‘ಫ್ರೂಟ್ಸ್’ ಮಾದರಿಯಲ್ಲೇ ಆಧಾರ್ ಮತ್ತು ಪಹಣಿ ಲಿಂಕ್ ಮಾಡುವ ಕೆಲಸ ಆಂದೋಲನದ ಮಾದರಿಯಲ್ಲಿ ಆಗಬೇಕು: ಕೃಷ್ಣ ಬೈರೇಗೌಡ

ಜಿಲ್ಲೆಯಲ್ಲಿ ಫ್ರೂಟ್ಸ್ ನವೀಕರಣ ಶೇ.80 ರಷ್ಟು ಪ್ರಗತಿ

ಫ್ರೂಟ್ಸ್ ನವೀಕರಣಕ್ಕೆ ಸಚಿವರು ಸಂತಸ, ಪಹಣಿ-ಆಧಾರ್ ಲಿಂಕ್ ಗೆ ಕರೆ

ಕೋರ್ಟ್ ಕೇಸ್ ನಿರ್ವಹಣೆ, ಇ-ಆಫೀಸ್ ಬಳಕೆಗೆ ತೀವ್ರ ಅಸಮಾಧಾನ

ಹುಬ್ಬಳ್ಳಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ಪರಿಶೀಲನೆ

 ಬೆಳಗಾವಿ : ಹಣ ದುರ್ಬಳಕೆ ಹಾಗೂ ಅಕ್ರಮ ಪ್ರಕರಣಗಳನ್ನು ನಿಯಂತ್ರಿಸಲು “ಫ್ರೂಟ್ಸ್” ಮಾದರಿಯಲ್ಲೇ ಆಧಾರ್ ಕಾರ್ಡ್ ಮತ್ತು ಪಹಣಿ ಲಿಂಕ್ ಮಾಡುವ ಕೆಲಸ ಆರಂಭವಾಗಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ರೈತರಿಗೆ ಬರ ಪರಿಹಾರವನ್ನು ಶೀಘ್ರ ಮತ್ತು ಪಾರದರ್ಶಕವಾಗಿ ನೀಡಲು ಫ್ರೂಟ್ಸ್ ನವೀಕರಣಕ್ಕೆ ಸೂಚಿಸಲಾಗಿತ್ತು. ಶೇ.80 ರಷ್ಟು ಗುರಿ ನೀಡಲಾಗಿತ್ತು. ಬೆಳಗಾವಿ ಜಿಲ್ಲೆ ಈ ಗುರಿಯನ್ನು ಪೂರೈಸಿರುವುದು ಸಂತಸದ ವಿಚಾರ” ಎಂದರು.

ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಳೆದ ಎರಡು ತಿಂಗಳಿನಿಂದ ಆಂದೋಲನ ಮಾದರಿಯಲ್ಲಿ ಫ್ರೂಟ್ಸ್ ದತ್ತಾಂಶ ನವೀಕರಣಕ್ಕೆ ಕೆಲಸ ಮಾಡಿದ್ದೀರಿ. ಆದರೆ, ಆಧಾರ್ ಮತ್ತು ಪಹಣಿ ಲಿಂಕ್ ಗೂ ಎಲ್ಲಾ ಅಧಿಕಾರಿಗಳೂ ಇದೇ ಮಾದರಿಯಲ್ಲಿ ಕೆಲಸ ನಿರ್ವಹಿಸಬೇಕು‌ ಎಂದು ಕರೆ ನೀಡಿದರು.

 

ಹಲವು ಜಿಲ್ಲೆಗಳಲ್ಲಿ ಯಾರದ್ದೋ ಭೂಮಿಗೆ ಅದೇ ಹೆಸರಿನ ಮತ್ತೊಬ್ಬ ವ್ಯಕ್ತಿಗೆ ಪರಿಹಾರ ನೀಡಿರುವ, ಯಾವುದೋ ಜಿಲ್ಲೆಯ ರೈತರ ಪರಿಹಾರ ಹಣ ಮತ್ತ್ಯಾವುದೋ ಜಿಲ್ಲೆಯ ರೈತರಿಗೆ ನೀಡಿರುವ, ಹಣ ದುರುಪಯೋಗವಾಗಿರುವ ಹಲವು ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ. ಆಧಾರ್ ಮತ್ತು ಪಹಣಿ ಲಿಂಕ್ ಮಾಡುವ ಮೂಲಕ ಮಾತ್ರ ಇಂತಹ ಅಕ್ರಮಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯ ಎಂದು ಅವರು ಹೇಳಿದರು.

ಕುಡಿಯುವ ನೀರಿನ ಬಗ್ಗೆ ಇರಲಿ ಎಚ್ಚರ:

ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿಲ್ಲ‌. ಆದರೆ, ಬೇಸಿಗೆಯಲ್ಲಿ ಸಮಸ್ಯೆ ಕಂಡುಬರುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಫೆಬ್ರವರಿ ಮೊದಲ‌ ವಾರದಲ್ಲೇ ಟಾಸ್ಕ್ ಫೋರ್ಸ್ ಸಭೆ ನಡೆಸಬೇಕು. ಈಗಲೇ ಖಾಸಗಿ ಟ್ಯಾಂಕರ್ ಹಾಗೂ ಬೋರ್ ಬೆಲ್ ಗಳನ್ನು ಗುರುತಿಸಿ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಕಂದಾಯ ಗ್ರಾಮಗಳ ಶೀಘ್ರ ಘೋಷಣೆಗೆ ಸೂಚನೆ:

ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು.

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 164 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ, ಈವರೆಗೆ 114 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಈ ಪೈಕಿ 93 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 30 ಗ್ರಾಮಗಳು ಬಾಕಿ ಉಳಿದಿದ್ದು, 20 ಗ್ರಾಮಗಳು ವಾಪಾಸ್ ಬಂದಿವೆ. ಇದಕ್ಕೆ ಕಾರಣವೇನು? ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದು ಬಡವರ ಕೆಲಸ. ಬೆಳಗಾವಿ ರಾಜ್ಯದಲ್ಲೇ ಅತಿದೊಡ್ಡ ಜಿಲ್ಲೆಯಾಗಿದ್ದು, ಇಷ್ಟು ದೊಡ್ಡ ಜಿಲ್ಲೆಗೆ 164 ತುಂಬಾ ಸಣ್ಣ ಸಂಖ್ಯೆ. ಜಿಲ್ಲೆಯಲ್ಲಿ ಯಾವ ಜನವಸತಿ ಪ್ರದೇಶ ಕಂದಾಯ ಗ್ರಾಮಗಳಾಗಲು ಅರ್ಹ ಎಂಬ ಮಾಹಿತಿ ಗ್ರಾಮ ಲೆಕ್ಕಾಧಿಕಾರಿಗೆ ಇರುತ್ತದೆ. ಹೀಗಾಗಿ ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ್ ಜೊತೆಗೆ ಚರ್ಚಿಸಿ ಮತ್ತಷ್ಟು ತಾಂಡಾ, ಹಟ್ಟಿ,‌ ಗೊಲ್ಲರಹಟ್ಟಿಗಳನ್ನು ಗುರುತಿಸಿ ಪ್ರಸ್ತಾವನೆ ಕಳುಹಿಸಿ ಎಂದು ತಾಕೀತು ಮಾಡಿದರು.

 

ಕಂದಾಯ ಗ್ರಾಮ ಅಂತಿಮ ಅಧಿಸೂಚನೆ ಹೊರಡಿಸುತ್ತಿದ್ದಂತೆ ಜನರಿಗೆ ಹಕ್ಕು ಪತ್ರ ನೀಡುವ ಕೆಲಸವಾಗಬೇಕು. ಈ ಬಾರಿ ಡಿಜಿಟಲ್‌ ಹಕ್ಕು ಪತ್ರ ನೀಡಲು ಉದ್ದೇಶಿಸಿದ್ದು, ಹಕ್ಕುಪತ್ರದ ಜೊತೆಗೆ ಅವರಿಗೆ ನೋಂದಣಿಯೂ ಮಾಡಿಕೊಡಬೇಕು. ಫಲಾನುಭವಿಗಳು ಮತ್ತೆ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಬಾರದು ಎಂದು ಸೂಚಿಸಿದರು.

ಬಗರ್ ಹುಕುಂ ಅರ್ಜಿ ವಿಲೇಗೆ ಒತ್ತು:

ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಹರಿಗೆ ಮಾತ್ರ ಜಮೀನು ಮಂಜೂರು ಮಾಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, “ಈ ಹಿಂದೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ವೇಳೆ ಅನರ್ಹರಿಗೂ ಜಮೀನು ಮಂಜೂರು ಮಾಡಲಾಗಿದೆ.‌ ನಿಯಮ ಮೀರಿ ಸಾಕಷ್ಟು ಅಕ್ರಮ ನಡೆಸಲಾಗಿದೆ. ಆದರೆ ಈ ಬಾರಿ ಅಂತಹ ಯಾವುದೇ ಪ್ರಹಸನಗಳಿಗೆ ಆಸ್ಪದ ಇಲ್ಲ. ಬಗರ್ ಹುಕುಂ ಸಭೆಯ ಬಯೋ ಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಪಡೆಯಬೇಕು” ಎಂದು ತಾಕೀತು ಮಾಡಿದರು.

ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ಮುಂದಿನ 6 ತಿಂಗಳಲ್ಲಿ ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು,ಸಾಗುವಳಿ ಚೀಟಿ ನೀಡುತ್ತಿದ್ದಂತೆ ಹೊಸ ಸರ್ವೇ ನಂಬರ್ ಪೋಡಿಯನ್ನೂ ಸಹ ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಜಮೀನು ರಕ್ಷಣೆಗೆ ಬೀಟ್ ಆ್ಯಪ್

ಸರ್ಕಾರಿ ಒತ್ತುವರಿ ತೆರವುಗೊಳಿಸಲು ಶೀಘ್ರದಲ್ಲೇ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳಿಗೂ ಬೀಟ್ ಆ್ಯಪ್ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಈ ಬಗ್ಗೆ ಗಮನ ಸೆಳೆದ ಅವರು, “ಎಲ್ಲಾ ಜಿಲ್ಲೆಯಲ್ಲೂ ಸರ್ಕಾರಿ ಭೂ ಒತ್ತುವರಿ ದೊಡ್ಡ ಸಮಸ್ಯೆಯಾಗಿದೆ. ಮುಖ್ಯಂತ್ರಿಗಳಿಗೆ ಉತ್ತರ ನೀಡುವುದು ಕಷ್ಟವಾಗಿದೆ. ಹೀಗಾಗಿ ಮೊದಲು ನಮ್ಮ ದಾಖಲೆಯಲ್ಲಿರುವ ಸರ್ಕಾರಿ ಭೂಮಿಯನ್ನು ಗುರುತಿಸಿ ರಕ್ಷಿಸುವ ಕೆಲಸ ಆಗಬೇಕು. ಸರ್ಕಾರಿ ಭೂಮಿಗಳನ್ನು ಗುರುತಿಸಲು ” ಬೀಟ್” ಆ್ಯಪ್ ಅಭಿವೃದ್ಧಿ ಪಡಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು.

 

ಗ್ರಾಮ ಲೆಕ್ಕಾಧಿಕಾರಿಗಳು ಈ ಆ್ಯಪ್ ಮೂಲಕ ಸರ್ಕಾರಿ ಭೂಮಿಯನ್ನು ಗುರುತಿಸಿ ಒತ್ತುವರಿ ತೆರವಿಗೆ ತಹಶೀಲ್ದಾರ್ ಗೆ  ಪ್ರಸ್ತಾಪ ಸಲ್ಲಿಸಬೇಕು. ಅಲ್ಲದೆ, ಪ್ರತಿ ಮೂರು ತಿಂಗಳಿಗೊಮ್ಮೆ ತನ್ನ ವ್ಯಾಪ್ತಿಯ ಸರ್ಕಾರಿ ಭೂಮಿಗೆ ತೆರಳಿ ಪರಿಶೀಲಿಸಿ ಆ್ಯಪ್‌ನಲ್ಲಿ ದಾಖಲಿಸಬೇಕು ಎಂದು ಸೂಚಿಸಿದರು.

ಹೈಕೋರ್ಟ್ ಕೇಸ್ಗಳ ಬಗ್ಗೆ ಇಷ್ಟು ತಾತ್ಸಾರವೇಕೆ?

ಬೆಳಗಾವಿ ಜಿಲ್ಲೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿರುವ ಹಲವು ಪ್ರಕರಣಗಳಲ್ಲಿ ತೆಗೆದುಕೊಂಡಿರು ಕ್ರಮ ಶೂನ್ಯ. ತಹಶೀಲ್ದಾರರು ನ್ಯಾಯಾಲಯದಲ್ಲಿ ಕನಿಷ್ಟ ವಕಾಲತ್ತನ್ನೂ ಸಹ ಸಲ್ಲಿಸಿಲ್ಲ. ವಕಾಲತ್ತು ಸಲ್ಲಿಸಲು ಏನ್ರೀ ಸಮಸ್ಯೆ ಎಂದು ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು.

ಕಳೆದ ಜುಲೈ ತಿಂಗಳಿನಿಂದ ಸತತ ಸೂಚನೆ ನೀಡಿದ ನಂತರವೂ ಬೆಳಗಾವಿ ಜಿಲ್ಲೆಯಿಂದ ಅಧಿಕ ಸಂಖ್ಯೆಯ ಪ್ರಕರಣಗಳು ಹೈಕೋರ್ಟ್ ನಲ್ಲಿವೆ. ಆದರೆ, ತಹಶಿಲ್ದಾರರು ಹಾಗೂ ಎಸಿಗಳು ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಪರಿಣಾ‌ಮ ಹೈಕೋರ್ಟ್ ಕಂದಾಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ.  ನೀವು ಮಾಡುವ ಕೆಲಸಕ್ಕೆ ಸರ್ಕಾರದ ಜಮೀನು ಖಾಸಗಿಯವರ ಪಾಲಾಗಲು ನಾವು ಸಹಿ ಹಾಕಬೇಕ? ಮುಖ್ಯಮಂತ್ರಿಗಳ ಬಳಿ ನಾವು ಏನೆಂದು ಉತ್ತರ ನೀಡುವುದು?  ಎಂದು ಅವರು ಕಿಡಿಕಾರಿದರು.

ಮುಂದುವರೆದು, ತಹಶಿಲ್ದಾರರು ಈಗಲಾದರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು,  ಹೈಕೋರ್ಟ್ ನಲ್ಲಿರುವ ಎಲ್ಲಾ ಪ್ರಕರಣಗಳಲ್ಲೂ ವಕಾಲತ್ತು ಸಲ್ಲಿಸಬೇಕು, ಮೂರು ತಿಂಗಳಲ್ಲಿ ಪ್ರಗತಿ ಕಾಣದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಎಚ್ಚರಿಸಿದರು.

ತಹಶೀಲ್ದಾರ್-ಎಸಿ ಕೋರ್ಟ್ ಕೇಸ್: ಸಚಿವರು ಗರಂ

ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯದಲ್ಲಿನ ಎಲ್ಲಾ ತಕರಾರು ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಕಳೆದ ಜುಲೈ ನಿಂದ‌‌‌ ಸೂಚಿಸುತ್ತಿದ್ದರೂ ಅಧಿಕ ಸಂಖ್ಯೆಯ ಪ್ರಕರಣಗಳ ಬಾಕಿ ಏಕೆ? ಎಂದು ಅಧಿಕಾರಿಗಳ ವಿರುದ್ಧ ಸಚಿವರು ಕಿಡಿಕಾರಿದರು.

 

ತಹಶೀಲ್ದಾರ್ ನ್ಯಾಯಾಲಯದಲ್ಲಿ 473 ಹಾಗೂ ಉಪ‌ವಿಭಾಗಾಧಿಕಾರಿ (ಎಸಿ) ನ್ಯಾಯಾಲಯದಲ್ಲಿ 189 ಪ್ರಕರಣಗಳು ಬಾಕಿ ಇವೆ. 90 ದಿನಗಳ ಒಳಗಾಗಿ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಕಾನೂನು ಇದ್ದರೂ, ಈ ಎಲ್ಲಾ ಪ್ರಕರಣಗಳನ್ನು ಏಕೆ ಬಾಕಿ ಇಟ್ಟುಕೊಂಡಿದ್ದೀರ? ಎಂದು ತರಾಟೆಗೆ ತೆಗೆದುಕೊಂಡರು. ‌ಅಲ್ಲದೆ, ಈ ಎಲ್ಲಾ ಪ್ರಕರಣಗಳನ್ನೂ ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇ-ಆಫೀಸ್ ಬಳಸದ ಅಧಿಕಾರಿಗಳಿಗೆ ನೋಟೀಸ್

ಸಭೆಯ ವೇಳೆ ಇ-ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಕಡ್ಡಾಯ ಇ-ಆಫೀಸ್ ಬಳಕೆಗೆ ಸೂಚಿಸಿ ಆರು ತಿಂಗಳಾಗಿದೆ. ಬೆಳಗಾವಿಯ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನವಾಗಿದೆ ಎಂದು ವರದಿ ನೀಡಿದ್ದೀರಿ. ಆದರೆ, ಇ-ಆಫೀಸ್ ನಲ್ಲಿ ಎಷ್ಟು ಫೈಲ್ ರಚಿಸಲಾಗುತ್ತಿದೆ? ಎಂದು ಪ್ರಶ್ನಿಸಿದರು. ಹಲವು ತಾಲೂಕುಗಳಲ್ಲಿ ಇ-ಆಫೀಸ್ ತೃಪ್ತಿದಾಯಕವಾಗಿಲ್ಲ ಎಂದು ಕಿಡಿಕಾರಿದರು.

ಇ-ಆಫೀಸನ್ನು ನಾವು ಶೋಕಿಗೆ ಜಾರಿ ಮಾಡಿಲ್ಲ. ಸರ್ಕಾರಿ ಸೇವೆ ಜನರಿಗೆ ಶೀಘ್ರವಾಗಿ ನೀಡುವ ಉದ್ದೇಶದಿಂದ ಇ-ಆಫೀಸ್ ಜಾರಿ ಮಾಡಲಾಗಿದೆ. ಎಲ್ಲಾ ತಹಶೀಲ್ದಾರ್ ಗಳೂ ಇನ್ಮುಂದೆ ಇ-ಆಫೀಸ್ ಮೂಲಕವೇ ಕಡತಗಳ ವಿಲೇವಾರಿ ನಡೆಸಬೇಕು. ಭೌತಿಕ ಕಡತಗಳನ್ನು ಸ್ವೀಕರಿಸಬಾರದು. ಟಪಾಲು ವಿಭಾಗದಲ್ಲೇ ಇ-ಆಫೀಸ್ ಬಳಕೆಯಾಗಬೇಕು. ಶೇ. 80ಕ್ಕೂ ಹೆಚ್ಚು ಕಡತಗಳನ್ನು ಇ-ಆಫೀಸ್ ಮೂಲಕ ವಿಲೇವಾರಿ ನಡೆಸದ ಅಧಿಕಾರಿಗಳಿಗೆ ನೋಟೀಸ್ ನೀಡಲಾಗುವುದು ಎಂದು ಎಚ್ಚರಿಸಿದರು.

ಹುಬ್ಬಳ್ಳಿ ತಾಲೂಕು ಕಚೇರಿಗೆ ದಿಢೀರ್ ಭೇಟಿ, ಪರಿಶೀಲನೆ

ಬೆಳಗಾವಿಗೆ ಆಗಮಿಸುವ ಮಾರ್ಗ ಮಧ್ಯೆ ಬೆಳಗ್ಗೆಯೇ ಹುಬ್ಬಳ್ಳಿಯ ತಾಲೂಕು ಕಚೇರಿ ಹಾಗೂ ಉಪ ನೋಂದಣಾಧಿಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿ ಸಚಿವ ಕೃಷ್ಣ ಬೈರೇಗೌಡ ಅವರು ಹಾಜರಾತಿ ಪುಸ್ತಕ ಪರಿಶೀಲಿಸಿ ಅಧಿಕಾರಿಗಳ ಹಾಜರಾತಿ ಬಗ್ಗೆ ಮಾಹಿತಿ ಪಡೆದರು

 ಇ-ಆಫೀಸ್ ಪರಿಣಾಮಕಾರಿ ಬಳಕೆ ಹಾಗೂ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಜನರಿಗೆ ಎಷ್ಟು ಶೀಘ್ರದಲ್ಲಿ ಸೇವೆ ನೀಡಲಾಗುತ್ತಿದೆ ಎಂಬ ಕುರಿತು ಪರಿಶೀಲಿಸಿದರು. ಜನರ ಜೊತೆಗೆ ಮಾತನಾಡುತ್ತಾ, ತಾಲೂಕು ಕಚೇರಿಯ ಸೇವೆ ತೃಪ್ತಿಕರವಾಗಿದೆಯೇ ಎಂದು ಜನರಿಂದಲೇ ಅಭಿಪ್ರಾಯ ಸಂಗ್ರಹಿಸಿದರು. ಅಲ್ಲದೆ, ಸಾರ್ವಜನಿಕ ಶೌಚಾಲಯಕ್ಕೆ ತೆರಳಿ ಸಾರ್ವಜನಿಕರಿಗೆ ಗುಣಮಟ್ಟದ ಶೌಚಾಲಯ ವ್ಯವಸ್ಥೆ ನೀಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.

 

ಸಭೆಯಲ್ಲಿ ಶಾಸಕ ರಾಜು ಕಾಗೆ, ಕಂದಾಯ ಆಯುಕ್ತರಾದ ಪಿ.‌ಸುನೀಲ್ ಕುಮಾರ್, ರೆವೆನ್ಯೂ ಆಯುಕ್ತರಾದ ಮಂಜುನಾಥ್, ಜಿಲ್ಲಾಧಿಕಾರಿಗಳಾದ ನಿತೇಶ ಕೆ. ಪಾಟೀಲ ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top