ಬಳ್ಳಾರಿ: ತಮಗೂ ಹಾಗೂ ತಮ್ಮ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಎದುರಾಗಿದೆ ಎಂದು ತಿಳಿಸಿ, ಗಂಗಾವತಿ ಶಾಸಕರಾದ ಗಾಲಿ ಜನಾರ್ದನರೆಡ್ಡಿಯವರು ಝಡ್ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರತ್ಯೇಕವಾಗಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ಸಂಬAಧ ನಡೆದ ಗಲಾಟೆ ಮತ್ತು ಫೈರಿಂಗ್ ಪ್ರಕರಣಗಳ ಹಿನ್ನೆಲೆಯಲ್ಲಿ ತಮ್ಮ ಮನೆಯ ಮೇಲೆ ದಾಳಿ ನಡೆಸುವ ಸಂಚು ನಡೆದಿತ್ತೆಂದು ಆರೋಪಿಸಿ, ಶಾಸಕ ಜನಾರ್ದನರೆಡ್ಡಿಯವರು ಈ ಸಂಬAಧ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಾಗೂ ರಾಜ್ಯದ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಡಾ|| ಜಿ.ಪರಮೇಶ್ವರ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರಿಗೆ ಪ್ರತ್ಯೇಕವಾಗಿ ಮನವಿ ಪತ್ರಗಳನ್ನು ಕಳುಹಿಸಿದ್ದಾರೆ.
ಪತ್ರದಲ್ಲಿ ಉಲ್ಲೇಖಿಸಿರುವಂತೆ, ಜ.1ರಂದು ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಕಾಂಗ್ರೆಸ್ ಶಾಸಕ ನಾರಾ ಭರತರೆಡ್ಡಿ ಮತ್ತು ಆತನ ಬೆಂಬಲಿಗರು ದಾಳಿ ನಡೆಸಿದ್ದಾರೆ ಎಂದು ಗಾಲಿ ಜನಾರ್ದನರೆಡ್ಡಿ ಆರೋಪಿಸಿದ್ದಾರೆ. ಅಂದು ನಡೆದ ಘಟನೆ ಪೂರ್ವ ನಿಯೋಜಿತ ಷಡ್ಯಂತ್ರವಾಗಿದ್ದು, ತಮ್ಮನ್ನು ಕೊಲೆ ಮಾಡುವ ಉದ್ದೇಶದಿಂದಲೇ ಮನೆಯ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆದಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ದಾಳಿಯಿಂದಾಗಿ ತಮ್ಮ ಜೀವಕ್ಕೆ ಮಾತ್ರವಲ್ಲದೆ ಕುಟುಂಬದ ಸದಸ್ಯರಿಗೂ ತೀವ್ರ ಅಪಾಯ ಎದುರಾಗಿದೆ ಎಂದು ರೆಡ್ಡಿ ತಿಳಿಸಿದ್ದಾರೆ. ಶಾಸಕರಿಂದಲೇ ಈ ರೀತಿಯ ಅಪಾಯ ಇರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಹಿಂಸಾತ್ಮಕ ಘಟನೆಗಳು ನಡೆಯುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಯಾವುದೇ ಅಹಿತಕರ ಘಟನೆ ಸಂಭವಿಸುವ ಮುನ್ನ ತಕ್ಷಣವೇ ಝಡ್ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿ, ತಮ್ಮ ಕುಟುಂಬಕ್ಕೆ ಸಂಪೂರ್ಣ ರಕ್ಷಣೆ ನೀಡುವಂತೆ ಅವರು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಝಡ್ ಪ್ಲಸ್ ಭದ್ರತೆಗೆ ಮನವಿ ಮಾಡಿದ ಶಾಸಕ ಜನಾರ್ದನ ರೆಡ್ಡಿ



