ಸತ್ಯ ಹೇಳಿದರೆ ದ್ವೇಷದ ರಾಜಕಾರಣ ಆಗುತ್ತದೆಯಾ ದೇವೇಗೌಡರ ಪ್ರಶ್ನೆ

ಬೆಂಗಳೂರು: ಕುಮಾರಸ್ವಾಮಿ ಅವರು ಯಾರಿಗೂ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ ಹಾಗೂ ಅವರನ್ನು ಜೀರ್ಣಿಸಿಕೊಳ್ಳುವುದು ಸುಲಭ ಸಾಧ್ಯವೂ ಅಲ್ಲ ಎಂದು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಮಾರ್ಮಿಕವಾಗಿ ನುಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಜತೆ ಅವರು ಮಾತನಾಡಿದರು.

ತಮ್ಮ ಮಾತಿನುದ್ದಕ್ಕೂ ರಾಜ್ಯ ಕಾಂಗ್ರೆಸ್ ಸರಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು; “ನಾನು ಮನೆಯಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದೇನೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪೆನ್ ಡ್ರೈವ್ ವಾದ, ವಿವಾದ  ನೋಡಿದ್ದೇನೆ. ಅವರು ಅಷ್ಟು ಸುಲಭವಾಗಿ ಮಾತನಾಡುವುದಿಲ್ಲ. ಆ ವಿಷಯದ ಬಗ್ಗೆ ಟೀಕೆ ಮಾಡುವವರಿಗೆ ಅದು ತಿಳಿದಿರಲಿ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

 

 

ರಾಮನಗರದಿಂದ ಕನಕಪುರಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ಕುಮಾರಸ್ವಾಮಿ ಅವರು ದೇವೇಗೌಡರ ಮಗ ಎಂದು ಮಾತನಾಡುವುದಿಲ್ಲ. ನನಗೆ ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಎಲ್ಲವೂ ಒಂದೇ. ಆದರೆ ರಾಮನಗರ ಜಿಲ್ಲೆ ಮಾಡಿದ್ದು ಯಾರು? ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನನ್ನನ್ನು  ಸೋಲಿಸಬೇಕೆಂದು ಪ್ರಯತ್ನ ಮಾಡಿದರು. ಸತ್ಯ ಹೇಳಿ? ಆದರೆ, ಅಂದೇ ರಾಮನಗರ ಜಿಲ್ಲೆ ಮಾಡಲು ಅವರಿಗೆ ಆಗ್ತಿರಲಿಲ್ವಾ? ಕುಮಾರಸ್ವಾಮಿಯವರೇ ಬಂದು ರಾಮನಗರವನ್ನು ಜಿಲ್ಲೆ ಮಾಡಬೇಕಿತ್ತಾ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

 ಅಂದು ಮೆಡಿಕಲ್ ಕಾಲೇಜು ಮಂಜೂರು ಆಗಿದ್ದು ಎಲ್ಲಿ? ಜಾಗ ಮಂಜೂರು ಆಗಿದ್ದು ಎಲ್ಲಿ? ಮಾಯಗೊಂಡನಹಳ್ಳಿ ಬಳಿ 9 ಎಕರೆ ಬಗ್ಗೆ ಕೆಲವರು ತಕರಾರು ತೆಗೆದರು. ಅದನ್ನು ಬಿಟ್ಟು ಕೆಲಸ ಶುರು ಮಾಡಿ ಎಂದರು. ಆಗ ಗೊಂದಲವಾಯಿತು. ಕನಕಪುರವೂ ಮನೆ ಇದ್ದಹಾಗೆ, ಆದರೆ, ರಾಮನಗರ ಜಿಲ್ಲಾ ಕೇಂದ್ರ ಸ್ಥಾನ. ಮೆಡಿಕಲ್ ಕಾಲೇಜ್ ವಿಚಾರದಲ್ಲೂ ರಾಜಕೀಯ ಮಾಡಬಾರದು. ಅವರದ್ಧೇ ಸರಕಾರವಿದೆ. ಕನಕಪುರಕ್ಕೆ ಇನ್ನೊಂದು ಕಾಲೇಜ್ ಮಾಡಲಿ. ನನ್ನದೇನೂ ತಕರಾರು ಇಲ್ಲ. ಆದರೆ, ರಾಮನಗರ ಮೆಡಿಕಲ್ ಕಾಲೇಜ್ ಗೆ ತೊಂದರೆ ಮಾಡಬೇಡಿ ಎಂದು ನ್ಯಾಯಯುತವಾಗಿ ಕೇಳುತ್ತಿದ್ದಾರೆ ಕುಮಾರಸ್ವಾಮಿ ಅವರು. ಅವರ ಮೇಲೆ ಆರೋಪ ಮಾಡಬೇಡಿ. ಕುಮಾರಸ್ವಾಮಿ ಅವರು ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದರು ಮಾಜಿ ಪ್ರಧಾನಿಗಳು.

          ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳುವುದಕ್ಕೆ ಹೋಗುವುದಿಲ್ಲ. ಅವರ ಕ್ಷೇತ್ರದ ಬಗ್ಗೆ ಅವರು ಮಾತನಾಡಿದರೆ, ನಾನು ಏಕೆ ಆ ರೀತಿ ಮಾತನಾಡಲಿ. ಇಲ್ಲೊಂದು ವಿಷಯ ಇದೆ ನೋಡಿ, “ಭೂ ಮಾಫಿಯಾಗೆ ಸರಕಾರ ಮಾಫಿ” ಎಂದು ಪತ್ರಿಕೆಯಲ್ಲಿ ವರದಿ ಬಂದಿದೆ. ಸಿಲಿಕಾನ್ ಸಿಟಿಯಲ್ಲಿ 38,947 ಎಕರೆ ಸರಕಾರಿ ಭೂ ಅತಿಕ್ರಮಣ ಎಂದು ಬರೆಯಲಾಗಿದೆ. ಈ ವಿಷಯ ಹೇಳಿದರೆ ವ್ಯಕ್ತಿ ದ್ವೇಷನಾ.? ತಪ್ಪನ್ನು ತಪ್ಪು ಅಂತ ಹೇಳಿದರೆ ವೈಯಕ್ತಿಕ ಹಗೆತನವಾ?  ಇಂಥದ್ದು  ಬಹಳ ಇದೆ. ಕುಮಾರಸ್ವಾಮಿಯವರ ಬಳಿ ಬಹಳಷ್ಟು ವಿಷಯ ಇದೆ. ಹೋರಾಟ ನಡೆದಿದ್ದು ಸತ್ಯ. ಇದು ಇಲ್ಲಿಗೇ ನಿಲ್ಲುವುದಿಲ್ಲ ಎಂದು ಪತ್ರಿಕಾ ವರದಿಯೊಂದನ್ನು ಪ್ರದರ್ಶಿಸಿದರು ಅವರು.

ಯಾವ ಶಾಸಕರೂ ಪಕ್ಷ ಬಿಟ್ಟು ಹೋಗಲ್ಲ:

ಇನ್ನೊಂದು ಪಕ್ಷವನ್ನು ನಂಬಿ ನಮ್ಮ ಪಕ್ಷದ ಶಾಸಕರು ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಮಾಜಿ ಪ್ರಧಾನಿಗಳು ನೇರ ಮಾತುಗಳಲ್ಲಿ ಹೇಳಿದರು.

ಲೋಕಸಭೆ ಕ್ಷೇತ್ರಗಳ ಪುನಾ ವಿಂಗಡಣೆ ಬಗ್ಗೆ ಚರ್ಚೆ ಆಗುತ್ತಿದೆ. ಅದರ ಬಗ್ಗೆ ಇರಲಿ, ನಾವು ಜಿ.ಟಿ.ದೇವೆಗೌಡರ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಬಿಬಿಎಂಪಿ ಚುನಾವಣೆಗೂ ಸಿದ್ಧತೆ ನಡೆಯುತ್ತಿದೆ. ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಇದೆಲ್ಲಾ ಬರೀ ಊಹಾಪೋಹ ಅಷ್ಟೇ. ಇಂತವರು ಹೋಗುತ್ತಾರೆ ಎಂದು ಹೇಳಿದರೆ ನಾವು ಸರಿ ಮಾಡಿಕೊಳ್ಳುತ್ತೇವೆ. ಈ ರೀತಿಯ ಊಹಾಪೋಹದ  ಸುದ್ದಿ ಮಾಡಬೇಡಿ. ಈ ಪ್ರಾದೇಶಿಕ ಪಕ್ಷ ಉಳಿಯಲು ಬಿಡಿ ಎಂದರು ಮಾಜಿ ಪ್ರಧಾನಿಗಳು.

 

          ಮಂಡ್ಯ ಜಿಲ್ಲೆಯ ರಾಜಕಾರಣದ ಬಗ್ಗೆಯೂ ಬಹಳ ಚರ್ಚೆ ಮಾಡಿದ್ದೇನೆ. ಪ್ರತಿಯೊಂದು ವಿಚಾರವನ್ನೂ  ತಿಳಿದುಕೊಂಡಿದ್ದೇನೆ. ಒಬ್ಬರೇ ಒಬ್ಬರು ಕೂಡ ಪಕ್ಷ ಹೋಗುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಅವರು ಹೇಳಿದರು.

ಸೆಪ್ಟೆಂಬರ್ 10 ರಂದು ಸಮಾವೇಶ:

ಸೆಪ್ಟಂಬರ್ 10ರಂದು ನಗರದ ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿದೆ. ಸುಮಾರು 20 ಸಾವಿರ ಕಾರ್ಯಕರ್ತರು ಆಗಮಿಸುವ  ನಿರೀಕ್ಷೆ ಇದೆ. ಅದಕ್ಕಾಗಿ ಎಲ್ಲಾ ಜಿಲ್ಲೆಗಳಿಂದ  ಕಾರ್ಯಕರ್ತರು ಬರಬೇಕೆಂದು ಮನವಿ ಮಾಡಿದ ಮಾಜಿ ಪ್ರಧಾನಿಗಳು, ಈ 91ರ ವಯಸ್ಸಿನಲ್ಲೂ ಕೆಲಸ ಮಾಡುತ್ತಿದ್ದೇನೆ. ಯಾರೂ ನನ್ನನ್ನು ಈ ಸಂದರ್ಭದಲ್ಲಿ ಕೈಬಿಡಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.

ಪಕ್ಷದ ಸಂಘಟನೆ ದೃಷ್ಟಿಯಿಂದ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ನಾನು ಮನೆಯಲ್ಲಿ ಕೂರುವುದಿಲ್ಲ. ಪಕ್ಷ ಸಂಘಟನೆಗೊಳಿಸಿ ಉಳಿಸಬೇಕೆಂದು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಮತ್ತು ಬಿಜೆಪಿಯ ಈ ರಾಷ್ಟ್ರೀಯ ಪಕ್ಷಗಳ ಮಧ್ಯೆ  ನಮ್ಮ ಪ್ರಾದೇಶಿಕ ಪಕ್ಷವನ್ನು ಉಳಿಸುವ ಸಂಕಲ್ಪ ಮಾಡಿದ್ದೇನೆ. ಈ ದೇಶದ ರಾಜಕಾರಣ ಹೇಗೆ ನಡೆಯುತ್ತಿದೆ ಎಂದು ನನಗೆ ಗೊತ್ತಿದೆ. ಮಾಜಿ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ರಚನೆ ಮಾಡಲಾಗಿದ್ದು, ಸೆಪ್ಟೆಂಬರ್ 1ರಿಂದ ಅವರ ತಂಡ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ತುಳಿಯುತ್ತಿದ್ದಾರೆ. ನಾನು ತುಂಬ ವಿಚಾರ ಮಾತನಾಡಬಲ್ಲೆ, ಆದರೆ ಇಂದು ಪಕ್ಷದ ಸಂಘಟನೆಯಷ್ಟೇ ಮಾತನಾಡುತ್ತೇನೆ. ದೇವೆಗೌಡರು ಮನೆಯಲ್ಲಿ  ಕುಳಿತುಕೊಳ್ಳುತ್ತಾರೆ ಎಂದು ತಿಳಿಯಬೇಡಿ. ಕುಮಾರಸ್ವಾಮಿಯವರು ಎಲ್ಲ ಕಡೆ ಓಡಾಡಬೇಕಾಗುತ್ತದೆ. ಅವರ  ನಾಯಕತ್ವದಲ್ಲಿಯೇ ಪಕ್ಷ ಮುನ್ನಡೆಯಲಿದೆ. ಲೋಕಸಭೆ ಚುನಾವಣೆಗೆ  ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕೋರ್ ಕಮಿಟಿ ಸದಸ್ಯರ ವಿಶ್ವಾಸಕ್ಕೆ ಪಡೆದು ಒಂದು ತೀರ್ಮಾನ ಮಾಡುತ್ತೇವೆ. ನಾಳೆ ಬೆಳಗ್ಗೆಯೇ ಚುನಾವಣೆ ಬರೊದಿಲ್ಲ. ಯಾವುದೇ ತೀರ್ಮಾನ ಆಗಲಿ ಎಲ್ಲರೂ ಕೂತು ಚರ್ಚೆ ಮಾಡುತ್ತೇವೆ  ಎಂದರು ಅವರು.

ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ:

ಇದೇ ವೇಳೆ ಚಂದ್ರಯಾನ-3ರ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳ ಸಾಧನೆಗೆ ಮಾಜಿ ಪ್ರಧಾನಿಗಳು ಅಭಿನಂದನೆ ಸಲ್ಲಿಸಿದರು.

 

ವಿಜ್ಞಾನಿಗಳು ಚಂದ್ರಯಾನ 3 ಯಶಸ್ವಿಗೊಳಿಸಿ ಇಡೀ ಜಗತ್ತು ಭಾರತದ ಕಡೆ ನೋಡುವಂತೆ ಮಾಡಿದ್ದಾರೆ. ದೇಶದ ಘನತೆ ಮತ್ತು ಗೌರವ ಹೆಚ್ಚಿಸಿದ್ದಾರೆ. ವಿಜ್ಞಾನಿಗಳ ಈ ಸಾಧನೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ದೀಪ ಬೆಳಗಿದ ಮಾಜಿ ಪ್ರಧಾನಿಗಳು:

ಇದೇ ವೇಳೆ ಮಾಜಿ ಪ್ರಧಾನಿಗಳು ಮಾಧ್ಯಮಗೋಷ್ಠಿ  ಆರಂಭಕ್ಕೆ ಮುನ್ನ ದೀಪ ಬೆಳಗಿದರು. ನಮ್ಮ ಗುರಿ ಪ್ರಾದೇಶಿಕ ಪಕ್ಷ ಉಳಿಸುವುದು. ಇಂದು ಒಳ್ಳೆಯ ದಿನ, ಅದಕ್ಕೆ ಸಾಂಕೇತಿಕವಾಗಿ ಕಾರ್ಯಕ್ರಮಗಳನ್ನು ಆರಂಭ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

 

ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಬಿಎಮ್ ಫಾರೂಕ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಪ್ರುಲ್ಲಾ ಖಾನ್, ಪಕ್ಷದ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್, ಸಯ್ಯದ್ ಶಫಿ ಉಲ್ಲಾ, ಬಸವರಾಜ್ ಪಾದಯಾತ್ರಿ ಮುಂತಾದವರು ಹಾಜರಿದ್ದರು.

Facebook
Twitter
LinkedIn
WhatsApp
Email
Print
Telegram
Tumblr

Leave a Comment

Your email address will not be published. Required fields are marked *

Translate »
Scroll to Top