ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಕ್ಕಳೊಂದಿಗೆ ಕರಾಟೆ ಪ್ರದರ್ಶನ

ಚಿಕ್ಕಬಳ್ಳಾಪುರ,9 :ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕಿರುಕುಳ ಪ್ರಕರಣಗಳನ್ನು ಶೂನ್ಯಗೊಳಿಸುವ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಆತ್ಮರಕ್ಷಣೆಗಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೂಪಿಸಿರುವ “ಓಬವ್ವ ಆತ್ಮ ರಕ್ಷಣಾ ಕಲೆಯ ಕೌಶಲ್ಯಗಳ ತರಬೇತಿ” ಕಾರ್ಯಕ್ರಮಕ್ಕೆ ಇಂದು ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಚಾಲನೆ ನೀಡಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಂದಿ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಹಾಗೂ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ, “ಓಬವ್ವ ಆತ್ಮ ರಕ್ಷಣಾ ಕಲೆಯ ಕೌಶಲ್ಯಗಳ ತರಬೇತಿ” ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು.

ವೀರ ಮಹಿಳೆ ‘ಒನಕ್ಕೆ ಓಬವ್ವ’ ಅವರು ತನ್ನ ಶಕ್ತಿ, ಸಾಮರ್ಥ್ಯ ಹಾಗೂ ಪರಾಕ್ರಮದಿಂದ ಚಿತ್ರದುರ್ಗ ಕೋಟೆಯನ್ನು ಆಕ್ರಮಿಸಲು ಬಂದಂತಹ ಹೈದರಾಲಿ ಸೈನ್ಯದ ನೂರಾರು ಸೈನಿಕರನ್ನು ಸದೆಬಡೆದು, ಮದಕರಿ ನಾಯಕನ ಕೋಟೆಯನ್ನು ಸಂರಕ್ಷಿಸಿ ಒಬ್ಬ ಸಾಮಾನ್ಯ ಮಹಿಳೆ ವೀರ ಮಹಿಳೆಯಾಗಿ ಚರಿತ್ರಾರ್ಹರಾಗಿದ್ದಾರೆ . ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಹೆಣ್ಣು ಮಕ್ಕಳ ರಕ್ಷಣಾ ಕೌಶಲ್ಯ ಕಲೆಗಳ ತರಬೇತಿಯನ್ನು ನೀಡುತ್ತಿರುವುದು ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಓಬವ್ವ ರವರನ್ನು ಸ್ಫೂರ್ತಿಯಾಗಿಸಿಕೊಂಡು ಮನೋಸ್ಥೈರ್ಯವನ್ನು ಬೆಳೆಸಿಕೊಂಡು ಸಮಾಜದಲ್ಲಿನ ವಿಧ್ವಂಸಕ ಕೃತ್ಯಗಳನ್ನು ಸ್ವಯಂ ಎದುರಿಸುವ ಯುಕ್ತಿ ಮತ್ತು ಶಕ್ತಿಯನ್ನು ಬೆಳೆಸಿಕೊಂಡು ಧೈರ್ಯಶಾಲಿಯಾಗಿ ಬದುಕಬೇಕು ಎಂದು ಕರೆ ನೀಡಿದರು. ಕರಾಟೆಯಿಂದ ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾಗಿ

ಕರಾಟೆಯ ಈ ತರಬೇತಿಯನ್ನು ಹೆಣ್ಣುಮಕ್ಕಳು ಗಂಭೀರವಾಗಿ ಪರಿಗಣಿಸಿ ಶಿಸ್ತು ಬದ್ದವಾಗಿ ಕಲಿತು ಅಂತಾರಾಷ್ಟ್ರೀಯ ಕ್ರೀಡಾಪಟುಗಳಾಗಿ ಹೊರಹೊಮ್ಮುವಂತೆ ಸಚಿವರು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಕರಾಟೆ ಪ್ರದರ್ಶನ ನೀಡಿದರು. ಜೊತೆಗೆ ಕರಾಟೆ ತರಬೇತುದಾರ ಗೋಪಾಲ ಕೃಷ್ಣ ಅವರ ಸಹಕಾರದಿಂದ ಸಚಿವ ಎಂಟಿಬಿ ನಾಗರಾಜು ಅವರು ವಿದ್ಯಾರ್ಥಿನಿಯರೊಂದಿಗೆ ಕರಾಟೆ ಪ್ರದರ್ಶಿಸಿ ಮಕ್ಕಳಿಗೆ ಉತ್ಸಾಹ ತುಂಬಿ ಮಕ್ಕಳಲ್ಲಿ ಉತ್ಸಾಹ ತುಂಬಿದರು. ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನಗಳ ಕಾಲ ಕರಾಟೆ ತರಬೇತಿಯನ್ನು ನೀಡುತ್ತದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಪಿ.ಶಿವಶಂಕರ್,ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಪ್ರೊ. ಕೋಡಿರಂಗಪ್ಪ, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷರಾದ ಆನಂದರೆಡ್ಡಿ (ಬಾಬು), ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಶೋಕ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಾಮ್ ರೆಡ್ಡಿ, ಚಿಕ್ಕಬಳ್ಳಾಪುರ ತಾಲ್ಲೂಕು ತಹಸೀಲ್ದಾರ್ ಗಣಪತಿ ಶಾಸ್ತ್ರಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top