ವಿರೋಧ ಪಕ್ಷದ ನಾಯಕರ ಜಂಟಿ ಪತ್ರಿಕಾಗೋಷ್ಠಿ

ರಾಮನಗರ,ಜನವರಿ, 13 : ಕಳೆದ ನಾಲ್ಕು ದಿನಗಳಿಂದ ನಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯಲು ಕಾರಣೀಕರ್ತರಾದಂತಹ ಪಕ್ಷದ ಎಲ್ಲಾ ನಾಯಕರಿಗೂ, ಕಾರ್ಯಕರ್ತರಿಗೂ, ಸಂಘ ಸಂಸ್ಥೆಗಳ ಸದಸ್ಯರಿಗೂ, ಚಿತ್ರ ರಂಗದ ಕಲಾವಿದರಿಗೂ, ಮಾಧ್ಯಮ ಮಿತ್ರರಿಗೂ ಹಾಗೂ ಜನಪರ ಕಾಳಜಿಯಿಂದ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ನಾವು ಪಾದಯಾತ್ರೆ ಘೋಷಣೆ ಮಾಡಿದಾಗ ಕೊರೊನಾ 3ನೇ ಅಲೆ ಆರಂಭವಾಗಿರಲಿಲ್ಲ. ವಿಧಾನಸಭಾ ಅಧಿವೇಶನಕ್ಕೂ ಮೊದಲೇ ಪಾದಯಾತ್ರೆ ಘೋಷಣೆ ಆಗಿತ್ತು. ಆದರೆ ಈಗ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಆರಂಭವಾಗಿದೆ. ನಿನ್ನೆ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ. ಇಂದು ರಾಮನಗರದಿಂದ ಪಾದಯಾತ್ರೆ ಆರಂಭವಾಗಬೇಕಿತ್ತು, ಆದರೆ ಕೊರೊನಾ ಸೋಂಕು ತಡೆಗಟ್ಟಲು ನಮಗಿರುವ ಜವಾಬ್ದಾರಿಯನ್ನು ಅರಿತು ನಾವು ಪಾದಯಾತ್ರೆಯನ್ನು ಶುರು ಮಾಡಿಲ್ಲ. ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡಲು ಬಿಜೆಪಿ ಪಕ್ಷ ಕಾರಣ. ಕೊವಿಡ್ ನಿಯಮಗಳು ಘೋಷಣೆಯಾದ ನಂತರವೂ ಮುಖ್ಯಮಂತ್ರಿಗಳಾದಿಯಾಗಿ ಸಚಿವರು ಹಾಗೂ ಶಾಸಕರು ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಿದರು. ಜನವರಿ 6 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಾಲ್ಕೈದು ಸಾವಿರ ಜನ ಸೇರಿಸಿ ವಿಧಾನ ಪರಿಷತ್ ನ ನೂತನ ಸದಸ್ಯರ ಪ್ರಮಾಣ ವಚನ ಸಮಾರಂಭ ನಡೆಸಲಾಯಿತು. ರೇಣುಕಾಚಾರ್ಯ, ಸುಭಾಷ್ ಗುತ್ತೇದಾರ್ ಸಾವಿರಾರು ಜನ ಸೇರಿಸಿ ಮೊನ್ನೆ ಪ್ರತಿಭಟನೆ ನಡೆಸಿದ್ರು. ಗೃಹ ಸಚಿವರ ತವರೂರಲ್ಲಿ ದೊಡ್ಡ ಜಾತ್ರೆ ನಡೆಯಿತು. ಆಗ ಜನರಿಗೆ ಕೊರೊನಾ ಹರಡುವ ಆತಂಕ ಸರ್ಕಾರಕ್ಕೆ ಇರಲಿಲ್ಲವೇ?

ಇವರಲ್ಲಿ ಒಬ್ಬರ ಮೇಲೂ ಈ ವರೆಗೆ ಕೇಸ್ ದಾಖಲಾಗಿಲ್ಲ, ಆದರೆ ಕಾಂಗ್ರೆಸ್ ಪಕ್ಷದವರ ಮೇಲೆ ಮಾತ್ರ ಸುಳ್ಳು ಸುಳ್ಳು ಕೇಸ್ ಹಾಕಿ, ಎಫ್.ಐ.ಆರ್ ದಾಖಲಿಸಿ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹೇಗಾದರೂ ಮಾಡಿ ಪಾದಯಾತ್ರೆಯನ್ನು ನಿರ್ಬಂಧಿಸಬೇಕು ಎಂಬುದು ಈ ಸರ್ಕಾರದ ಉದ್ದೇಶವಾಗಿದೆ. ಒಟ್ಟಾರೆ ಸರ್ಕಾರ ಕೊವಿಡ್ ವಿಷಯದಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ. ಜನರ ಆರೋಗ್ಯದ ಕಾಳಜಿ ನಮಗೂ ಇದೆ, ನಮ್ಮ ಪಾದಯಾತ್ರೆ ಇಂದ ಕೊರೊನಾ ಸೋಂಕು ಉಲ್ಬಣವಾಯಿತು ಎಂಬ ತಪ್ಪು ಅಭಿಪ್ರಾಯ ಜನರಲ್ಲಿ ಬರಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು 15 ಸಾವಿರದ ಗಡಿ ದಾಟಿದೆ, ಇನ್ನೆರೆಡು ದಿನಗಳಲ್ಲಿ ನಮ್ಮ ಪಾದಯಾತ್ರೆ ಬೆಂಗಳೂರು ಪ್ರವೇಶ ಮಾಡುವುದಿತ್ತು, ಸೋಂಕು ಹೆಚ್ಚಿರುವ ಕಾರಣ ತಾತ್ಕಾಲಿಕವಾಗಿ ನಮ್ಮ ಪಾದಯಾತ್ರೆಯನ್ನು ಸ್ಥಗಿತಗೊಳಿಸುತ್ತಿದ್ದೇವೆ. 3ನೇ ಅಲೆಯ ತೀವ್ರತೆ ಕಡಿಮೆಯಾಗಿ, ಕೊವಿಡ್ ಮಾರ್ಗಸೂಚಿಗಳು ತೆರವಾದ ಬಳಿಕ ಮತ್ತೆ ರಾಮನಗರದಿಂದಲೇ ಪಾದಯಾತ್ರೆಯನ್ನು ಮುಂದುವರೆಸುತ್ತೇವೆ. ಪಾದಯಾತ್ರೆ ಆಯೋಜನೆಯಲ್ಲಿ ನಿರಂತರ ಶ್ರಮಿಸಿದ ಸ್ಥಳೀಯ ಸಂಸದರಾದ ಡಿ.ಕೆ ಸುರೇಶ್ ಅವರಿಗೂ ಹಾಗೂ ನಾವು ಆಗಮಿಸಿದ ಕಡೆಗಳಲೆಲ್ಲಾ ಆರತಿ ಬೆಳಗಿ, ಎಳ ನೀರು, ಹಣ್ಣು, ತಿಂಡಿ ತಿನಿಸು ನೀಡಿ ಸ್ವಾಗತಿಸಿ, ಅಪಾರ ಪ್ರೀತಿ ತೋರಿದ ಸ್ಥಳೀಯ ಜನರಿಗೂ ಧನ್ಯವಾದ ಅರ್ಪಿಸುತ್ತೇನೆ.

ಜನರಿಗೆ ಈ ಪಾದಯಾತ್ರೆ ನಡೆಯಬೇಕು, ಇದರ ಅಗತ್ಯ ಎಷ್ಟಿದೆ ಎಂಬ ಅರಿವು ಮೂಡಿತ್ತು. ಆದರೆ ಕೊರೊನಾ ಉಲ್ಬಣಿಸಿದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸೋಣ ಎಂದು ಇಂದು ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿ ನಿರ್ಧರಿಸಿದ್ದೇವೆ. ನಮಗೆ ಜನರ ಹಿತರಕ್ಷಣೆ ಮುಖ್ಯ. ಇಂದು ಜನ ಅತ್ಯಂತ ಉತ್ಸಾಹದಿಂದ ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದರು, ಇಲ್ಲಿ ಸೇರಿರುವ ಪ್ರತಿಯೊಬ್ಬರು ಯಾವುದೇ ಬೇಸರ ಮಾಡಿಕೊಳ್ಳದೆ, ಕೊರೊನಾ ಸೋಂಕಿನ ತೀವ್ರತೆ ಕಡಿಮೆ ಆದ ಮೇಲೆ ಪಾದಯಾತ್ರೆ ಪುನರಾರಂಭ ಮಾಡುತ್ತೇವೆ, ಆಗಲೂ ತಾವೆಲ್ಲ ನಮ್ಮ ಜೊತೆಗಿದ್ದು ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ.

Leave a Comment

Your email address will not be published. Required fields are marked *

Translate »
Scroll to Top