ಬೆಂಗಳೂರು : “ಭಾರತ – ಥೈಲೆಂಡ್ ಸ್ನೇಹ ಮತ್ತು ಆರ್ಥಿಕ ಸಹಕಾರ [ಇಂಡೋ – ಥೈ ಪ್ರೆಂಡ್ ಶಿಪ್ ಅಂಡ್ ಎಕಾನಮಿಕ್ ಕೋ ಆಪರೇಷನ್] ಸಂಸ್ಥೆಯ ಸಮ್ಮೇಳನದಲ್ಲಿ ಸಿಟಿಜನ್ ಇಂಟಿಗ್ರೇಷನ್ ಪೀಸ್ ಇನ್ಸ್ಟಿಟ್ಯೂಟ್ ಕೊಡಮಾಡುವ ಅಂತರರಾಷ್ಟ್ರೀಯ ಸ್ವರ್ಣಮೇರು ಪ್ರಶಸ್ತಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಮಾನಸ ಗ್ರೂಪ್ ಸಂಸ್ಥೆಯ ಸಂಸ್ಥಾಪಕ ಡಾ. ಆನಂದ್ ಕುಮಾರ್ ಅವರಿಗೆ ಸಂದಿದೆ.
ಬ್ಯಾಂಕಾಕ್ ನ ಹಾಲಿಡೆ ಇನ್ ಹೋಟೆಲ್ ನಲ್ಲಿ ನಡೆದ ಸಮ್ಮೇಳನದಲ್ಲಿ ಥೈಲೆಂಡ್ ಮಾಜಿ ಉಪ ಪ್ರಧಾನಿ ಕೊರನ್ ದಬ್ಬಾರಾನ್ಸಿ ಅವರು ಆನಂದ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿದೇಶಾಂಗ ವ್ಯವಹಾರಗಳ ಇಲಾಖೆಯ ಮಾಜಿ ಕಾರ್ಯದರ್ಶಿ ಕೆ.ವಿ. ರಾಜನ್ ಮತ್ತಿತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಟಿಜನ್ ಇಂಟಿಗ್ರೇಷನ್ ಪೀಸ್ ಇನ್ಸ್ಟಿಟ್ಯೂಟ್, ಇಂಡೋ – ಥೈ ಪ್ರೆಂಡ್ ಶಿಪ್ ಅಂಡ್ ಎಕಾನಮಿಕ್ ಕೋ ಆಪರೇಷನ್ ಸಂಸ್ಥೆ ಭಾರತ – ಥೈಲೆಂಡ್ ನಡುವಿನ ಬಾಂಧವ್ಯ ಬಲವರ್ಧನೆಗಾಗಿ ಶ್ರಮಿಸುತ್ತಿದೆ. ಮುಂಬರುವ ದಿನಗಳಲ್ಲಿ ಥೈಲೆಂಡ್ ನಿಂದ ಕರ್ನಾಟಕ ಮತ್ತು ಬೆಂಗಳೂರು ನಡುವೆ ಆರ್ಥಿಕ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಈ ಪ್ರಶಸ್ತಿ ಡಾ. ಆನಂದ್ ಕುಮಾರ್ ಅವರ ಸಾರ್ವಜನಿಕ ಸೇವೆಗೆ ಸಂದ ಗೌರವವಾಗಿದೆ ಎಂದು ಹೇಳಿದೆ.