ಬೆಂಗಳೂರು : ಗ್ರಾಮಸಭೆ, ಶಾಸಕರ ಸಮಿತಿ ಅಂತಿಮಗೊಳಿಸಬೇಕಾಗಿದೆ 2.90 ಫಲಾನುಭವಿಗಳ ಆಯ್ಕೆ ಪ್ರಧಾನಮಂತ್ರಿ ಗ್ರಾಮೀಣ ಅವಾಜ್ ಯೋಜನೆಯಡಿ ಗ್ರಾಮೀಣ ಭಾಗದ ವಸತಿ ರಹಿತರಿಗೆ ಮನೆ ಕಟ್ಟಿಸಿಕೊಡುವ ಯೋಜನೆಗೆ ಗ್ರಾಮಸಭೆಗಳಿಂದ ಒಂದು ವಾರದಲ್ಲಿ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿ ಕಳುಹಿಸುವಂತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ನಿರ್ದೇಶನ ನೀಡಿದ್ದಾರೆ.
ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ರಾಜ್ಯಕ್ಕೆ 1.41 ಲಕ್ಷ ಮನೆ ಹಂಚಿಕೆ ಯಾಗಿದ್ದು ಇದುವರೆಗೂ 63 ಸಾವಿರ ಮನೆಗೆ ಫಲಾನುಭವಿಗಳ ಆಯ್ಕೆ ಯಾಗಿದ್ದು ಉಳಿದ 78 ಸಾವಿರ ಮನೆಗಳಿಗೆ ಫಲಾನುಭವಿಗಳ ಆಯ್ಕೆ ಮಾಡಬೇಕಾಗಿದೆ. ಸಂಬಂಧಪಟ್ಟ ಶಾಸಕರು ಈ ಬಗ್ಗೆ ಗಮನಹರಿಸಿ ತಕ್ಷಣ ಗ್ರಾಮ ಸಭೆಗಳಿಂದ ಫಲಾನುಭವಿಗಳ ಪಟ್ಟಿ ಅಂತಿಮ ಗೊಳಿಸಲು ಖುದ್ದು ಆಸಕ್ತಿ ವಹಿಸಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಯೋಜನೆಯ ಫಲಾನುಭವಿಗಳ ಆಯ್ಕೆಗೆ ಎರಡು ಬಾರಿ ಗಡುವು ವಿಸ್ತರಣೆ ಮಾಡಿದ್ದರೂ ಪಟ್ಟಿ ನೀಡಿಲ್ಲ. ಇದೀಗ ಜುಲೈ 20 ಕ್ಕೆ ಪಟ್ಟಿ ಅಂತಿಮಗೊಳಿಸಲು ಡೆಡ್ ಲೈನ್ ನೀಡಲಾಗಿದೆ. ಹೀಗಾಗಿ ಇದುವರೆಗೆ ಪಟ್ಟಿ ಅಂತಿಮ ಗೊಳಿಸದ ಶಾಸಕರು ಕೂಡಲೇ ಕ್ರಮ ವಹಿಸಬೇಕು. ಇಲ್ಲದಿದ್ದರೆ ಯೋಜನೆಕೇಂದ್ರಕ್ಕೆ ವಾಪಸ್ ಹೋಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ವಸತಿ ರಹಿತರ ಪಟ್ಟಿ ಸಿದ್ದಪಡಿಸಿ ಯೋಜನೆಗೆ ಅರ್ಹತೆ ಪಡೆದಿರುವವರನ್ನು ಗುರುತಿಸಲಾಗಿದೆ. ಅ ಪಟ್ಟಿಯಲ್ಲಿ ಹಂಚಿಕೆಗೆ ನಿಗದಿಯಾಗಿರುವ ಮನೆಗಳ ಸಂಖ್ಯೆಯಷ್ಟು ಫಲಾನುಭವಿಗಳ ಆಯ್ಕೆ ಆಗಬೇಕಾಗಿದೆ. ಗ್ರಾಮಸಭೆ ಗಳಿಗೆ ಈ ಕುರಿತು ಶಾಸಕರು ಸೂಚನೆ ನೀಡಿ ಒಂದು ವಾರದಲ್ಲಿ ಪಟ್ಟಿ ಅಂತಿಮ ಗೊಳಿಸಿದರೆ ಯೋಜನೆಯ ಲಾಭ ರಾಜ್ಯದ ವಸತಿ ರಹಿತರಿಗೆ ಸಿಗುತ್ತದೆ. ಆನ್ ಲೈನ್ ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.
ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 60:40 ಅನುದಾನ ನೀಡಲಿದೆ. ಸಾಮಾನ್ಯ ವರ್ಗಕ್ಕೆ ಒಂದು ಲಕ್ಷದ ಮೂರು ಸಾವಿರ ರೂ. ಎಸ್ಸಿ ಎಸ್ಟಿ ಸಮುದಾಯಕ್ಕೆ ಒಂದು ಲಕ್ಷ ಇಪ್ಪತ್ತು ಸಾವಿರ ರೂ. ಸಬ್ಸಿಡಿ ಸಿಗಲಿದ್ದು, 150 ರಿಂದ 700 ಚದರಡಿವರೆಗೆ ವೈಯಕ್ತಿಕ ಮನೆ ನಿರ್ಮಾಣ ಮಾಡಿ ಕೊಡಲಾಗುವುದು ಎಂದು ಸಚಿವ ಜಮೀರ್ ಅಹಮದ್ ಖಾನ್ ಮಾಹಿತಿ ನೀಡಿದ್ದಾರೆ. ಗ್ರಾಮೀಣ ವಸತಿ ಯೋಜನೆ ಅಷ್ಟೇ ಅಲ್ಲದೆ ನಗರ ಪ್ರದೇಶದ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆ ಶಾಸಕರ ಸಮಿತಿ ಮಾಡಬೇಕಿದ್ದು, ನಗರ ಮತ್ತು ಗ್ರಾಮೀಣ ಸೇರಿ ವಿವಿಧ ಯೋಜನೆ ಗಳಲ್ಲಿ 2,90,878 ಫಲಾನುಭವಿಗಳ ಆಯ್ಕೆ ಮಾಡಬೇಕಾಗಿದೆ. ಅ ಬಗ್ಗೆಯೂ ಶಾಸಕರಿಗೆ ಮನವಿ ಮಾಡಲಾಗಿದೆ. ಶಾಸಕರು ಫಲಾನುಭವಿಗಳ ಆಯ್ಕೆ ಪಟ್ಟಿ ಕೊಟ್ಟ ತಕ್ಷಣ ಹಂಚಿಕೆ ಹಾಗೂ ಇತರೆ ಪ್ರಕ್ರಿಯೆ ನೆಡೆಸಲಾಗುವುದು.