ಕ್ಯಾನ್ಸರ್ ಗೆ ತುತ್ತಾದ ಬಾಲಕಿ ಆಸೆ ಪೂರೈಸಿದ ಕಿಚ್ಚ ಸುದೀಪ್ 

ನಟ ಸುದೀಪ್ ಬರೀ ನಟನೆಗಷ್ಟೇ ಅಲ್ಲ, ತಮ್ಮ ಸಮಾಜಮುಖಿ ಕೆಲಸಗಳಿಂದಲೂ ಹೆಸರಾದವರು. ತಮ್ಮ ಕಿಚ್ಚ ಚಾರಿಟಬಲ್ ಟ್ರಸ್ಟ್ ನಿಂದ ಹಲವರಿಗೆ ನೆರವಾಗಿದ್ದಾರೆ. ಈಗ ಸುದೀಪ್ ಅವರು ಕ್ಯಾನ್ಸರ್ ಗೆ ತುತ್ತಾದ ಪುಟ್ಟ ಬಾಲಕಿಯ ಆಸೆಯನ್ನು ಪೂರೈಸಿದ್ದಾರೆ.  ಮೂರನೇ ಕ್ಲಾಸಿನಲ್ಲಿ ಓದುತ್ತಿರುವ ಒಂಬತ್ತನೇ ವಯಸ್ಸಿನ ಸಾಕ್ಷಿ, ನಾನ್ ಮೆಟಾಸ್ಟಾಟಿಕ್ ಆಸ್ಟೆಸರ್ಕೋಮ (ಬೋನ್ ಕ್ಯಾನ್ಸರ್) ಎಂಬ ಖಾಯಿಲೆಗೆ ತುತ್ತಾಗಿದ್ದಾಳೆ. ಮಹಿಂದರ್ ಮತ್ತು ಸುರೇಖಾ ರಾಣಿ ಅವರ ಮಗಳಾದ ಸಾಕ್ಷಿ, ಚಾಮರಾಜಪೇಟೆಯಲ್ಲಿರುವ ಶ್ರೀಶಂಕರ ಕ್ಯಾನ್ಸರ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆ ಸುದೀಪ್ ಅವರ ಅಭಿಮಾನಿ.

ರನ್ನ ಚಿತ್ರದ ‘ತಿತಲಿ’ ಹಾಡು ಎಂದರೆ ಆಕೆಗೆ ಬಹಳ ಅಚ್ಚುಮೆಚ್ಚು. ಗಂಭೀರ ಸ್ಥಿತಿಯಲ್ಲಿರುವ ಸಾಕ್ಷಿ, ತನ್ನ ಮೆಚ್ಚಿನ ನಟ ಸುದೀಪ್ ಅವರನ್ನು ಭೇಟಿ ಮಾಡುವ ಆಸೆ ವ್ಯಕ್ತಪಡಿಸಿದ್ದಳು. ಈ ವಿಷಯ ಸುದೀಪ್ ಅವರ ಕಿವಿಗೂ ಬಿದ್ದಿತ್ತು.  ಶಂಕರ ಆಸ್ಪತ್ರೆಗೆ ಆಗಮಿಸಿದ ಸುದೀಪ್, ಆಕೆಯ ಜೊತೆಗೆ ಸ್ವಲ್ಪ ಸಮಯ ಕಳದಿದ್ದಾರೆ. ಆಕೆಗೆ ಆಟೋಗ್ರಾಫ್ ನೀಡಿ ಮನಸ್ಸು ಸಂತೋಷಪಡಿಸಿದ್ದಾರೆ. ಆಕೆಯ ಚಿಕಿತ್ಸೆಗೆ ಸಹಾಯಹಸ್ತ ಚಾಚಿದ್ದಾರೆ. ತನ್ನನ್ನು ಭೇಟಿ ಮಾಡಿ ಶುಭ ಹಾರೈಸಿರುವ ಸುದೀಪ್ ಅವರನ್ನು ನೋಡಿ ಸಾಕ್ಷಿ ಬಹಳ ಖುಷಿಯಾಗಿದ್ದಾಳೆ. ಸಾಕ್ಷಿ ಅವರ ತಂದೆ ಮಹಿಂದರ್ ಕಾರ್ಪೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ತಾಯಿ ಸುರೇಖಾ ರಾಣಿ ಗೃಹಿಣಿಯಾಗಿದ್ದಾರೆ. ಬಡತನದ ನಡುವೆಯೇ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿರುವ ಈ ದಂಪತಿ ಮತ್ತು ಸಾಕ್ಷಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ, ಸುದೀಪ್ ಅವರ ಈ ಸಹಾಯ ಮತ್ತು ಹೃದಯವಂತಿಕೆಗೆ ಧನ್ಯವಾದ ಸಲ್ಲಿಸಿದ್ದಾರೆ.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top