ಮದರಸಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್  ಶಿಕ್ಷಣಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ

ಬೆಂಗಳೂರು :ಮದರಸಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ವಿಜ್ಞಾನ, ಗಣಿತ ವಿಷಯಗಳನ್ನು ಕಲಿಸಲು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮದರಸಗಳಲ್ಲಿ ಪ್ರಮುಖವಾಗಿ ಕನ್ನಡ ಕಡ್ಡಾಯವಾಗಿ ಕಲಿಸಲೇಬೇಕು. ಉಳಿದಂತೆ ಇಂಗ್ಲಿಷ್ ಸೇರಿ ಇತರೆ ಭಾಷೆ ಕಲಿಸಲು ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

 

ರಾಜ್ಯದಲ್ಲಿ 1265 ವಖ್ಫ್ ಮಂಡಳಿಯಲ್ಲಿ ನೋಂದಣಿ ಯಾದ ಮದರಸಗಳಿದ್ದು ಆ ಪೈಕಿ 100 ಮದರಸಗಳ ಐದು ಸಾವಿರ ಮಕ್ಕಳಿಗೆ ಈ ವರ್ಷದಿಂದಲೇ ಪ್ರಾಯೋಗಿಕವಾಗಿ ಕಲಿಕೆ ಆರಂಭಿಸಿ. ಮುಂದಿನ ವರ್ಷದಿಂದ ಎಲ್ಲ ಮದರಸಗಳಲ್ಲಿ ಆರಂಭಿಸಲು ಪ್ರಸ್ತಾವನೆ ಸಿದ್ದಪಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮದರಸಗಳಲ್ಲಿ ಕನ್ನಡ, ಇಂಗ್ಲಿಷ್ ಸೇರಿ ಇತರೆ ವಿಷಯ ಕಲಿಕೆಯಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ಭವಿಷ್ಯ ದಲ್ಲಿ  ಉತ್ತಮ ಅವಕಾಶ ಸಿಗಲಿದೆ ಎಂದು ಹೇಳಿದರು.

ಅಲ್ಪಸಂಖ್ಯಾತರ ನಿರ್ದೇಶನಾಲಯ ವ್ಯಾಪ್ತಿಯಡಿ ವಿದೇಶದಲ್ಲಿ ವ್ಯಾಸಂಗ ಮಾಡಲು ನೀಡುವ ಪ್ರೋತ್ಸಾಹ ಧನ ಮೊತ್ತ 20 ಲಕ್ಷ ರೂ. ನಿಂದ 30 ಲಕ್ಷ ರೂ. ಗಳಿಗೆ ಹೆಚ್ಚಿಸಲು ಹಾಗೂ ಐ ಐ ಟಿ, ಎನ್ ಐ ಟಿ ಸೇರಿದಂತೆ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಲಿ ನೀಡುತ್ತಿರುವ ಎರಡು ಲಕ್ಷ ರೂ. ಪ್ರೋತ್ಸಾಹ ಧನ ಮೊತ್ತ ನಾಲ್ಕು ಲಕ್ಷ ರೂ. ಗಳಿಗೆ ಹೆಚ್ಚಿಸಲು ಇದೇ ಸಂದರ್ಭದಲ್ಲಿ ಸಚಿವರು ಸೂಚಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜು ಮತ್ತು ಮೌಲಾನಾ ಅಜಾದ್ ಮಾದಾರಿ ಶಾಲೆಗಳ 9,10 ಹಾಗೂ 12 ನೇ ತರಗತಿಯ ಒಂದು ಲಕ್ಷ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಿಸಲು ಸಿದ್ದಪಡಿಸಿರುವ ವಿಜ್ಞಾನ ಮತ್ತು ಗಣಿತ ಸೇರಿದಂತೆ ವಿವಿಧ ವಿಷಯಗಳ ಕೈಪಿಡಿ ಹಾಗೂ ನಿರ್ದೇಶನಾಲಯದ ಯೋಜನೆಗಳ ಕೈಪಿಡಿಯನ್ನು ಸಚಿವರು ಇದೇ ವೇಳೆ ಬಿಡುಗಡೆ ಮಾಡಿದರು.

 

ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶನಾಲಯ ನಿರ್ದೇಶಕ ಜಿಲಾನಿ ಮೊಕಾಶಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ  ಮೊಹಮ್ಮದ್ ನಜೀರ್, ವಖ್ಫ್ ಮಂಡಳಿ ಕಾರ್ಯನಿರ್ವಾಹಕ ಖಾನ್ ಫರ್ವಜ್ ಉಪಸ್ಥಿತರಿದ್ದರು.

ಕಳೆದ ಎರಡು ವರ್ಷಗಳಲ್ಲಿ ಅಲ್ಪಸಂಖ್ಯಾತ ನಿರ್ದೇಶನಾಲಯ ವತಿಯಿಂದ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಲ್ಪಸಂಖ್ಯಾತರ ಕಾಲೋನಿ ಗಳ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು. ಎಷ್ಟು ಮೊತ್ತದ ಕಾಮಗಾರಿ ಕೈಗೊಳ್ಳಲಾಗಿದೆ, ಎಷ್ಟು ಮೊತ್ತ ಪಾವತಿಗೆ ಬಾಕಿ ಇದೆ, ಕಾಮಗಾರಿ ಪ್ರಮಾಣ, ಗುತ್ತಿಗೆ ದಾರರಿಗೆ ಪಾವತಿಸಿರುವ ಮೊತ್ತ ಕುರಿತು ಸಮಗ್ರ ವರದಿ ನೀಡುವಂತೆ ಸಚಿವರು ಸೂಚನೆ ನೀಡಿದರು.

 

ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ  9,10 ಹಾಗೂ 12 ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಿಸಲು ಸಿದ್ದಪಡಿಸಿರುವ ವಿಜ್ಞಾನ ಮತ್ತು ಗಣಿತ ಸೇರಿದಂತೆ ವಿವಿಧ ವಿಷಯಗಳ ಕೈಪಿಡಿಯಲ್ಲಿ ಪ್ರತಿ ವಿಷಯದ ಬಗ್ಗೆ ಕ್ಯೂ ಆರ್ ಕೋಡ್ ಸಹ ಮುದ್ರಿಸಿದ್ದು ವಿದ್ಯಾರ್ಥಿಗಳಿಗೆ ಯಾವುದಾದರೂ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಕ್ಯೂ ಆರ್ ಕೋಡ್ ಸ್ಕಾನ್ ಮಾಡಿದರೆ ವಿಡಿಯೋ ಸಮೇತ ಮಾಹಿತಿ ಲಭ್ಯ ವಾಗಲಿದೆ.

Facebook
Twitter
LinkedIn
Telegram
Pocket
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top