ಬೆಂಗಳೂರು: ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಪರಿಶಿಷ್ಟ ಸಮುದಾಯದಲ್ಲಿ ಒಳಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವ ಸಂಬಂಧ ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ವಿವಿಧ ದಲಿತಪರ ಸಂಘಟನೆಗಳು ಒತ್ತಾಯಿಸಿವೆ. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರೀಡಂ ಪಾರ್ಕನಲ್ಲಿ 31 ರಂದು ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಧಾನ ಸಂಚಾಲಕ ಬಸವರಾಜ್ ಕೌತಾಳ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲೆಮಾರಿ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಮಾರ್ಕಂಡೇಯ ನಾಯ್ಕ, ಬಹುಜನ ಸಮಾಜದ ಮುಖಂಡ ಗುರುಮೂರ್ತಿ, ಪಿಟಿಸಿಎಲ್ ಭೂಮಿ ವಂಚಿತರ ಹೋರಾಟ ಸಮಿತಿ ಮುಖಂಡ ಮಂಜುನಾಥ್, ಪ್ರಜಾಸತ್ತಾತ್ಮಕ ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ವೇಣು ಗೋಪಾಲ್ ಮೌರ್ಯ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಮರಾಟ, ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ವಸಂತ್ ಕುಮಾರ್ ಮೌರ್ಯ ಅವರು ಸರ್ಕಾರ ಕೂಡಲೇ ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರ ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಹಾಲಿ ಸರ್ಕಾರ ತುರ್ತಾಗಿ ಇದನ್ನು ಸಂವಿಧಾನದ 9 ಅನುಸೂಚಿಯಲ್ಲಿ ಸೇರಿಸುವ ಬಗ್ಗೆ ತಮಿಳುನಾಡು ರಾಜ್ಯ ಸರ್ಕಾರ ಅನುಸರಿಸಿರುವ ಕಾನೂನು ಸಿಂಧುತ್ವದ ಬಗ್ಗೆ ಸರ್ಕಾರ ಮುಕ್ತ ಮನಸ್ಸಿನಿಂದ ಎಲ್ಲಾ ಬಗೆಯ ಸಂಸದೀಯ ವ್ಯವಹಾರಗಳನ್ನು ಪೂರೈಸಬೇಕು ಎಂದರು.

ಉಪಜಾತಿಗಳ ವರ್ಗೀಕರಣ ಪ್ರಕ್ರಿಯೆಯನ್ನು ಆಂಧ್ರಪ್ರದೇಶ ಸರ್ಕಾರ ನಿರ್ವಹಿಸಿರುವ ಮಾದರಿಯಲ್ಲಿಯನ್ನೇ ಅನುಸರಿಸಬೇಕು. ಕಳೆದ ಸರ್ಕಾರ ವಿಭಜನೆ ಮಾಡಿರುವ ಗುಂಪುಗಳಲ್ಲಿ ಚಲವಾದಿ ಮತ್ತು ಮಾದಿಗ ಸಮುದಾಯಗಳ ಉಪ ಜಾತಿಗಳು ಅವುಗಳಿಂದ ದೂರಸರಿದಿವೆ. ಸದಾಶಿವ ಆಯೋಗ ನೀಡಿರುವ ಅನುಪಾತಕ್ಕೆ ಅನುಸಾರವಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ 2023ರ ವಿಧಾನ ಸಭಾ ಚುನಾವಣೆಯ ಪಕ್ಷದ ಪ್ರಣಾಳಿಕೆಯನ್ನು ಮಂಡಿಸಿರುವಂತೆ ಒಳ ಮೀಸಲಾತಿ ಜಾರಿಗೆ ತರಬೇಕಾದ ಸಂಸದೀಯ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಅನೇಕ ಸ್ವರೂಪದ ನಿಗಮ, ಮಂಡಳಿ, ಯೋಜನಾ ಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ನಿರ್ದೇಶಕರು ಮತ್ತು ಸದಸ್ಯರನ್ನು ವಿವಿಧ ಜಿಲ್ಲಾ ಹಾಲು ಉತ್ಪಾದಕ ಒಕ್ಕೂಟಗಳಿಗೆ ನಾಮನಿರ್ದೇಶನ ಮಾಡುವಾಗ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು