ನವದೆಹಲಿ: 38ನೇ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯ ಭಾಗವಾಗಿ, ದೇವಭೂಮಿ ಉತ್ತರಾಖಂಡ ಭಾರತದ ಪ್ರಾಚೀನ ಯುದ್ಧಕಲೆಯಾದ ಕಲರಿಪಯತ್ತಿಗೆ ಆತಿಥ್ಯ ವಹಿಸಿತು. ಜನವರಿ 29 ಮತ್ತು 30, 2025ರಂದು ಹರಿದ್ವಾರದ ರೋಷನ್‌ಬಾದ್ ಪೋಲಿಸ್ ಲೈನ್ ಕ್ರೀಡಾಂಗಣದಲ್ಲಿ ನಡೆದ 11 ಸ್ಪರ್ಧೆಗಳಲ್ಲು 19 ಸ್ಪರ್ಧಿಗಳು, 4 ಕೋಚ್‌ಗಳು, 2 ತಾಂತ್ರಿಕ ಅಧಿಕಾರಿ ಮತ್ತು 1 ರಾಷ್ಟ್ರೀಯ ಕೋಚ್ ಒಳಗೊಂಡ ಕರ್ನಾಟಕ ತಂಡ ಭಾಗವಹಿಸಿತು.
ಅದ್ಭುತ ಕ್ರೀಡಾ ಕೌಶಲ್ಯ ಮತ್ತು ಚಾತುರ್ಯ ಪ್ರದರ್ಶಿಸಿದ ಕರ್ನಾಟಕ ತಂಡ 17 ಪದಕಗಳನ್ನು ಗಳಿಸಿ, ಒಟ್ಟು ಕಲರಿಪಯತ್ತು ಟೂರ್ನಮೆಂಟ್‌ನಲ್ಲಿ ಪ್ರಥಮ ರನ್ನರ್-ಅಪ್ ಎಂದು ಘೋಷಿತವಾಯಿತು. ಖಡ್ಗ ಮತ್ತು ಗುರಾಣಿ ವಿಭಾಗದಲ್ಲಿ ಬಿನೀಶ್ ಎ.ಎಂ. ಮತ್ತು ಹರಿನಾಥ್ ಯು. ಅವರು ಚಿನ್ನದ ಪದಕವನ್ನು ಗೆದ್ದರು. ಆಯುಧ ವಿಭಾಗದಲ್ಲಿ, ಅಜಿತ್ ಪಿ. ಮತ್ತು ಜಿತು ಪಿ.ಎಸ್. ಅವರು ಖಡ್ಗ ಮತ್ತು ಖಡ್ಗ ವಿಭಾಗದಲ್ಲಿ ಬೆಳ್ಳಿ ಜಯಿಸಿದರು. ಉಪಾಸನಾ ಗುರುಜರ್ ಮತ್ತು ಶ್ರೀಪ್ರದ ಭಾವಾಗ್ನ ಅರವೇಟಿ ಅವರು ಖಡ್ಗ ಮತ್ತು ಖಡ್ಗ ವಿಭಾಗದಲ್ಲಿ ಕಂಚು ಪಡೆದರು, ಉಪಾಸನಾ ಗುರುಜರ್ ಮತ್ತು ಭಾವನಾ ಬಿಪಿನ್ ಉರುಮಿ ಮತ್ತು ಗುರಾಣಿ ವಿಭಾಗದಲ್ಲಿ ಕಂಚು ಪಡೆದರು. ಅಜಿತ್ ಪಿ. ಮತ್ತು ಜಿತು ಪಿ.ಎಸ್. ಅವರು ಉದ್ದ ದಂಡ (ಲಾಂಗ್ ಸ್ಟಾಫ್) ವಿಭಾಗದಲ್ಲಿ ಕಂಚಿನ ಪದಕ ಪಡೆದರು. ಉರುಮಿ ವೀಶಲ್ (ನಮನೀಯ ಖಡ್ಗ) ವಿಭಾಗದಲ್ಲಿ ಉಪಾಸನಾ ಗುರುಜರ್ ಮತ್ತು ಜಿತು ಸಿ.ಪಿ. ಬೆಳ್ಳಿ ಪದಕ ಜಯಿಸಿದರು.
ವೈಯಕ್ತಿಕ ಸ್ಪರ್ಧಾ ವಿಭಾಗದಲ್ಲಿ, ಶ್ರೇಯಸ್ ಹರಿಹರನ್ ಮತ್ತು ಪ್ರವೀಣ್ ಪಿ. ಅವರು ಕ್ರಮವಾಗಿ ಮೇಪಯಟ್ಟು ಮತ್ತು ಚುವಡು ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಶ್ರೀಪ್ರದ ಭಾವಾಗ್ನ ಅರವೇಟಿ ಮತ್ತು ಭಾವನಾ ಬಿಪಿನ್ ಕ್ರಮವಾಗಿ ಮೇಪಯಟ್ಟು ಮತ್ತು ಹೈಕಿಕ್ ವಿಭಾಗದಲ್ಲಿ ಕಂಚು ಪಡೆದರು. ಸ್ಪರ್ಧೆಯ ವೇಳೆ ಗಾಯಗೊಂಡರೂ ಉರುಮಿ ಮತ್ತು ಗುರಾಣಿ ಯುದ್ಧವನ್ನು ನಿಲ್ಲಿಸದೆ ಹೋರಾಡಿದ ಸಿರಾಜ್ ಎ.ಕೆ. ಮತ್ತು ಅಖಿಲ್ ಎಸ್. ಅವರ ಶೌರ್ಯಕ್ಕೆ ಕಲರಿಪಯತ್ತು ಸಮುದಾಯದ ಮೆಚ್ಚುಗೆ ದೊರಕಿತು. ಸ್ಪರ್ಧೆಯ ಆರಂಭದಲ್ಲಿಯೇ ಗಾಯಗೊಂಡಿದ್ದರೂ ಹೋರಾಡಿ ಖಡ್ಗ ಮತ್ತು ಗುರಾಣಿ ವಿಭಾಗದಲ್ಲಿ ಕಂಚು ಗೆದ್ದ ಶ್ರೀಪ್ರದ ಅವರ ಧೈರ್ಯ ಮುಂದಿನ ಪೀಳಿಗೆಯ ಯೋಧರಿಗೆ ಪ್ರೇರಣೆ ಆಗಲಿದೆ.
ಈ ಸಾಧನೆಯು ಕರ್ನಾಟಕ ರಾಜ್ಯದ ಮಾನ್ಯ ಕ್ರೀಡಾ ಸಚಿವ ಶ್ರೀ. ನಾಗೇಂದ್ರ ಬಿ., ಕರ್ನಾಟಕ ಕ್ರೀಡಾ ಪರಿಷತ್ತು ಮತ್ತು ಕರ್ನಾಟಕ ಒಲಿಂಪಿಕ್ ಸಂಘದ ಅಚಲ ಬೆಂಬಲದಿಂದ ಸಾಧ್ಯವಾಯಿತು. ಆದರೆ, ಕಲರಿಪಯತ್ತನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿಲ್ಲದೆ ಪ್ರದರ್ಶನಾತ್ಮಕ ಕ್ರೀಡೆಗಳ ಪಟ್ಟಿಗೆ ಸೇರಿಸಿದ್ದರಿಂದ ಈ ಪದಕಗಳ ಪಟ್ಟಿ ರಾಜ್ಯದ ಒಟ್ಟು ಪದಕ ಗಣನೆಗೆ ಸೇರದಿರುವುದು ನೋವು ತಂದಿದೆ. ಭಾರತೀಯ ಕಲರಿಪಯತ್ತು ಫೆಡರೇಶನ್‌ಗೆ ಸಂಬಂಧಿಸಿದ ಕರ್ನಾಟಕದ ಏಕೈಕ ಸಂಸ್ಥೆಯಾದ ಕರ್ನಾಟಕ ಕಲರಿಪಯತ್ತು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀ. ಸೂರ್ಯನಾರಾಯಣ ವರ್ಮ ಅವರು ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನೆ ಸಲ್ಲಿಸಿದರು ಮತ್ತು ಈ ಯಶಸ್ಸಿನ ಹಿಂದಿರುವ ಕೋಚ್‌ಗಳು ಮತ್ತು ತಾಂತ್ರಿಕ ತಂಡದ ನಿರಂತರ ಪರಿಶ್ರಮವನ್ನು ಪ್ರಶಂಸಿಸಿದರು. ಬರುವ ಕಲರಿಪಯತ್ತು ಸೀಸನ್‌ಗಾಗಿ ತಂಡಕ್ಕೆ ಶುಭ ಹಾರೈಸಿದರು.