ರಾಜಕೀಯವಾಗಿ ವಿಜೃಂಭಿಸುತ್ತಿರುವ ಕುಮಾರ ಸ್ವಾಮಿ: ಜೈಲು, ಬೇಲುಗಳ ತೊಳಲಾಟದಲ್ಲಿ ರೇವಣ್ಣ ಕುಟುಂಬ….!

Ø ನಂಜುಂಡಪ್ಪ.ವಿ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ಹಿಂದೆಂದೂ ಇಲ್ಲದಷ್ಟು ಸಂದಿಗ್ದತೆ ಎದುರಾಗಿದೆ. ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಮತ್ತೊಮ್ಮೆ ಫೀನಿಕ್ಸ್ ನಂತೆ ಎದ್ದು ನಿಂತಿದ್ದಾರೆ. ಮತ್ತೋರ್ವ ಪುತ್ರ, ಮಾಜಿ ಸಚಿವ ಎಚ್.ಡಿ. ರೇವಣ್ಣ ಕುಟುಂಬ ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಯಾವ ರಾಜಕಾರಣಿ ಕುಟುಂಬ ಕಂಡರಿಯದಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಎಚ್.ಡಿ. ಕುಮಾರ ಸ್ವಾಮಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರೆ ಬಿಜೆಪಿ ವರಿಷ್ಠ ರಾಜಕಾರಣಿಗಳ ನಿಕಟ ಬಾಂಧವ್ಯ ಹೊಂದಿದ್ದು, ರಾಷ್ಟ್ರ ರಾಜಕಾರಣದಲ್ಲಿ ಅದೃಷ್ಟದ ರಾಜಕಾರಣಿಯಾಗಿದ್ದಾರೆ. ರಾಜ್ಯ ಬಿಜೆಪಿ ನಾಯಕರಲ್ಲೂ ತಳಮಳ ಉಂಟು ಮಾಡುವ ಹಂತಕ್ಕೆ ಎಚ್.ಡಿ.ಕೆ ಬೆಳೆದು ನಿಂತಿದ್ದಾರೆ. ರಾಜಕೀಯವಾಗಿಯೂ ವಿಜೃಂಭಿಸುತ್ತಿದ್ದಾರೆ. 16 ಸಂಸದರನ್ನು ಗೆಲ್ಲಿಸಿಕೊಂಡಿದ್ದ ದೇವೇಗೌಡರು 1996 ರಲ್ಲಿ ಪ್ರಧಾನಿಯಾದರು. ಕೇವಲ ಇಬ್ಬರು ಸಂಸದರನ್ನು ಗೆಲ್ಲಿಸಿಕೊಂಡ ಕುಮಾರ ಸ್ವಾಮಿ ಪ್ರಭಾವಿ ಕ್ಯಾಬಿನೆಟ್ ಸಚಿವರಾಗಿ ಹೊರ ಹೊಮ್ಮಿದ್ದಾರೆ.

ಆದರೆ ಎಚ್.ಡಿ. ರೇವಣ್ಣ ಅವರಿಗೆ ದುರಾದೃಷ್ಟ ಬೆನ್ನು ಹತ್ತಿದಂತಿದೆ. ಎಲ್ಲರ ಗ್ರಹತಿಗಳನ್ನು ಬಲ್ಲ ರೇವಣ್ಣ ಒಮ್ಮೆ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಎಸ್.ಐ.ಟಿ ತನಿಖೆ ಎದುರಿಸುತ್ತಿದ್ದು, ಜೈಲು – ಬೇಲುಗಳ  ತೊಳಲಾಟದಲ್ಲಿದ್ದಾರೆ. ಭವಾನಿ ರೇವಣ್ಣ ಅವರಿಗೂ ಸಂಕಟ ತಪ್ಪಿಲ್ಲ. ಸಧ್ಯ ಅವರು ಜಾಮೀನು ಪಡೆದುಕೊಂಡು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.

 

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಜಾಗತಿಕ ಮಟ್ಟದ ಸುದ್ದಿಯಾಯಿತು. ಹಿಂದೆಂದೂ ಕಂಡರಿಯದ ಭಾರೀ ಆಕ್ರೋಶ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ವ್ಯಕ್ತವಾಯಿತು. ಎಸ್.ಐ.ಟಿ ತನಿಖೆ ಎದುರಿಸಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಮತ್ತೊಮ್ಮೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಮತ್ತೋರ್ವ ಪುತ್ರ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜುಲೈ 1ರವರೆಗೆ ಸಿಐಡಿ ವಶಕ್ಕೆ ನೀಡಲಾಗಿದೆ. ಭಾನುವಾರವಷ್ಟೇ ಬಂಧಿತರಾಗಿದ್ದ ಸೂರಜ್ ಅವರನ್ನು 14 ದಿನಗಳ ವಶಕ್ಕೆ ನೀಡಿದ್ದ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಪೊಲೀಸರು ಕಸ್ಟಡಿಗೆ ನೀಡುವಂತೆ ಮಾಡಿದ ಮನವಿಯನ್ನು ಪುರಸ್ಕರಿಸಿದೆ. ಸೂರಜ್ ಬಗೆಗಿನ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಲು ಕುಮಾರ ಸ್ವಾಮಿ ನಿರಾಕರಿಸಿದ್ದಾರೆ. ಸಿಡಿಮಿಡಿಗೊಂಡು ಅಸಹನೆ ವ್ಯಕ್ತಪಡಿಸಿದ್ದಾರೆ…..!

ಹಾಸನ ಭಾಗದ ಜೆಡಿಎಸ್ ನ ಅನಭಿಷಕ್ತ ದೊರೆ ಎಂದೇ ಗುರುತಿಸಿಕೊಂಡಿದ್ದ, ಅಭಿವೃದ್ಧಿ ಪರ್ವದಲ್ಲಿ ದಾಖಲೆಯನ್ನೇ ನಿರ್ಮಿಸಿದ್ದ ಎಚ್.ಡಿ. ರೇವಣ್ಣ ಮತ್ತವರ ಕುಟುಂಬ, ರಾಜಕೀಯವಾಗಿಯೂ ಪ್ರಭಾವಶಾಲಿಯಾಗಿತ್ತು. ಆದರೆ ಕಳೆದ ಒಂದು ತಿಂಗಳಿಂದ ನಡೆದ ಬೆಳವಣಿಗೆಗಳು ರೇವಣ್ಣ ಕುಟುಂಬವನ್ನು ಘಾಸಿಗೊಳಿಸಿವೆ. ಒಂದರ ಮೇಲೊಂದು ಸಂಕಷ್ಟ ಅಪ್ಪಳಿಸುತ್ತಿವೆ.

 

ಹಾಸನದ ಜೆ.ಡಿ.ಎಸ್. ಮುಖಂಡರೊಬ್ಬರ ಪ್ರಕಾರ, ಈ ಬೆಳವಣಿಗೆಗಳು ಜೆಡಿಎಸ್ ಗೆ ಮರ್ಮಾಘಾತವಾಗಿದೆ. ದೇವೇಗೌಡರಿಗೆ ಎಲ್ಲಾ ಮಾಹಿತಿಯೂ ಇತ್ತು. ಆದರೆ ರಾಜಕೀಯದ ಸಂಧ್ಯಾ ಕಾಲದಲ್ಲಿ ಅವರು ಅಸಹಾಯಕರಾದರು. ರೇವಣ್ಣ ಮತ್ತು ಭವಾನಿ ರೇವಣ್ಣ ಅವರ ಮುಂದೆ ಗೌಡರು ಏನೂ ಮಾಡಲಾಗದ ಪರಿಸ್ಥಿತಿಗೆ ಸಿಲುಕಿದರು. ಅತಿ ಸಣ್ಣ ವಯಸ್ಸಿಗೆ ಪ್ರಜ್ವಲ್ ರೇವಣ್ಣ ಸಂಸರಾಗಿದ್ದು, ಮತ್ತೋರ್ವ ಮೊಮ್ಮಗ ಸೂರಜ್ ರೇವಣ್ಣ ವಿಧಾನಪರಿಷತ್ ಸದಸ್ಯರಾದದ್ದು ಹಾಸನದ ರಾಜಕಾರಣಿಗಳಲ್ಲಿ, ಅದರಲ್ಲೂ ಅನ್ಯ ಪಕ್ಷಗಳ ರಾಜಕಾರಣಿಗಳ ಹುಬ್ಬೇರುವಂತೆ ಮಾಡಿತು.

ಇದಲ್ಲದರ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಕಣಕ್ಕಿಳಿಯಲು ಭವಾನಿ ರೇವಣ್ಣ ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಕೊನೆಗೆ ಎಚ್.ಡಿ. ಕುಮಾರ ಸ್ವಾಮಿ ಮಧ್ಯಪ್ರವೇಸಿ, ಒಂದು ವರ್ಷದ ಹಿಂದೆಯೇ ಅವರು ರಾಜಕೀಯ ಆಸ್ಪೋಟವನ್ನು ತಪ್ಪಿಸಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಜ್ಜಲ್ ರೇವಣ್ಣ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಸ್ವತಃ ಅಮಿತ್ ಶಾ ಕುಮಾರ ಸ್ವಾಮಿ ಅವರಿಗೆ ಕಿವಿ ಮಾತು ಹೇಳಿದ್ದರಂತೆ. ನಿಮ್ಮ ಕುಟುಂಬದಿಂದ ಬೇರೆ ಯಾರಾದರೂ ಸ್ಪರ್ಧಿಸಿ, ಇಲ್ಲವಾದಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಿ ಎಂದಿದ್ದರಂತೆ. ಆದರೆ ಈ ಬಾರಿ ರಾಜಕೀಯ ಸ್ಫೋಟವನ್ನು ತಪ್ಪಿಸಲು ಸ್ವತಃ ಕುಮಾರ ಸ್ವಾಮಿ ಅವರಿಗೆ ಸಾಧ್ಯವಾಗಲಿಲ್ಲ.  

ಅದೇನೇ ಇರಲಿ, ಬಿಜೆಪಿ – ಜೆಡಿಎಸ್ ಮೈತ್ರಿ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ವರ್ಕ್ ಔಟ್ ಆಗಿದೆ. ಆದರೆ ಹಾಸನದಲ್ಲಿ ಸಾಧ್ಯವಾಗಲಿಲ್ಲ. ಸ್ವತಃ ಬಿಜೆಪಿ ಮುಖಂಡರು ಪ್ರಜ್ವಲ್ ಪರ ಮುಕ್ತ ಮನಸ್ಸಿನಿಂದ ಕೆಲಸ ಮಾಡಲಿಲ್ಲ. ಇದೇ ಕಾರಣದಿಂದ ಜೆಡಿಎಸ್ ಪರಾಭವಗೊಂಡಿತು. ಒಂದು ವೇಳೆ ಪ್ರಜ್ವಲ್ ಗೆದ್ದಿದ್ದರೆ ರಾಜಕೀಯ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ರೇವಣ್ಣ ಕುಟುಂಬದ ಸಂಕಷ್ಟ ಕೂಡ ಕಡಿಮೆ ಇರುತ್ತಿತ್ತು. ಆದರೆ ರೇವಣ್ಣ ಕುಟುಂಬದ ಅಧಿಕಾರದ ದಾಹವೇ ಇದೆಲ್ಲದಕ್ಕೂ ಕಾರಣ ಎನ್ನುತ್ತಾರೆ ಜೆಡಿಎಸ್ ಮುಖಂಡರು.

 

ದೇವೇಗೌಡರಿಗೆ ಸಮಾಧಾನಕರ ಸಂಗತಿ ಎಂದರೆ ಬೆಂಗಳೂರು ಗ್ರಾಮಾರಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಅಳಿಯ ಡಾ. ಮಂಜುನಾಥ್ ಅವರನ್ನು ಗೆಲ್ಲಿಸಿರುವುದು. ಈ ರಾಜಕೀಯ ತಂತ್ರಗಾರಿಕೆಯನ್ನು ಐದು ವರ್ಷಗಳ ಹಿಂದೆಯೇ ಗೌಡರು ಹಣೆದಿದ್ದರಂತೆ. ಆಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ ಗೌಡ ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟದ ವಿರುದ್ಧ ಆರು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಸಕ್ತಿ ವಹಿಸಿದ್ದರೆ ಆಗಲೇ ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುತ್ತಿತ್ತು. ಕಾಂಗ್ರೆಸ್ ಶೂನ್ಯ ಸಾಧನೆ ಮಾಡುತ್ತಿತ್ತು. ಅದೇನೆ ಇರಲಿ, ಆಗಲೇ ಈ ಕ್ಷೇತ್ರವನ್ನು ವಶಪಡಿಸಿಕೊಂಡು ಡಿ.ಕೆ.ಶಿವಕುಮಾರ್ ಕುಟುಂಬಕ್ಕೆ ಆಘಾತ ನೀಡಬೇಕೆಂದು ಗೌಡರು ತೀರ್ಮಾನಿಸಿದ್ದರು. ಆದರೆ ಈ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದ ಅಶ್ವತ್ಥ ನಾರಾಯಣ ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಬಳಿಯಲ್ಲಿಯೇ ಡಾ. ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ತಂತ್ರಗಾರಿಕೆ ಹಣೆದು ಗೌಡರು ಯಶಸ್ವಿಯಾದರು.

ಡಿ.ಕೆ. ಶಿವಕುಮಾರ್ ಕುಟುಂಬಕ್ಕೆ ಆಘಾತ ನೀಡಿದ ದೇವೇಗೌಡ ಮತ್ತು ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಹಾಸನ ರಾಜಕಾರಣ ನಿಲುಕದಾಯಿತು. ತನ್ನ ಹಿಡಿತ ತಪ್ಪಿದ ಕಾರಣದಿಂದಾಗಿ ರಾಜಕೀಯ ಪಿತಾಮಹ ಎಂದೇ ಕರೆಸಿಕೊಳ್ಳುತ್ತಿದ್ದ ಗೌಡರು ರೇವಣ್ಣ ಕುಟುಂಬದಲ್ಲಿ ಆಗುತ್ತಿರುವ ಬೆಳವಣಿಗೆಗಳಲ್ಲಿ ಏನು ಮಾಡಬೇಕೆಂದು ತೋಚದೇ ಮೂಕ ಪ್ರೇಕ್ಷಕರಾಗಿದ್ದಾರೆ. ಇಳಿ ವಯಸ್ಸಿನಲ್ಲಿ ಗೌಡರಿಗೆ ಒಬ್ಬ ಮಗ ಯಶಸ್ಸಿನ ತುತ್ತ ತುದಿಗೆ ಏರುತ್ತಿದ್ದರೆ, ಮತ್ತೊಬ್ಬ ಪುತ್ರನ ಕುಟುಂಬದ ಸಂಕಷ್ಟ ಕಂಡು ಏನೂ ಮಾಡಲಾಗದ ಪರಿಸ್ಥಿತಿಗೆ ತಲುಪಿದ್ದಾರೆ. 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top