ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಬೇಕು : ಸಿಎಂ

ಬೆಂಗಳೂರು, ಮಾರ್ಚ್ 15: ಉಚ್ಛ ನ್ಯಾಯಾಲಯವು ವಸ್ತ್ರಸಂಹಿತೆಯ ಕುರಿತ ಪ್ರಕರಣದಲ್ಲಿ ತನ್ನ ತೀರ್ಪನ್ನು ಪ್ರಕಟಿಸಿದೆ. ಸಮವಸ್ತ್ರವನ್ನು ಎತ್ತಿ ಹಿಡಿದಿದೆ ಮತ್ತು ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎನ್ನುವುದನ್ನು ಹೇಳಿದೆ. ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಈ ವಿಷಯ ತಿಳಿಸಿದರು. “ಇದು ನಮ್ಮ ಮಕ್ಕಳ ಭವಿಷ್ಯ ಹಾಗೂ ಶಿಕ್ಷಣದ ಪ್ರಶ್ನೆ. ಮಕ್ಕಳಿಗೆ ವಿದ್ಯೆಗಿಂತ ಮುಖ್ಯವಾದುದ್ದು ಬೇರೊಂದಿಲ್ಲ. ಹೀಗಾಗಿ ಉಚ್ಚ ನ್ಯಾಯಾಲಯದ ತ್ರಿ ಸದಸ್ಯ ಪೀಠ ನೀಡಿರುವ ತೀರ್ಪನ್ನು ನಾವೆಲ್ಲರೂ ಪಾಲಿಸಬೇಕು. ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಬೇಕು. ಶಾಂತಿಯನ್ನು ಕಾಪಾಡಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಬಹಳ ಮುಖ್ಯ. ಜನತೆ, ಎಲ್ಲ ಸಮುದಾಯದ ನಾಯಕರು ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೀರ್ಪನ್ನು ಒಪ್ಪಿಕೊಂಡು ಶಾಂತಿ ಸುವ್ಯವಸ್ಥೆ ಯನ್ನು ಕಾಪಾಡಿ, ತೀರ್ಪಿನ ಅನ್ವಯ ಶಿಕ್ಷಣ ನೀಡಲು ಸಹಕರಿಸಬೇಕೆಂದು ಕಳಕಳಿಯ ವಿನಂತಿ ಮಾಡಿದರು.

ಪರೀಕ್ಷೆ ಗಳಿಂದ ಹೊರಗುಳಿಯದಿರಿ ಎಲ್ಲಾ ವಿದ್ಯಾರ್ಥಿಗಳು ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ನಿಮ್ಮ ಶಿಕ್ಷಣ ಬಹಳ ಮುಖ್ಯ. ಪರೀಕ್ಷೆಗಳಿಂದ ಹೊರಗುಳಿಯದೆ, ಎಲ್ಲರೂ ತರಗತಿಗಳಿಗೆ ಹಾಜರಾಗಬೇಕು, ನಿಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಲು ನಾವು ನೀವೆಲ್ಲರೂ ಚಿಂತಿಸಬೇಕು ಎಂದು ಕರೆ ನೀಡಿದರು.

ಕಾನೂನು ಸುವ್ಯವಸ್ಥೆಗೆ ಅಗತ್ಯ ವ್ಯವಸ್ಥೆ : ಕಾನೂನು ಸುವ್ಯವಸ್ಥೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಉಚ್ಚ ನ್ಯಾಯಾಲಯದ ತೀರ್ಪಿನಿಂದ ಪ್ರಕರಣ ಇತ್ಯರ್ಥವಾಗಿರುವುದರಿಂದ ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು. ಇದಕ್ಕೆ ವ್ಯತಿರಿಕ್ತವಾಗಿ ಕಾನೂನನ್ನು ಕೈಗೆ ತೆಗೆದುಕೊಂಡರೆ ನಮ್ಮ ಗೃಹ ಇಲಾಖೆ ಕಠಿಣ ಕ್ರಮ ಜರುಗಿಸಲಿದೆ ಎಂದು ಸಿಎಂ ಹೇಳಿದರು.

Leave a Comment

Your email address will not be published. Required fields are marked *

Translate »
Scroll to Top