ಸರ್ವರಿಗೂ ಸೂರು ಕಲ್ಪಿಸುವ ಗುರಿಯೊಂದಿಗೆ ರಾಜ್ಯದಲ್ಲಿ ವಸತಿ ಕ್ರಾಂತಿ

ಬಳ್ಳಾರಿ,ಮಾ.02 : ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕಂಪ್ಲಿ ಪಟ್ಟಣದಲ್ಲಿ 32.87 ಕೋಟಿ ರೂ.ವೆಚ್ಚದಲ್ಲಿ 500 ಮನೆಗಳ ನಿರ್ಮಾಣಕ್ಕೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಬುಧವಾರ ಭೂಮಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು  ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ರಾಜಿಯಾಗದೆ ನಿಗದಿತ ಸಮಯದಲ್ಲಿ ಈ ಕೆಲಸ ಮುಗಿಸಿ ಜನರಿಗೆ ಮನೆ ಸಿಗುವಂತೆ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಬಡವರಿಗೆ ಸೂರು ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಅದ್ಯತೆಗಳಲ್ಲಿ ಒಂದು ಎಂದು ಹೇಳಿದ ಸಚಿವ ಶ್ರೀರಾಮುಲು ಅವರು ಒಬ್ಬ ವ್ಯಕ್ತಿ ಗೌರವಯುತವಾಗಿ ಬದುಕಲು ಅನ್ನ, ನೀರು, ಸೂರು ಅತಿಮುಖ್ಯ. ಅದನ್ನ ಬಡವರಿಗೆ ಕೊಡೋ ಜವಾಬ್ದಾರಿ ಸರ್ಕಾರದ್ದು. ಈ ನಿಟ್ಟಿನಲ್ಲಿ ಅತ್ಯಂತ ನಿಷ್ಠೆಯಿಂದ, ಬಡವರ ಪರ ಕಾಳಜಿ ಇಟ್ಟುಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.


ಕಳೆದ ಬಜೆಟ್ ನಲ್ಲಿ (2021-22) ಈಗಾಗಲೇ ಆರಂಭವಾಗಿ, ಪ್ರಗತಿಯಲ್ಲಿರುವ 9.74 ಲಕ್ಷ ಮನೆಗಳನ್ನು ಮುಂದಿನ 3 ವರ್ಷಗಳಲ್ಲಿ ಪೂರ್ಣಗೊಳಿಸಲು 10,194 ಕೋಟಿ ರೂ.ಅನುದಾನ ಕಾಯ್ದಿರಿಸಲಾಗಿದೆ ಎಂದರು. ಗುಡಿಸಲು ಮುಕ್ತ ನಗರ ಹಾಗೂ ಗುಡಿಸಲು ಮುಕ್ತ ಗ್ರಾಮಗಳ ಗುರಿಯನ್ನು ನಮ್ಮ ಸರಕಾರ ಹೊಂದಿದ್ದು, ಇದೀಗ ಸರಕಾರದಿಂದ, ಗ್ರಾಮೀಣ ಭಾಗದಲ್ಲಿ 4 ಲಕ್ಷ ಮನೆಗಳು, ನಗರ ಪ್ರದೇಶಗಳಲ್ಲಿ 1 ಲಕ್ಷ ಮನೆಗಳು ಹಾಗೂ ಕೊಳಗೇರಿಗಳಲ್ಲಿ 97 ಸಾವಿರ ಮನೆಗಳ ನಿರ್ಮಾಣ ಕೆಲಸ ನಡೆಯುತ್ತಿದೆ ಎಂದು ವಿವರಿಸಿದ ಅವರು ಎಲ್ಲರಿಗೂ ಸೂರು ಕಲ್ಪಿಸುವ ಗುರಿಯೊಂದಿಗೆ ರಾಜ್ಯದಲ್ಲಿ ಇಂದು ವಸತಿ ಕ್ರಾಂತಿ ನಡೆಯುತ್ತಿದೆ ಎಂದರು. ರಾಜ್ಯದ ಸ್ಲಂಗಳಲ್ಲಿ 2.80ಲಕ್ಷ ಮನೆಗಳ ಬೇಡಿಕೆ: ರಾಜ್ಯದಲ್ಲಿ ಸುಮಾರು 2,800 ಸ್ಲಮ್ ಗಳಿದ್ದು, 2.80 ಲಕ್ಷ ಮನೆಗಳ ಬೇಡಿಕೆ ಇದೆ.  ಈ ನಿಟ್ಟಿನಲ್ಲಿ ಈ ಹಿಂದೆ 83,119 ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು, ಸುಮಾರು 50 ಸಾವಿರ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸುಮಾರು 33 ಸಾವಿರ ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ವಿವರಿಸಿದರು.


ಇದೀಗ ಸರ್ಕಾರದಿಂದ ಹೊಸ ಪ್ಯಾಕೇಜ್ ನಲ್ಲಿ ಸುಮಾರು 6,516 ಕೋಟಿ ವೆಚ್ಚದಲ್ಲಿ 97,134 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದರು.
ಹೀಗೆ ಬಡವರಿಗೆ ಸೂರು ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇಡುತ್ತಿದ್ದು, ಕಾಮಗಾರಿಗಳನ್ನ ಆದ್ಯತೆ ಮೇಲೆ ಮುಗಿಸುವ ಕೆಲಸ ನಡೆಯುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿಯಾಗಿ ಜಿಲ್ಲೆಗೆ ಕಾಲಿಟ್ಟಿರುವುದು ಅಭಿವೃದ್ಧಿಗಾಗಿ: ಶ್ರೀರಾಮುಲು ಈ ಜಿಲ್ಲೆಗೆ ಕಾಲಿಟ್ಟಿರೋದು ಅಭಿವೃದ್ಧಿಗಾಗಿ. ಮತ್ತೆ ಹೇಳ್ತೇನೆ, ಅಭಿವೃದ್ಧಿಗಾಗಿ ಮಾತ್ರ ನಾನು ಇಲ್ಲಿದ್ದೇನೆ. ಬೇರೆ ಯಾವುದಕ್ಕೂ ಅಲ್ಲ. ಅಭಿವೃದ್ಧಿ ವಿಷಯದಲ್ಲಿ ಯಾರು ರಾಜಕಾರಣ ಮಾಡೋದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಹೇಳಿದರು.


ಅಭಿವೃದ್ಧಿ ವಿಷಯದಲ್ಲಿ ಜನರು ಬಿಟ್ಟರೆ ಮತ್ತೇನು ಇರಬಾರದು. ಪಕ್ಷ, ರಾಜಕಾರಣ, ಇವೆಲ್ಲ ಚುನಾವಣೆಗೆ ಇಟ್ಟುಕೊಳ್ಳೋಣ. ಕೆಲಸದ ವಿಷಯದಲ್ಲಿ, ಅಭಿವೃದ್ಧಿ ವಿಷ್ಯದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ, ಜನರಿಗೆ , ಊರಿಗೆ ಒಳ್ಳೆಯದಾಗುತ್ತೆ ಎನ್ನೋದು ಮರೆಯಬಾರದು. ಇದನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ವಿವರಿಸುತ್ತಾ ದೇವರಾಜು ಅರಸು ಅವರ ಹುಟ್ಟೂರು ಕಲ್ಲಹಳ್ಳಿಯ ತೆಂಗಿನ ತೋಟದ ಕಥೆಯನ್ನು ಉದಾರಣೆಯನ್ನಾಗಿ ನೀಡಿದರು. ಈ ತಿಂಗಳಾಂತ್ಯಕ್ಕೆ ಕಂಪ್ಲಿ ಸಕ್ಕರೆ ಕಾರಖಾನೆ ಕಾಯಕಲ್ಪಕ್ಕೆ ಕ್ರಮ: ಕಂಪ್ಲಿಯಲ್ಲಿರುವ ಸಕ್ಕರೆ ಕಾರಖಾನೆಗೆ ಈ ತಿಂಗಳ ಅಂತ್ಯದೊಳಗೆ ಕಾಯಕಲ್ಪಕ್ಕೆ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಹೇಳಿದರು.


ಈ ಭಾಗದ ಜನರಿಗೆ ಕಬ್ಬು ಬೆಳೆಯುವುದಕ್ಕಾಗಿ ಬೀಜ ಹಾಗೂ ಇನ್ನೀತರ ಸಾಮಗ್ರಿಗಳನ್ನು ಶೀಘ್ರ ವಿತರಿಸಲಾಗುವುದು.ಮುಂದಿನ ವರ್ಷದೊಳಗೆ ಈ ಕಾರಖಾನೆಯಲ್ಲಿ ಕಬ್ಬು ನುರಿಸಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಈ ಭಾಗದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಕೆಲಸ ಮಾಡಲಾಗುವುದು ಎಂದರು.
ಕಂಪ್ಲಿ ಪಟ್ಟಣಕ್ಕೆ ನಿರಂತರ ಕುಡಿಯುವ ನೀರು ಪೂರೈಸುವ ಕಾಮಗಾರಿ ನಡೆಯುತ್ತಿದ್ದು,ಅದನ್ನು ಶೀಘ್ರ ಪೂರ್ಣಗೊಳಿಸಿ ಜನರಿಗೆ ನಿರಂತರ ಕುಡಿಯುವ ಕೆಲಸ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಕಂಪ್ಲಿ ಪುರಸಭೆ ಅಧ್ಯಕ್ಷೆ ಶಾಂತಲಾ,ಉಪಾಧ್ಯಕ್ಷೆ ನಿರ್ಮಲಾ, ತಹಸೀಲ್ದಾರ್ ಗೌಸಿಯಾಬೇಗಂ, ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಶಿವಲಿಂಗಪ್ಪ,ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಕೃಷ್ಙಾರೆಡ್ಡಿ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಮುಖಂಡರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top