ಚಿಕ್ಕ ತುಮಕೂರು ಗ್ರಾಮದಲ್ಲಿ ಕಲುಷಿತ ನೀರಿನಿಂದ ಸಮಸ್ಯೆ : DHO ಮನವಿಗೆ ತಕ್ಷಣವೇ ಸ್ಪಂದಿಸಿದ ಎಂ.ಎಸ್. ರಾಮಯ್ಯ ಯೂಥ್ ಫೌಂಡೇಷನ
ಬೆಂಗಳೂರು: ಎಂ.ಎಸ್. ರಾಮಯ್ಯ ಯೂಥ್ ಫೌಂಡೇಷನ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕ ತುಮಕೂರಿನಲ್ಲಿಂದು ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಜನತೆ ತೀವ್ರ ತೊಂದರೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಡಿದ ಮನವಿಗೆ ತಕ್ಷಣವೇ ಎಂ.ಎಸ್. ರಾಮಯ್ಯ ಯೂಥ್ ಫೌಂಡೇಷನ್ ಸ್ಪಂದಿಸಿ ಆರೋಗ್ಯ ಶಿಬಿರಕ್ಕೆ ವ್ಯವಸ್ಥೆ ಮಾಡಿತು.

ಎಂ.ಎಸ್. ರಾಮಯ್ಯ ಯೂಥ್ ಫೌಂಡೇಷನ್ ಮುಖ್ಯಸ್ಥರು ಮತ್ತು ಯುವ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಸಾರಥ್ಯದಲ್ಲಿ ಹೃದಯ, ಮೂಳೆ, ಸ್ತ್ರೀರೋಗ, ಕ್ಯಾನ್ಸರ್ ಸೇರಿದಂತೆ 18 ವಿವಿಧ ರೋಗಗಳನ್ನು ವೈದ್ಯರು ತಪಾಸಣೆ ಮಾಡಿದರು. ಶುದ್ಧ ಕುಡಿಯುವ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಎಂ.ಎಸ್. ರಾಮಯ್ಯ ಆಸ್ಪತ್ರೆಯ ತಜ್ಞ ವೈದ್ಯರು ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ಪರಿಕರಗಳೊಂದಿಗೆ ಇಡೀ ದಿನ ರೋಗಿಗಳನ್ನು ನೋಂದಣಿ ಮಾಡಿಕೊಂಡು ಪ್ರತಿಯೊಬ್ಬರನ್ನು ಸಮಗ್ರವಾಗಿ ಪರೀಕ್ಷೆ ಮಾಡಿದರು.

ಈ ಸಂದರ್ಭದಲ್ಲಿ ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, “ಸದೃಢವಾದ ದೇಹ ಇದ್ದರೆ ಸದೃಢವಾದ ಧ್ಯೇಯ ಬೆಳೆಯುತ್ತದೆ. ಪ್ರತಿಯೊಬ್ಬರು ಆರೋಗ್ಯವಂತರಾದಾಗ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ. ಆರೋಗ್ಯ ಪ್ರತಿಯೊಬ್ಬರ ಮೂಲಭೂತ ಹಕ್ಕು. ದೈಹಿಕ ನ್ಯೂನತೆಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯವಂತ ಬದುಕು ರೂಪಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
