ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅವರ ಜತೆ ನಡೆದ ಜಂಟಿ ಪತ್ರಿಕಾಗೋಷ್ಠಿ

ಬೆಂಗಳೂರು,ಫೆ,18 : ದೇಶದ ಸಂವಿಧಾನದಲ್ಲಿ ಮಕ್ಕಳ ಶಿಕ್ಷಣಕ್ಕೆ ವಿಶೇಷ ಹಕ್ಕು ನೀಡಲಾಗಿದೆ. ಶಾಲೆ, ಕಾಲೇಜು ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯಲು ಅವರಿಗೆ ಈ ಹಕ್ಕಿನ ಮೂಲಕ ಅವಕಾಶ ನೀಡಲಾಗಿದೆ. ಅವರವರ ಧರ್ಮ ಹಾಗೂ ಭಾವನೆ ರಕ್ಷಣೆಯಲ್ಲೂ ಅವರಿಗೆ ಹಕ್ಕಿದೆ. ಆದರೆ ಸಮವಸ್ತ್ರದ ವಿಚಾರದಲ್ಲಿ ಇದುವರೆಗೂ ಯಾರಿಗೂ ನಿರ್ಬಂಧವಿಲ್ಲ. ಸರ್ಕಾರ ಫೆ.5 ರವರೆಗೂ ಈ ವಿಚಾರದಲ್ಲಿ ಯಾವುದೇ ಮಾರ್ಗಸೂಚಿ ನೀಡಿರಲಿಲ್ಲ. ಆದರೆ ಸರ್ಕಾರ ಈಗ ಏಕಾಏಕಿ ಈ ಹೊಸ ಮಾರ್ಗಸೂಚಿ ನೀಡಿರುವುದೇಕೆ? ಇದು ಕೇವಲ ಒಂದು ಶಾಲೆ ಸಮಸ್ಯೆಯಾಗಿ ಉಳಿದುಕೊಂಡಿಲ್ಲ. ಜೈನ ಧರ್ಮವಾಗಲಿ, ಸಿಖ್ ಧರ್ಮವಾಗಲಿ ಹಾಗೂ ಇತರೆ ಧರ್ಮದವರು ತಮ್ಮ ಆಚರಣೆ ಭಾಗವಾಗಿ ತಲೆಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ. ಇದು ಕೇವಲ ಸ್ಕಾರ್ಫ್ ಮಾತ್ರ. ಅಲ್ಪಸಂಖ್ಯಾತರಲ್ಲಿ ಕೆಲವರು ಇದನ್ನು ಹಾಕಿಕೊಂಡರೆ ಮತ್ತೆ ಕೆಲವರು ಹಾಕಿಕೊಳ್ಳುವುದಿಲ್ಲ. ಇದನ್ನು ಹಾಕಲೇಬೇಕು ಅಥವಾ ಹಾಕಲೇಬಾರದು ಎಂದು ಆದೇಶಿಸಲು ಸಾಧ್ಯವಿಲ್ಲ. ಈಗ ಮೂಲಭೂತ ಹಕ್ಕಿಗೇ ಧಕ್ಕೆಯಾಗಿದೆ. ಈ ವಿಚಾರದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಇದರ ಹೊರತಾಗಿಯೂ ಒಬ್ಬೊಬ್ಬ ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವರು, ಕೇವಲ ಪ್ರಾಥಮಿಕ ಶಿಕ್ಷಣದಲ್ಲಿ ಮಾತ್ರ ಗೊಂದಲವಿದ್ದು, ಉನ್ನತ ಶಿಕ್ಷಣ ಕಾಲೇಜುಗಳಲ್ಲಿ ಈ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದಾರೆ.

ಸರ್ಕಾರ ಅಭಿವೃದ್ಧಿ ಸಮಿತಿ ಎಲ್ಲಿದೆ ಎಂದು ತೋರಿಸಲಿ. ಈಗ ಅವರು ಹೊಸದಾಗಿ ಈ ಸಮಿತಿ ರಚಿಸಲು ಸಾಧ್ಯವಿಲ್ಲ. ಯಾವುದೇ ಸಂಸ್ಥೆ ಪ್ರಾರಂಭವಾಗಬೇಕಾದರೆ ಆರಂಭದಲ್ಲಿ ಸರ್ಕಾರ ಮಾರ್ಗದರ್ಶನ ನೀಡಿರುತ್ತದೆ. ಆದರೆ ಈಗ ಅದನ್ನು ಮಧ್ಯದಲ್ಲಿ ಮಾಡಲು ಸಾಧ್ಯವಿಲ್ಲ. ನಾನು ಒಬ್ಬ ಅಧಿಕಾರಿಯನ್ನೂ ಈ ವಿಚಾರದಲ್ಲಿ ದೂರಲು ಇಚ್ಛಿಸುವುದಿಲ್ಲ. ಸರ್ಕಾರದ ಒತ್ತಡ ಇಲ್ಲದೇ ಅಧಿಕಾರಿ ಇಂತಹ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ. ಪೊಲೀಸರಿಗೂ ಶಿಕ್ಷಣ ಸಂಸ್ಥೆಗಳಿಗೆಗೂ ಏನು ಸಂಬಂಧ? ಪೊಲೀಸ್ ಅಧಿಕಾರಿಗಳು ಎಲ್ಲರಿಗೂ ನೀವು ಇದೇ ರೀತಿ ಮಾಡಬೇಕು ಎಂದು ಸೂಚನೆ ನೀಡುತ್ತಿರುವುದೇಕೆ? ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ದೇಶದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿ ಪಡಿಸಲು ಅವರಿಗೇನು ಹಕ್ಕಿದೆ? ಈ ಸಮುದಾಯದ ಹೆಣ್ಣು ಮಕ್ಕಳು ಏಕಾಏಕಿಯಾಗಿ ಹಿಜಾಬ್ ಧರಿಸುತ್ತಿಲ್ಲ. ಇಷ್ಟು ದಿನಗಳ ಕಾಲವೂ ಅವರು ಹಿಜಾಬ್ ಧರಿಸುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅನೇಕ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲೂ ಮುಸಲ್ಮಾನ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಶಿಕ್ಷಣ ಸಂಸ್ಥೆಗೆ ಸೇರುವಾಗ ಜಾತಿ, ಧರ್ಮ ನೋಡಿಕೊಂಡು ಸೇರಲು ಸಾಧ್ಯವೇ? ಒಂದೊಂದು ಧರ್ಮಕ್ಕೆ ಒಂದೊಂದು ವಿದ್ಯಾಭ್ಯಾಸ ಮಾಡಲು ಸಾಧ್ಯವೇ? ಜನ ತಮ್ಮ ಧರ್ಮಕ್ಕೆ ಅನುಸಾರವಾಗಿ ಮೂಗುತಿ, ಓಲೆ, ಜನಿವಾರ, ಸ್ಕಾರ್ಫ್ ಧರಿಸುತ್ತಾರೆ. ಅದನ್ನು ಬೇಡ ಎಂದು ಹೇಳಲು ಸಾಧ್ಯವೇ? ಹಾಗೆ ಹೇಳಲು ಆಗುತ್ತದೆಯೇ? ಈ ಘಟನೆಯಿಂದ ದೇಶದ ಮುಂದೆ ರಾಜ್ಯಕ್ಕೆ ಕಳಂಕ ಬರುತ್ತಿದೆ. ಬಿಜೆಪಿ ಸರ್ಕಾರ ಈ ವಿಚಾರದಿಂದ ಕೇವಲ ಶಾಂತಿಯನ್ನು ಮಾತ್ರ ಕದಡುತ್ತಿಲ್ಲ. ಮುಂದೆ ಕರ್ನಾಟಕ ರಾಜ್ಯದಲ್ಲಿ ಯಾರು ಕೂಡ ಬಂಡವಾಳ ಹೂಡುವುದಿಲ್ಲ. ಇದರಿಂದ ನಿರುದ್ಯೋಗ ಸೃಷ್ಟಿಯಾಗುತ್ತದೆ. ಇದರಿಂದ ನಾಗರೀಕ ದಂಗೆ ಆಗುತ್ತವೆ. ಇದಕ್ಕೆಲ್ಲ ನೀವೇ ಅಡಿಪಾಯ ಹಾಕುತ್ತಿದ್ದೀರಿ. ಈ ದೇಶದಲ್ಲಿ ಜಾಗತಿಕ ಬಂಡವಾಳ ಹೂಡಿಕೆಯನ್ನು ಮೊದಲ ಬಾರಿಗೆ ಆರಂಭಿಸಿದ್ದೇ ಕರ್ನಾಟಕ ರಾಜ್ಯದಲ್ಲಿ. ಅದೂ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ. ಈಗಿನ ಬೆಳವಣಿಗೆ ಹೀಗೆ ಮುಂದುವರಿದರೆ ಮುಂದೆ ಯಾರೂ ಕೂಡ ಬಂಡವಾಳ ಹೂಡಿಕೆಗೆ ಮುಂದೆ ಬರುವುದಿಲ್ಲ. ದೇಶದ ಆರ್ಥಿಕತೆ ಮೇಲೆ ಇದು ಪರಿಣಾಮ ಬೀರಲಿದೆ. ಇದನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ರಾಜಕೀಯ ಸ್ವಾರ್ಥ ಬದಿಗಿಟ್ಟು, ಈ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಗೆ ನಾವು ಹೋರಾಟ ಮಾಡಬೇಕಾಗಿದೆ.

ಇದುವರೆಗೂ ಹೇಗೆ ಎಲ್ಲವೂ ಸರಾಗವಾಗಿ ನಡೆದುಕೊಂಡು ಹೋಗುತ್ತಿತ್ತೋ ಅದೇ ರೀತಿ ಮುಂದುವರಿಸಿಕೊಂಡು ಹೋಗಲು ಅವಕಾಶ ಕಲ್ಪಿಸಿ. ನ್ಯಾಯಾಲಯದ ಆದೇಶ ಪಾಲಿಸೋಣ. ಕೋರ್ಟ್ ಆದೇಶ ತಿರುಚಿ ಅಧಿಕಾರಿಗಳ ಮೂಲಕ ಕಿರುಕುಳ ನೀಡಿದರೆ, ಅವರ ಭವಿಷ್ಯ ಏನಾಗಬೇಕು? ಯಾರಾದರೂ ಧರ್ಮ ಬಿಡಲು ಸಾಧ್ಯವೇ? ನನಗೆ ಯಾರಾದರೂ ಬಂದು ಧರ್ಮ, ಹೆಸರು ಬದಲಾಯಿಸಿಕೊಳ್ಳಿ ಎಂದರೆ ನಾನು ಬದಲಾಯಿಸಿ ಕೊಳ್ಳುವುದಿಲ್ಲ. ಈ ದೇಶದಲ್ಲಿ ಎಲ್ಲ ಧರ್ಮಗಳ ಸಂಸ್ಕೃತಿ ಕಾಪಾಡಿಕೊಂಡು ಹೋಗುವುದೇ ನಮ್ಮ ಶಕ್ತಿ. ಇದನ್ನು ಹಾಳು ಮಾಡಲು ಹೊರಟಿರುವುದು ಸರಿಯಲ್ಲ. ಸರ್ಕಾರ ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿದೆ. ಇಂತಹ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರ್ಕಾರದ ಜವಾಬ್ದಾರಿ ಅಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್, ಕುವೆಂಪು ಅವರೆಲ್ಲ ಏನು ಹೇಳಿದ್ದಾರೋ ಅದನ್ನೇ ಪಾಲಿಸಿ ಎಂದು ನಾವು ಹೇಳುತ್ತಿದ್ದೇವೆ.’ ಇಂದು ಕೆಲವು ಕಡೆಗಳಲ್ಲಿ ಕುಂಕುಮ ತೆಗೆಸಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ಕುಂಕುಮವನ್ನು ತೆಗೆಸಬಾರದು, ಸ್ಕಾರ್ಫ್ ಅನ್ನೂ ತೆಗೆಸಬಾರದು. ಇಷ್ಟು ದಿನ ಹೇಗೆ ನಡೆದುಕೊಂಡು ಬಂದಿದೆಯೋ ಅದನ್ನೇ ಮುಂದುವರಿಸಬೇಕು. ಹೊಸದಾಗಿ ಏನನ್ನೂ ಆರಂಭಿಸುವುದು ಬೇಡ’ ಎಂದರು.

Leave a Comment

Your email address will not be published. Required fields are marked *

Translate »
Scroll to Top