ಒಳಮೀಸಲಾತಿ ವಿಚಾರದಲ್ಲಿ ಸರ್ಕಾರದಿಂದ ಅನ್ಯಾಯ ಖಂಡನೀಯ

ಬಳ್ಳಾರಿ: ಒಳಮೀಸಲಾತಿಯನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಬದಲಾಗಿ 341 ನೇ ವಿಧಿಯ ತಿದ್ದುಪಡಿಯ ಬಗ್ಗೆ ಹೇಳುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು  ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಹೆಚ್.ಹನುಮಂತಪ್ಪ ಆಗ್ರಹಿಸಿದರು.

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹನುಮಂತಪ್ಪ ಅವರು, ಈ ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡ ಮೀಸಲಾತಿಯ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬಹುದಿತ್ತು. ಅದರ ಬದಲಾಗಿ ಅವಶ್ಯಕತೆಯಿಲ್ಲದ 341ನೇ ವಿಧಿ ತಿದ್ದುಪಡಿಯ ಬಗ್ಗೆ ಚಕಾರ ವೆತ್ತಿದ್ದಾರೆ. ಇದರ ನಡುವೆ ಸರ್ಕಾರದ ಸಚಿವರಲ್ಲಿಯೇ ಗೊಂದಲಗಳಿದ್ದು, ಹೆಚ್ ಕೆ ಪಾಟೀಲರು ಯಥಾವತ್ತಾಗಿ ಜಾರಿ ಮಾಡಲು ಶಿಫಾರಸ್ಸು ಮಾಡಿದ್ದೇವೆ ಎಂಬ ಹೇಳಿಕೆ ನೀಡಿದರೆ, ಇತ್ತ ಮಹಾದೇವಪ್ಪನವರು, 341ನೇ ವಿಧಿ ತಿದ್ದುಪಡಿಗೆ ಶಿಫಾರಸ್ಸು ಮಾಡಿದ್ದೇವೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಇದು ಸಾಮಾನ್ಯ ಜನರಿಗೆ ನಗುಪಾಟಲಿನ ವಿಷಯವಾಗಿದೆ ಎಂದರು.

2020 ಗಸ್ಟ್ 27 ರಂದು ಸುಪ್ರೀಂಕೋರ್ಟಿನ ನ್ಯಾ.ಅರುಣ್ ಮಿಶ್ರಾ ನೇತೃತ್ವದ ಪಂಚಪೀಠ ಮೀಸಲಾತಿಯ ವರ್ಗೀಕರಣದ ವಿಷಯದಲ್ಲಿ 341 ನೇ ವಿಧಿಯ ತಿದ್ದುಪಡಿಯ ಅಗತ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಈ ಐತಿಹಾಸಿಕ ತೀರ್ಪು ಸುಪ್ರೀಂಕೋರ್ಟಿನ 7 ಸದಸ್ಯರ ಪೀಠದ ಮುಂದೆ ವಿಚಾರಣೆಗೆ ಬಂದಿರುವಾಗ ವಕೀಲ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹದೊಂದು ನಿರ್ಣಯ ಕೈಗೊಂಡು ನಗೆಪಾಟಲಿಗೆ ಈಡಾಗಿದ್ದಾರೆ. ಸುಪ್ರೀಂಕೋರ್ಟಿನ 7 ಸದಸ್ಯರ ಪೀಠದ ಮುಂದೆ ಕೇಂದ್ರ ಸರ್ಕಾರ ಒಳ ಮೀಸಲಾತಿಯ ಪರವಾಗಿ ಖುದ್ದು ವಕಾಲತ್ತು ವಹಿಸಿರುವಾಗ ಕರ್ನಾಟಕದ ಕಾಂಗ್ರೆಸ್ ಸರಕಾರದ ಈ ಟೊಳ್ಳು ನಿರ್ಣಯಕ್ಕೆ ಯಾರೂ ಮರುಳಾಗುವುದಿಲ್ಲ. ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರೂ ಸೇರಿದಂತೆ ಬಹುತೇಕ ನಾಯಕರಿಗೆ ಒಳ ಮೀಸಲಾತಿಯ ಬಗ್ಗೆ ಯಾವ ಕಾಳಜಿಯೂ ಇಲ್ಲ ಎಂಬುದು ಗುಟ್ಟಿನ ವಿಷಯವಲ್ಲ ಎಂದರು.

 

ಇತ್ತೀಚಿಗೆ ರಾಜ್ಯದೆಲ್ಲೆಡೆ ಮಾದಿಗ ಮುನ್ನಡೆ ಸಮಾವೇಶಗಳ ಅಭೂತಪೂರ್ವ ಯಶಸ್ಸಿನಿಂದ ಕೆಂಗೆಟ್ಟಿರುವ ಕಾಂಗ್ರೆಸ್ಸು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶೋಷಿತ ಸಮಾಜಗಳನ್ನು ದಿಕ್ಕು ತಪ್ಪಿಸಲು ಇಂತಹ ನೀಚ ಕೃತ್ಯಕ್ಕೆ ಕೈಹಾಕಿದೆ. ಕಾಂಗ್ರೆಸ್ಸಿನ ಸಚಿವ ಸಂಪುಟದ ನಿರ್ಣಯವನ್ನು ಮಾದಿಗ ಸಮಾಜದ ನಾಯಕರುಗಳಾದ ನಾವು ಒಕ್ಕೊರಲಿನಿಂದ ದಿಕ್ಕರಿಸುತ್ತೇವೆ ಮತ್ತು ಖಂಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎ. ಈಶ್ವರಪ್ಪ, ಮೇಕಲ ವೀರೇಶ್,  ಶಂಕರ್, ಸೋಮಶೇಖರ್, ನರಸಪ್ಪ, ರಾಜೇಶ್, ಅರುಣಾಚಲ, ಮಹಾದೇವಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top