ಮೂಲಸೌಕರ್ಯ ನಿರ್ಮಾಣಕ್ಕೆ ಹಸಿರು ಸೂಚ್ಯಂಕ, ಅನನ್ಯ ಉಪಕ್ರಮ: ಈಶ್ವರ ಖಂಡ್ರೆ

ಬೆಂಗಳೂರು : ಸರ್ಕಾರದ ಮೂಲಸೌಕರ್ಯ ಯೋಜನೆಗಳು, ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣೆಯ ಉಪಕ್ರಮಗಳನ್ನು ವಿಶ್ಲೇಷಿಸಿ, ಮೌಲ್ಯ ಮಾಪನ ಮಾಡಿ, ಶ್ರೇಣಿಕರಣ ಮಾಡುವ ಅನನ್ಯ ಉಪಕ್ರಮ ಹಸಿರು ಸೂಚ್ಯಂಕ ಉಪಕ್ರಮದ ಟೂಲ್ ಕಿಟ್ ಮತ್ತು ಮ್ಯಾನ್ಯುಯಲ್ ಗಳನ್ನು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಇಂದು ಬಿಡುಗಡೆ ಮಾಡಿದರು.

GREEN INDEX ಪೋರ್ಟಲ್ ಶೀಘ್ರದಲ್ಲೇ ಸಾರ್ವಜನಿಕರಿಗೂ ಲಭ್ಯವಾಗಲಿದ್ದು, ಇದರಲ್ಲಿ ರಾಜ್ಯದಲ್ಲಿ ಕೈಗೊಳ್ಳಲಾಗುವ ಮೂಲಸೌಕರ್ಯ ಯೋಜನೆಗಳ ಅನುಷ್ಠಾನದ ವೇಳೆ ಎಷ್ಟು ಮರುಬಳಕೆ ವಸ್ತು ಉಪಯೋಗ ಮಾಡಲಾಗಿದೆ,  ಇಂಧನ ದಕ್ಷತೆ ಅಂದರೆ ನವೀಕರಿಸಬಹುದಾದ ಇಂಧನ ಬಳಕೆ ಮಾಡಲಾಗಿದೆ, ಎಷ್ಟು ನೀರು ಉಳಿಸಲಾಗಿದೆ ಮತ್ತು ಎಷ್ಟು ಪ್ರಮಾಣದ ನೀರನ್ನು ಮರು ಬಳಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ವಿಶ್ಲೇಷಿಸುತ್ತದೆ.

 

ತ್ಯಾಜ್ಯ ಸಂಸ್ಕರಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಆಧಾರದ ಮೇಲೆ ಸುಸ್ಥಿರ ಅಭಿವೃದ್ಧಿಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆ,  ಇಂಗಾಲ ಹೊರಸೂಸುವಿಕೆಯನ್ನು ಎಷ್ಟು ತಗ್ಗಿಸಲಾಗಿದೆ, ಜೀವವೈವಿಧ್ಯಗಳ ಸಂರಕ್ಷಣೆಗೆ ಹೇಗೆ ಒತ್ತು ನೀಡಲಾಗಿದೆ, ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ತಡೆಯಲು ಮತ್ತು ವಿಪತ್ತು ತಾಳಿಕೊಳ್ಳವ ವಿಚಾರದಲ್ಲಿ ಕೈಗೊಂಡ ಕ್ರಮ ಈ ಎಲ್ಲ  ಅಂಶಗಳನ್ನೂ ಪರಿಗಣನೆಗೆ ತೆಗೆದುಕೊಂಡು ಇದರ ಆಧಾರದ ಮೇಲೆ ನಾಲ್ಕು ವರ್ಣಗಳಲ್ಲಿ ಶ್ರೇಣೀಕರಣ ನೀಡಲಾಗುತ್ತದೆ..

ಹಸಿರು, ತಿಳಿ ಹಸಿರು, ಕಿತ್ತಳೆ ಮತ್ತು ಕೆಂಪು ವರ್ಣಗಳಿಂದ ಶ್ರೇಣೀಕರಣ ಮಾಡಲಾಗುತ್ತದೆ. ಹಸಿರು ವರ್ಣಕ್ಕೆ 4 ಅಂಕ, ತಿಳಿ ಹಸಿರಿಗೆ 3, ಕಿತ್ತಲೆ ವರ್ಣಕ್ಕೆ 2 ಹಾಗೂ ಕೆಂಪು ವರ್ಣಕ್ಕೆ 1 ಅಂಕ ನೀಡಲಾಗುತ್ತದೆ. ಈ ಶ್ರೇಣೀಕರಣವು ರಾಜ್ಯದ ಅಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳ ಪರಿಸರ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ ಮತ್ತು ಪರಿಸರ ಹೊಂದಾಣಿಕೆಯನ್ನು (ಎನ್ವಿರಾನ್ಮಂಟಲ್ ಕಂಪ್ಯಾಟಬಲಿಟಿ) ಉತ್ತಮಪಡಿಸುತ್ತದೆ.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI), ಭಾರತೀಯ ವಿಜ್ಞಾನ ಮಂದಿರ (ಐಐಎಸ್.ಸಿ.)ದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಈ ಯೋಜನೆ ದೇಶದಲ್ಲೇ ಮೊಟ್ಟ ಮೊದಲನೆಯದಾಗಿದೆ.

ಪ್ರಯೋಜನ ಏನು?:

ಈ ಶ್ರೇಣೀಕರಣ ಸರ್ಕಾರದ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ಅನುಸರಿಸಲಾಗುವ ಪರಿಸರ ಕಾರ್ಯಕ್ಷಮತೆಯ ಬಗ್ಗೆ ನಿಗಾ ವಹಿಸಲಿದ್ದು, ಇದರಿಂದ  ರಾಜ್ಯದಲ್ಲಿ ವಾಯು, ಜಲ ಮಾಲಿನ್ಯ ತಡೆಯಲು, ಜೀವ ವೈವಿಧ್ಯ ಸಂಪತ್ತಿನ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲದ ಅತಿಯಾದ ಬಳಕೆ ತಡೆಯಲು ಮತ್ತು ಪರಿಸರ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಯೋಜನೆ ಕಾರ್ಯಗತಗೊಳಿಸಿದವರಿಗೆ ಕೇಂದ್ರ ಸರ್ಕಾರದ ಗ್ರೀನ್ ಕ್ರೆಡಿಟ್ ಲಭಿಸುತ್ತದೆ.

ಈ ಸಂದರ್ಭದಲ್ಲಿ ಇಂದು ಸೇವೆಯಿಂದ ನಿವೃತ್ತರಾಗುತ್ತಿರುವ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಎ.ಸಿ.ಎಸ್. ಆಗಿ ಅಧಿಕಾರ ವಹಿಸಿಕೊಳ್ಳಲಿರುವ ಮಂಜುನಾಥ ಪ್ರಸಾದ್, ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಪಿ. ರವಿ, ಅರಣ್ಯ ಪಡೆ ಮುಖ್ಯಸ್ಥರಾದ ಬ್ರಿಜೇಶ್ ದೀಕ್ಷಿತ್ ಮತ್ತು ಇತರ ಅಧಿಕಾರಿಗಳು ಭಾಗಿಯಾಗಿದ್ದರು.

 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top