ಜೆಡಿಎಸ್ ಕಾರ್ಯಕರ್ತನಿಗೆ ಪ್ರದೀಪ್ ಈಶ್ವರ್ ಬೆಂಬಲಿಗರ ಜೇವ ಬೆದರಿಕೆ: ಜೆಡಿಎಸ್ ಆಕ್ರೋಶ

ಊರಿಗೆಲ್ಲಾ ಉಪದೇಶ ಮಾಡುತ್ತೀರಿ, ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ ಸರಿದಾರಿಗೆ ತನ್ನಿ ಎಂದು ಪ್ರದೀಪ್ ಈಶ್ವರ್ ಗೆ ಎಚ್ಚರಿಕೆ

ಬೆಂಗಳೂರು: ಶಾಸಕರನ್ನು ಪ್ರಶ್ನಿಸಿದರು ಎನ್ನುವ ಕಾರಣಕ್ಕೆ  ಚಿಕ್ಕಬಳ್ಳಾಪುರದ ಜೆಡಿಎಸ್ ಕಾರ್ಯಕರ್ತರೊಬ್ಬರಿಗೆ ಜೀವ ಬೆದರಿಕೆ ಒಡ್ಡಿರುವ ಪ್ರದೀಪ್ ಈಶ್ವರ್ ಬೆಂಬಲಿಗರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಜಾತ್ಯತೀತ ಜನತಾದಳ ಆಗ್ರಹಪಡಿಸಿದೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜೆಡಿಎಸ್; ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೀದಿ ರೌಡಿಗಳಂತೆ ವರ್ತಿಸಿ ನಮ್ಮ ಕಾರ್ಯಕರ್ತರ ಮೇಲೆ ಧಮ್ಕಿ ಹಾಕಿ, ಜೀವ ಬೆದರಿಕೆ ಒಡ್ಡುತ್ತಿರುವ ಘಟನೆಗಳು ಗಮನಕ್ಕೆ ಬಂದಿವೆ. ಚಿಕ್ಕಬಳ್ಳಾಪುರ ಕ್ಷೇತ್ರ ಜನರ ಸ್ವತ್ತೇ ಹೊರತು ಶಾಸಕರಾದ ಪ್ರದೀಪ್ ಈಶ್ವರ್ ಅಥವಾ ಕಾಂಗ್ರೆಸ್ ಪಕ್ಷದ ಜಹಗೀರಲ್ಲ. ಈ ಅಂಶವನ್ನು ಕಾಂಗ್ರೆಸ್ ಗೂಂಡಾಗಳು ಅರ್ಥ ಮಾಡಿಕೊಂಡರೆ ಒಳಿತು ಎಂದು ಎಚ್ಚರಿಕೆ ನೀಡಿದೆ.

 

ಹಿರಿಯ ಸಹಕಾರಿ ಧುರೀಣರು, ಮಾಜಿ ಶಾಸಕರು ಹಾಗೂ ನಮ್ಮ ಗೌರವಾನ್ವಿತ ನಾಯಕರು, ಜನಾನುರಾಗಿಗಳು ಆಗಿದ್ದ ಶ್ರೀ ಕೆ.ಬಿ.ಪಿಳ್ಳಪ್ಪನವರ ವಿಗ್ರಹ ಸ್ಥಾಪನೆ ಮಾಡುವ ಬಗ್ಗೆ ಸ್ವತಃ ಶಾಸಕ ಪ್ರದೀಪ್ ಈಶ್ವರ್ ಅವರೇ ನೀಡಿದ್ದ ಭರವಸೆಯನ್ನು ಆರು ತಿಂಗಳಾದರೂ ಈಡೇರಿಸದ ಬಗ್ಗೆ ನಮ್ಮ ಕಾರ್ಯಕರ್ತ ಅಕಿಲ್ ರೆಡ್ಡಿ ಅವರು ಪ್ರಶ್ನೆ ಮಾಡಿದ್ದಾರೆ. ಪ್ರಶ್ನಿಸುವುದೇ ಅಪರಾಧವೇ? ಶಾಸಕರು ಪ್ರಶ್ನಾತೀತರೇ? ಧಮ್ಕಿ, ಬೆದರಿಕೆ ಹಾಕಿರುವ ವರ್ತನೆ ಖಂಡನೀಯ ಎಂದು ಜೆಡಿಎಸ್ ಕಿಡಿಕಾರಿದೆ.

ಕೀಳು ಭಾಷೆ, ವೈಯಕ್ತಿಕ ಚಾರಿತ್ರ್ಯಹರಣ ಸಹಿಸುವ ಪ್ರಶ್ನೆಯೇ ಇಲ್ಲ. ಅಲ್ಲದೆ, ಜಾತಿ ಹೆಸರು ತಂದು ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸಿರುವ ಈ ಗೂಂಡಾಗಳನ್ನು ಪೊಲೀಸರು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತೇವೆ. ಪಕ್ಷದ ಕಾರ್ಯಕರ್ತರು ಇಂತಹ ರೌಡಿ, ಗೂಂಡಾಗಳಿಗೆ ಹೆದರುವ ಅಗತ್ಯವಿಲ್ಲ. ನಿಮ್ಮೊಂದಿಗೆ ಜತೆ ಇಡೀ ಪಕ್ಷವಿದೆ ಎಂದು ಜೆಡಿಎಸ್ ಭರವಸೆ ನೀಡಿದೆ.

 

ಪ್ರದೀಪ್ ಈಶ್ವರ್ ರವರೇ, ಊರಿಗೆಲ್ಲಾ ಉಪದೇಶ ಮಾಡುತ್ತೀರಿ. ಆದರೆ, ನಿಮ್ಮ ಬೆಂಬಲಿಗರ ನಾಲಿಗೆಗಳು ಎಷ್ಟು ಹೊಲಸೆದ್ದು ಹೋಗಿವೆ ಎಂಬುದನ್ನು ಗಮನಿಸಿ. ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ ಸರಿ ದಾರಿಗೆ ತನ್ನಿ, ತಪ್ಪಿದರೆ ಅದನ್ನು ನಾವೇ ಮಾಡಬೇಕಾಗುತ್ತದೆ ಎಂದು ಪಕ್ಷ ಎಚ್ಚರಿಕೆ ನೀಡಿದೆ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top