ಸರ್ಕಾರದ ಯೋಜನೆಗಳು ಕಾಲ ಮಿತಿಯೊಳಗೆ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸಚಿವ ನಾಗೇಂದ್ರ ತಾಕೀತು

ಬಳ್ಳಾರಿ: ಸರ್ಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು, ವಿನಾಕಾರಣ ಅಧಿಕಾರಿಗಳು ವಿಳಂಬ ಮಾಡುವಂತಿಲ್ಲ; ಬಾಕಿಯಿರುವ ನಿಗದಿತ ಗುರಿಯನ್ನು ಕಾಲ ಮಿತಿಯೊಳಗೆ ಸಾಧಿಸಲು ಒತ್ತು ನೀಡಬೇಕು ಎಂದು ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಸೂಚಿಸಿದರು.

      ನಗರದ ಜಿಲ್ಲಾ ಪಂಚಾಯತ್ ನ ನಜೀರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

     ಸರ್ಕಾರದ ಯೋಜನೆಗಳು ಜಿಲ್ಲೆಯಲ್ಲಿ ಕಾರ್ಯಗತಗೊಳಿಸಲು, ಯೋಜನೆಗಳ ಮಾಹಿತಿಯ ಬಗ್ಗೆ ಜನಸಾಮಾನ್ಯರಿಗೂ ತಿಳಿಸಲು ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

     ಮುಂಗಾರು ಹಂಗಾಮು ಸಂದರ್ಭದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇನ್ನೀತರ ಕೃಷಿ ಸಂಬಂಧಿತ ಸಮಸ್ಯೆಗಳು ತಲೆದೋರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ರೈತರು ಬೆಳೆದ ಬೆಳೆಗೆ ಬೆಳೆ ವಿಮೆ ಮಾಡಿಸುವಂತೆ ಪ್ರೇರೆಪಿಸಬೇಕು. ಪ್ರಕೃತಿ ವಿಕೋಪದಿಂದ ಅನಿರೀಕ್ಷಿತ ಹಾನಿಗಳಾದಾಗ ರೈತರನ್ನು ಬೆಳೆ ವಿಮೆ ಕಾಪಾಡಲು ಸಾಧ್ಯವಾಗುತ್ತದೆ ಎಂದರು.

 

    ಗ್ರಾಮೀಣ ಭಾಗದಲ್ಲಿ ರೈತರ ಬಣವೆಗಳು ಅನಿರೀಕ್ಷಿತವಾಗಿ ಬೆಂಕಿಗೆ ಆಹುತಿಯಾದಾಗ ಸರಕಾರವು ನೀಡುವ ಪರಿಹಾರ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಒಮ್ಮೆ ಬೆಂಕಿಗೆ ಆಹುತಿಯಾದ ಮೇವು ದನ ಕರುಗಳು ತಿನ್ನುವುದಿಲ್ಲ;ಎಷ್ಟು ಬೆಂಕಿಗೆ ಆಹುತಿಯಾಗಿರುತ್ತೋ ಅಷ್ಟೇ ಪ್ರಮಾಣದ ಮೇವಿಗೆ ಪರಿಹಾರ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದು ಸಚಿವರು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

     ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಗ್ರಾಮಗಳಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿನ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.

 

          ವಿವಿಧ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ ಕೊಳವೆ ಬಾವಿ ಕೊರೆಸುವಿಕೆಗೆ ಸಂಬಂಧಿಸಿದಂತೆ ಬಾಕಿಯಿದ್ದ ಗುರಿಗಳನ್ನು ತ್ವರತಗತಿಯಲ್ಲಿ ಪೂರ್ಣಗೊಳಿಸಬೇಕು; ಗುಣಮಟ್ಟದ ಮೋಟಾರ್ ಪಂಪ್ ಅಳವಡಿಸಬೇಕು. ಎಲ್ಲ ರೈತರ ಪಂಪ್ ಸೆಟ್ ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವುದು ಗುರಿಯಾಗಿದ್ದು, ಆ ನಿಟ್ಟಿನಲ್ಲಿ ವಿದ್ಯುತ್ ಪೂರೈಕೆಗೆ ಜೆಸ್ಕಾಂ ಅಧಿಕಾರಿಗಳು ಕ್ರಮವಹಿಸಿ ಎಂದು ಸಚಿವರು ಸೂಚಿಸಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ಪ್ರತಿ ತಾಲೂಕಿನಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಸೂಪರ್ ಬಜಾರ್ ಮಳಿಗೆಗಳನ್ನು ಸ್ಥಾಪಿಸಲು ಬೇಡಿಕೆಯಿದ್ದು, ಜಿಲ್ಲಾ ಖನಿಜ ನಿಧಿಯಿಂದ ೩೦ ರಿಂದ ೪೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಕ್ರಮ ವಹಿಸಲಾಗುವುದು. ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳನ್ನು ಮುಖ್ಯ ವಾಹಿನಿಗೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ಹೊಂದುವಂತೆ ಸಚಿವರು ತಿಳಿಸಿದರು.

 

     ಬಳ್ಳಾರಿ ಗ್ರಾಮೀಣ ವ್ಯಾಪ್ತಿಯ ಮೋಕಾ ಕೆರೆಯು ಶಿಥಿಲಗೊಳ್ಳುತ್ತಿದ್ದು, ಸುತ್ತಲಿನ ಕೃಷಿ ಭೂಮಿಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ, ನೀರನ್ನು ತಡೆಹಿಡಿದು ಬೇರೆಡೆಗೆ ಹರಿಸುವ ಮಾರ್ಗ ಹೊಂದಬೇಕು ಎಂದು ಸೂಚಿಸಿದರು.

      ಸಭೆಯಲ್ಲಿ ನೀರಾವರಿ, ಕೈಗಾರಿಕೆ, ಮೀನುಗಾರಿಕೆ, ನೀರು ಸರಬರಾಜು, ಆರೋಗ್ಯ ಇಲಾಖೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಸಚಿವರು ಸುದೀರ್ಘವಾಗಿ ಚರ್ಚಿಸಿದರು ಮತ್ತು ಅಧಿಕಾರಿಗಳಿಗೆ ಅಗತ್ಯ-ಸಲಹೆ ಸೂಚನೆಗಳನ್ನು ನೀಡಿದರು.

     ಈ ಸಂದರ್ಭದಲ್ಲಿ ಶಾಸಕರಾದ ಬಿ.ಎಂ.ನಾಗರಾಜ್, ನಾರಾ ಭರತ್ ರೆಡ್ಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ತ್ರಿಲೋಕ ಚಂದ್ರ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಎಸ್ಪಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಸಭೆಯಿಂದ ಹೊರನಡೆದ ಎಂಎಲ್‌ಸಿ

 

ಸಚಿವ ನಾಗೇಂದ್ರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಕೆಡಿಪಿ ಸಭೆಗೆ ಸರಿಯಾದ ಸಮಯಕ್ಕೆ ಆಗಮಿಸಿದ್ದ ಎಂಎಲ್‌ಸಿ ವೈ.ಎಂ.ಸತೀಶ್ ಅವರು ಕಾದು ಕಾದು ಕೊನೆಗೆ ಸಭೆ ತಡವಾಗಿದ್ದರಿಂದ ಬೇಸರಗೊಂಡು ಸಭೆಯಿಂದ ಹೊರ ನಡೆದ ಘಟನೆ ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣದಲ್ಲಿ ನಡೆದಿದೆ. ಕಳೆದ 2022ರ ಏಪ್ರಿಲ್ 1 ರಿಂದ 2023ರ ಮಾರ್ಚ್ 31ರವರೆಗಿನ 4ನೇ ತ್ರೈಮಾಸಿಕ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆ ಇದಾಗಿದ್ದು, ಬಹುತೇಕ ಅಧಿಕಾರಿಗಳು ಭಾಗವಹಿಸಿದ್ದರು. ಸಚಿವ ಬಿ.ನಾಗೇಂದ್ರ ಅವರು ಒಂದೂವರೆ ಗಂಟೆ ತಡವಾಗಿ ಬಂದಿದ್ದರಿಂದ ಅನಿವಾರ್ಯವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಕಾದು ಕುಳಿತುಕೊಳ್ಳಬೇಕಾಯಿತು. 

Facebook
Twitter
LinkedIn
Telegram
WhatsApp
Email

Leave a Comment

Your email address will not be published. Required fields are marked *

Translate »
Scroll to Top