ಬೆಂಗಳೂರು: ಕೊಟ್ಟ ಮಾತಿನಂತೆ ನಾವು ಐದು ಗ್ಯಾರಂಟಿಗಳನ್ನೂ ಈಡೇರಿಸುತ್ತೇವೆ. ಹಾಗೆಯೇ, ಹಿಂದಿನ ಬಿಜೆಪಿ ಸರಕಾರದಲ್ಲಿ ನಡೆದಿರುವ ಅಕ್ರಮಗಳನ್ನೆಲ್ಲ ತನಿಖೆಗೆ ಒಳಪಡಿಸಿ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಇದರಲ್ಲಿ ಸರಕಾರದ ಧ್ವನಿ ಒಂದೇ ಆಗಿದೆ. ಇದರಿಂದ ಅವರಿಗೆ ಕಷ್ಟವಾಗಬಹುದು. ಈಗ ಅದು ಬಡವರ ಅಕ್ಕಿಯ ವಿಚಾರದಲ್ಲಿ ರಾಜಕಾರಣ ಮಾಡಿ ಮೋಸ ಮಾಡಿದೆ. ಇಂಥ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕಿಡಿಕಾರಿದ್ದಾರೆ.
ಗುರುವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗ ಪ್ರತೀ ಕುಟುಂಬದ ಒಬ್ಬರಿಗೆ, ತಿಂಗಳಿಗೆ 5 ಕೆ.ಜಿ. ಅಕ್ಕಿಯಂತೆ 34 ರೂ. ದರದಲ್ಲಿ 170 ರೂ.ಗಳನ್ನು ಮನೆಗಳ ಮುಖ್ಯಸ್ಥರ ಖಾತೆಗೆ ಹಾಕಲಾಗುತ್ತದೆ. ಇದು ತಾತ್ಕಾಲಿಕ ಕ್ರಮವಷ್ಟೆ. ಅಕ್ಕಿ ಸಂಗ್ರಹಣೆ ಅಥವಾ ಖರೀದಿಗೆ ಪರ್ಯಾಯ ವ್ಯವಸ್ಥೆ ಆದ ಕೂಡಲೇ ಅಕ್ಕಿಯನ್ನೇ ಕೊಡಲಿದ್ದೇವೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಇದರಿಂದ ಅವರಿಗೆ ಹತಾಶೆಯಾಗಿದೆ. ಚುನಾವಣೆಯಲ್ಲಿ ಸೋಲಿಸಿದರೆ ರಾಜ್ಯಕ್ಕೆ ಅನುದಾನ ಮತ್ತಿತರ ಯಾವ ನೆರವನ್ನೂ ಕೊಡುವುದಿಲ್ಲ ಎಂದು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಬ್ಲಾಕ್‌ಮೇಲ್ ಮಾಡಿದ್ದರು. ಈಗ ಅಕ್ಕಿಯ ವಿಚಾರದಲ್ಲಿ ಅವರು ತಮ್ಮ ಬುದ್ಧಿಯನ್ನು ತೋರಿಸಿದ್ದಾರೆ ಎಂದು ಅವರು ಖಂಡಿಸಿದರು.
ಅಕ್ಕಿ ಕೊಡಲಾಗದಿದ್ದರೆ ಹಣವನ್ನಾದರೂ ಕೊಡಬೇಕು ಎಂದು ಬಿಜೆಪಿಯ ಬೊಮ್ಮಾಯಿ ಮತ್ತು ಸಿ.ಟಿ.ರವಿ ಅವರೇ ಹೇಳಿದ್ದರು. ಈಗ ಹಣ ಕೊಡಲು ತೀರ್ಮಾನಿಸಿದ್ದೇವೆ. ಅವರೀಗ ಅಕ್ಕಿ ಕೊಡಬೇಕು ಎನ್ನುತ್ತಿದ್ದಾರೆ. ಅಕ್ಕಿಯ ವಿಷಯದಲ್ಲಿ ಮೋಸ ಮಾಡಿರುವ ಬೊಮ್ಮಾಯಿಯವರೇ ರಾಜ್ಯದ ಬಡವರ ಕ್ಷಮೆ ಕೋರಬೇಕು ಎಂದು ಪಾಟೀಲ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಅಲ್ಲಿ 20ಕ್ಕಿಂತ ಹೆಚ್ಚು ಗುಂಪುಗಳಿವೆ. ಅಲ್ಲಿ ಯಡಿಯೂರಪ್ಪ, ಬೊಮ್ಮಾಯಿ, ಯತ್ನಾಳ್, ನಿರಾಣಿ, ರೇಣುಕಾಚಾರ್ಯ, ರವಿ ಹೀಗೆ ದಿನಕ್ಕೊಬ್ಬರು ಡೈರೆಕ್ಟರ್‍ಸ್ ಹುಟ್ಟಿಕೊಳ್ಳುತ್ತಿದ್ದಾರೆ. ಯಾವ ಫೆವಿಕಾಲ್ ತಂದರೂ ಆ ಪಕ್ಷವನ್ನು ಒಗ್ಗೂಡಿಸುವುದು ಸಾಧ್ಯವಿಲ್ಲ. ಬೊಮ್ಮಾಯಿಯಂತೂ ಯಾವ ಅಧಿಕಾರವೂ ಇಲ್ಲದೆ ಖಾಲಿ ಕುರ್ಚಿಯ ಮೇಲೆ ಕೂತುಕೊಂಡಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ಈಗ ತಿಂಗಳಿಗೆ 170 ರೂ. ಕೊಡುವುದರಿಂದ ಜನರು ಸಂತೋಷವಾಗಿದ್ದಾರೆ. ಅವರು ಆಯಾ ಪ್ರದೇಶಕ್ಕೆ ತಕ್ಕಂತೆ ರಾಗಿ, ಜೋಳ, ಅಕ್ಕಿ, ಬೇಳೆಕಾಳು, ಗೋಧಿ ಹೀಗೆ ಏನನ್ನು ಬೇಕಾದರೂ ತೆಗೆದುಕೊಳ್ಳಬಹುದು. ಆದರೆ ಸರಕಾರದ ತೀರ್ಮಾನದಿಂದ ನಿರುದ್ಯೋಗಿ ಬಿಜೆಪಿ ನಾಯಕರು ಕಂಗೆಟ್ಟು ಹೋಗಿದ್ದಾರೆ ಎಂದು ಅವರು ಪ್ರತಿಪಾದಿಸಿದರು.