದಿಲ್ಲವೋ ಆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಿ ನೀವೇ ದೇವಸ್ಥಾನ ಕಟ್ಟಿ ನೀವೇ ಪೂಜೆ ಮಾಡಿ ಎಂದು ನಾರಾಯಣಗುರುಗಳು ಹೇಳಿದ್ದಾರೆ. ಇದನ್ನು ಪಾಲಿಸಿ ಎಂದರು. 

ದೇವರಿದ್ದಾನೆ. ಆದರೆ ದೇವರು ದೇವಸ್ಥಾನದಲ್ಲಿ ಮಾತ್ರ ಇದ್ದಾನೆ ಎನ್ನುವುದು ಸರಿಯಲ್ಲ. ಎಲ್ಲಾ ಕಡೆಯೂ ದೇವರಿದ್ದಾನೆ. ಅದಕ್ಕೇ ಶರಣರು, “ಉಳ್ಳವರು ದೇವಸ್ಥಾನವ ಮಾಡುವರು. ನಾನೇನು ಮಾಡಲಯ್ಯ ಬಡವ” ಎಂದಿದ್ದಾರೆ ಎಂದು ವಚನಗಳನ್ನು ಉದಾಹರಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವ ಎಚ್.ಎಂ.ರೇವಣ್ಣ, ಪ್ರಗತಿಪರ ಚಿಂತಕ ಎಲ್.ಮುಕುಂದರಾಜ್ ಮತ್ತು ಸವಿತ ಸಮಾಜದ ಅಧ್ಯಕ್ಷರಾದ ಕಿರಣ್ ಕುಮಾರ್ ಅವರು ಉಪಸ್ಥಿತರಿದ್ದರು.

ಕೊನೆಯವರೆಗೂ ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ರಾಜಕಾರಣ ಮಾಡ್ತೀನಿ

 

ನಾನು ಕೊನೆಯವರೆಗೂ ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ರಾಜಕಾರಣ ಮಾಡ್ತೀನಿ. ನಾವು ರೂಪಿಸುವ ಕಾರ್ಯಕ್ರಮಗಳೂ ಬಡವರ ಪರವಾಗಿ ಇರುತ್ತವೆ. ನಮ್ಮ‌ ಕಾರ್ಯಕ್ರಮಗಳು ಮನೆ ಮನೆ ತಲುಪಿವೆ. ಬಿಜೆಪಿಯವರ ಟೀಕೆಗೆ ಜನ ಬೆಲೆ ಕೊಡಲ್ಲ. ನಾನೂ ಕೊಡಲ್ಲ. ನಾಡಿನ ಜನ ನಮ್ಮ ಜತೆಗಿದ್ದಾರೆ ಎಂದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top