ಬೆಂಗಳೂರು ; ದೈಹಿಕ ಆರೋಗ್ಯದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರುತ್ತಿರುವ ಬೊಜ್ಜು, ಸ್ಥೂಲಕಾಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲು ಏಪ್ರಿಲ್ 21 ರಿಂದ 23 ರ ವರೆಗೆ ಬೆಂಗಳೂರಿನಲ್ಲಿ ಒಬೆಸಿಟಿ ಮತ್ತು ಮೆಟಬಾಲಿಕ್ ಸರ್ಜರಿ ಕುರಿತ ಆಸಿಕಾನ್ 2022 ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ. ದೇಶ, ವಿದೇಶಗಳ ನುರಿತ ತಜ್ಞ ವೈದ್ಯರು ಪಾಲ್ಗೊಳ್ಳಲಿರುವ ಸಮ್ಮೇಳವನ್ನು ಏಪ್ರಿಲ್ 21 ರಂದು ಸಂಜೆ ನಗರದ ಶರಟನ್ ಹೋಟೆಲ್ ನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸೂಖ್ ಮಾಂಡವೀಯ ಉದ್ಘಾಟಿಸಲಿದ್ದಾರೆ.ಉದ್ಘಾಟನೆ: ಏ. 22 ರಂದು “ಫೈಟ್ ಒಬೆಸಿಟಿ ವಾಕಥಾನ್” ಆಯೋಜನೆ

ಸುದ್ದಿಗೋಷ್ಠಿಯಲ್ಲಿ ಆಸ್ಟೆರ್ ಸಿ.ಎಂ.ಐ ಆಸ್ಪತ್ರೆಯ ಮೆಟಬಾಲಿಕ್ ವಿಭಾಗದ ಮುಖ್ಯಸ್ಥ ಡಾ ಹೆಚ್ ವಿ ಶಿವರಾಂ, ಟ್ರಸ್ಟ್ ವೆಲ್ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಮನೀಶ್ ಜೋಷಿ,ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಹೊಸ್ನಿ ಮುಬಾರಕ್ ಖಾನ್ ಮಾಹಿತಿ ನೀಡಿದರು. ಮಣಿಪಾಲ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಸುಮಿತ್ ತಲ್ವಾರ್ ಉಪಸ್ಥಿತರಿದ್ದರು. ಇತ್ತೀಚಿನ ದಿನಗಳಲ್ಲಿ ಬೊಜ್ಜು ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಕೋವಿಡ್ ಲಾಕ್ ಡೌನ್ ನಂತರ ಇದು ತೀವ್ರತೆ ಪಡೆದುಕೊಂಡಿದೆ. ಸಮ ಪ್ರಮಾಣದ ಉತ್ತಮ ಆಹಾರ, ವ್ಯಾಯಾಮ, ಅಗತ್ಯ ಕಂಡು ಬಂದಲ್ಲಿ ಸೂಕ್ತ ಸರ್ಜರಿ ಮೂಲಕ ಸಮಸ್ಯೆಗಳಿಂದ ಮುಕ್ತರಾಗಬಹುದು. ಇದಕ್ಕಾಗಿ ಆಧುನಿಕ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಗಳು ಲಭ್ಯವಿದೆ ಎಂದು ಹೇಳಿದರು.

ಬೊಜ್ಜು ಸಮಸ್ಯೆ ಕುರಿತು ಜನ ಜಾಗೃತಿ ಮೂಡಿಸಲು ಏ. 22 ರಂದು ಬೆಳಿಗ್ಗೆ 6.30 ಕ್ಕೆ “ಫೈಟ್ ಒಬೆಸಿಟಿ ವಾಕಥಾನ್” ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ತಜ್ಞ ವೈದ್ಯರು ಅತಿಯಾದ ತೂಕ, ಬೊಜ್ಜು ಮತ್ತಿತರ ಸಮಸ್ಯೆಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ದೇಶ, ವಿದೇಶಗಳಲ್ಲಿರುವ ಆಧುನಿಕ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಕುರಿತು ವಿಚಾರ ವಿನಿಯಮ ಮಾಡಿಕೊಳ್ಳಲಿದ್ದಾರೆ. ದೇಶದಲ್ಲಿ ಶೇ 43.3 ರಷ್ಟು ಮಂದಿಗೆ ಸ್ಥೂಲ ಕಾಯ ಸಮಸ್ಯೆಯಿದೆ. ದೇಶದ ದಕ್ಷಿಣ ಭಾಗದಲ್ಲಿ ಅತಿ ಹೆಚ್ಚು ಶೇ 46.51 ರಷ್ಟು, ಪೂರ್ವ ಭಾಗದಲ್ಲಿ ಅತಿ ಕಡಿಮೆ ಶೇ 32.96 ರಷ್ಟಿದೆ. ಶೇ 38.67 ರಷ್ಟು ಪುರುಷರು ಶೇ 41.88 ರಷ್ಟು, ನಗರ ಪ್ರದೇಶದಲ್ಲಿ ಶೇ 44.17 ಮತ್ತು ಗ್ರಾಮೀಣ ಭಾಗದಲ್ಲಿ ಶೇ 36.08 ರಷ್ಟು ಮಂದಿ ಸ್ಥೂಲಕಾಯ ಸಮಸ್ಯೆಗಳಿಂದ ಬಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.