ಕೊಪ್ಪಳ 21ನೇ ವಾರ್ಡ್‌ನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗ್ರಹ

ಕೊಪ್ಪಳ,: ನಗರಸಭೆ ಕೊಪ್ಪಳ ವ್ಯಾಪ್ತಿಯ 21ನೇ ವಾರ್ಡ್ ಕಳೆದೆರಡು ವರ್ಷಗಳಿಂದ ಹಾಳು ಕೊಂಪೆಯಂತಾಗಿದೆ. ವಾರ್ಡ್‌ನ ಚುನಾಯಿತ ಪ್ರತಿನಿಧಿ ಗುರುರಾಜ ಹಲಗೇರಿ ಅವರಿಗೆ ವಾರ್ಡ್‌ನ ಸಮಸ್ಯೆಗಳನ್ನು ಮನದಟ್ಟು ಮಾಡಿದಾಗ್ಯೂ ಯಾವುದೇ ಸೌಕರ್ಯಗಳು ಸಿಗುತ್ತಿಲ್ಲ. ಏನೇ ಸಮಸ್ಯೆ ಹೇಳಿದರೂ ವಾಟ್ಸಾಪ್‌ಗೆ ಕಳಿಸಿ ಎಂದು ಹೇಳುವ ಮೂಲಕ ವಾಟ್ಸಾಪ್ ಸದಸ್ಯ ಎಂಬ ಅನ್ವರ್ಥ ಪಡೆದಿದ್ದಾರೆಂದು ವಾರ್ಡ್‌ನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ ನಗರದ ಡಾ.ಸಿಂಪಿ ಲಿಂಗಣ್ಣ ರಸ್ತೆಯ ಶ್ರೀರಾಘವೇಂದ್ರ ಮೆಟಲ್ ಸ್ಟೋರ್ ಎದುರುಗಡೆ 21ನೇ ವಾರ್ಡ್‌ನ ಜಾಗೃತಿ ನಾಗರಿಕರ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು. ಸಮಿತಿಯ ಮುಖಂಡ ಬಸವರಾಜ ನೀರಲಗಿ ಮಾತನಾಡಿ, ರಸ್ತೆ, ಚರಂಡಿ, ಬೀದಿ ದೀಪ, ಸ್ವಚ್ಛತೆ, ಕಸ ವಿಲೇವಾರಿ ಬಕೆಟ್‍ಗಳು, ಶೌಚಾಲಯ ಇಲ್ಲದೇ ವಾರ್ಡ್‌ನ ನಾಗರಿಕರು ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಸವರಾಜ ಕರುಗಲ್ ಮಾತನಾಡಿ, ಮುಖ್ಯವಾಗಿ ಡಾ.ಸಿಂಪಿ ಲಿಂಗಣ್ಣ ರಸ್ತೆಯ ರಾಘವೇಂದ್ರ ಮೆಟಲ್ ಸ್ಟೋರ್ ಪಕ್ಕದಲ್ಲಿ ಹಾದು ಹೋಗಿರುವ ಒಳ ರಸ್ತೆ ತೀರಾ ಹದಗೆಟ್ಟಿದ್ದು, ಮುಖ್ಯ ರಸ್ತೆಯಿಂದ ಒಳರಸ್ತೆಗೆ ತೆರಳಬೇಕಾದರೆ ದಿನ್ನೆ ಹತ್ತಬೇಕು. ದಿನ್ನೆ ಸಂಪೂರ್ಣ ಹಾಳಾಗಿದ್ದು ನಿತ್ಯವೂ ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ನಾಗರಿಕರು ಎಡವುತ್ತಿದ್ದಾರೆ. ಇದನ್ನು ನಗರಸಭೆ ಸದಸ್ಯ ಜನಪ್ರತಿನಿಧಿಯಾದ ಗುರುರಾಜ ಹಲಗೇರಿ ರವರ ಬಳಿ ಸಾಕಷ್ಟು ಬಾರಿ ನಿವೇದಿಸಿಕೊಂಡರೂ ಅವರು ಕೊಡುವ ಉಡಾಫೆ ಉತ್ತರದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿ ಕಾರಿದರು. ಅರ್ಚನಾ ಬಾರ್ ಮತ್ತು ರೆಸ್ಟೋರೆಂಟ್ ಎದುರಿಗೆ ಇರುವ ನಾಲ್ವಾಡ್ ಅವರ ಮನೆ ಪಕ್ಕದ ಚರಂಡಿಯಿಂದ ದುರ್ನಾತ ಬೀರುತ್ತಿದ್ದು, ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆದಿಲ್ಲ. ಬೀದಿ ದೀಪಗಳಂತು ವಾರದಲ್ಲಿ ಎರಡು ದಿನ ಹೊತ್ತಿದರೆ ಐದು ದಿನ ಕತ್ತಲಲ್ಲೇ ವಾರ್ಡ್‌ನ ನಿವಾಸಿಗಳು ಬದುಕು ಸಾಗಿಸಬೇಕಿದೆ. ಇನ್ನು ನಗರಸಭೆಯ ಕಸದ ವಾಹನ ನಿತ್ಯ ಬರುತ್ತಿರುವುದೊಂದು ನೆಮ್ಮದಿಯ ವಿಚಾರ. ಆದಾಗ್ಯೂ 21ನೇ ವಾರ್ಡ್‌ನ ಮುಖ್ಯ ರಸ್ತೆ ಮತ್ತು ಎಲ್ಲ ಒಳರಸ್ತೆಗಳಲ್ಲಿ ಕಸದ ಡಬ್ಬಿಗಳ ಅಗತ್ಯವಿದೆ. ಪ್ರಮುಖವಾಗಿ ಡಾ.ಸಿಂಪಿ ಲಿಂಗಣ್ಣ ರಸ್ತೆಯ ಯಾವುದೇ ಭಾಗದಲ್ಲೂ ಸಾರ್ವಜನಿಕ ಶೌಚಾಲಯ ಇಲ್ಲ. ಈ ಭಾಗದಲ್ಲಿ ಸಾರ್ವಜನಿಕ ಶೌಚಾಲಯದ ಅಗತ್ಯವಿದೆ. ಇದರ ಜೊತೆಗೆ ಇನ್ನೂ ಹಲವು ಸಮಸ್ಯೆಗಳಿದ್ದು ನಗರಸಭೆ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು‌ ಪ್ರತಿಭಟನಾನಿರತರು ಒತ್ತಾಯಿಸಿದರು.


ನಗರಸಭೆ ಮಾಜಿ ಸದಸ್ಯ ಪ್ರಾಣೇಶ ಮಾದಿನೂರು ಮಾತನಾಡಿ, ಈ ಎಲ್ಲ ಸಮಸ್ಯೆಗಳನ್ನು ವಾರದೊಳಗೆ ಪರಿಹರಿಸದಿದ್ದರೆ ಇಂದಿನ ಸಾಂಕೇತಿಕ ಹೋರಾಟ ಉಗ್ರ ಚಳವಳಿಯ ಸ್ವರೂಪ ಪಡೆಯುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಪ್ರತಿಭಟನಾ ಸ್ಥಳಕ್ಕೆ ನಗರಸಭೆಯ ವ್ಯವಸ್ಥಾಪಕರು ಆಗಮಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿ, ಸೋಮವಾರ ಪೌರಾಯುಕ್ತರೊಂದಿಗೆ ವಾರ್ಡ್‌ನಲ್ಲಿ‌ ಸಂಚರಿಸಿ, ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಸಾರ್ವಜನಿಕರ ಆಗ್ರಹದ ಮೇರೆಗೆ ವಾರ್ಡ್‌ನಲ್ಲಿ ಸಂಚರಿಸಿ ಸಮಸ್ಯೆಗಳನ್ನು ಕಂಡು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮನವಿ ಪ್ರತಿಯನ್ನು ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ಧಪ್ಪ‌ ಚಿನ್ನೂರು, ಜಿಲ್ಲಾ ನಗರಾಭಿವೃದ್ಧಿ‌ ಕೋಶದ ಯೋಜನಾ‌ ನಿರ್ದೇಶಕರಿಗೆ, ಜಿಲ್ಲಾಧಿಕಾರಿಗಳಿಗೆ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ಸಂಗಣ್ಣ ಕರಡಿಯವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ 21ನೇ ವಾರ್ಡ್‌ನ ಜಾಗೃತಿ ನಾಗರಿಕರ ಸಮಿತಿಯ ಚಂದ್ರಶೇಖರಗೌಡ ಪಾಟೀಲ, ಶಿವಕುಮಾರ್ ಕೋಣಂಗಿ, ಬಸವರಾಜ‌ ಕೋರಿ, ಸುವರ್ಣ ನೀರಲಗಿ, ವಿಜಯಕುಮಾರ್ ಪದಕಿ, ಶ್ರೀನಿವಾಸ, ಎ.ಬಿ.ದಿಂಡೂರು, ಪ್ರವೀಣ ಶರ್ಮಾ, ರಾಕೇಶ್, ಮಂಜುನಾಥ್, ಶರಣಪ್ಪ‌ ಹಕ್ಕಂಡಿ, ಗಿರಿಜಮ್ಮ ಕರುಗಲ್, ದತ್ತುರಾವ್ ಪದಕಿ, ಕೃಷ್ಣ ಪದಕಿ, ವಾದಿರಾಜ ಪಾಟೀಲ, ಸಂಗಪ್ಪ ನಾಲ್ವಾಡ್, ಶಿವಕುಮಾರ್ ಪಾಟೀಲ ಸೇರಿದಂತೆ ಅನೇಕ 21ನೇ ವಾರ್ಡ್‌ನ ನಾಗರಿಕರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top