ಹಿಂದುಳಿದ ವರ್ಗಗಳ ಆಯೋಗದ ವರದಿ ಸ್ವೀಕರಿಸುವ ಸಲುವಾಗಿಯೇ ಆಯೋಗದ ಅಧ್ಯಕ್ಷರ ಅವಧಿ ಒಂದು ತಿಂಗಳು ವಿಸ್ತರಣೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆದ ಜಾತಿ ಜನಗಣತಿ ವರದಿಯನ್ನು ಸ್ವೀಕರಿಸಿಯೇ ತೀರುತ್ತೇವೆ. ವರದಿಯಲ್ಲಿ ಏನಾದರೂ ತಪ್ಪು – ಒಪ್ಪುಗಳಿದ್ದರೆ ಅದನ್ನು ಸರಿಪಡಿಸುತ್ತೇವೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. 

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯಿಂದ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಪಡೆಯುವ ಸಲುವಾಗಿಯೇ ಆಯೋಗದ ಅಧ್ಯಕ್ಷ ಜನಪ್ರಕಾಶ್‌ ಹೆಗಡೆ ಅವರ ಅವಧಿಯನ್ನು ಒಂದು ತಿಂಗಳು ವಿಸ್ತರಿಸಲಾಗಿದೆ. ವರದಿ ಪಡೆದೇ ತೀರುತ್ತೇವೆ. ಇದು ನಮ್ಮ ಪಕ್ಷದ ತೀರ್ಮಾನ ಎಂದು ಹೇಳಿದರು.

 

ವರದಿ ಸಲ್ಲಿಕೆಗೂ ಮುನ್ನವೇ ಅವೈಜ್ಞಾನಿಕವಾಗಿದೆ ಎಂದು ಹುಯಿಲೆಬ್ಬಿಸುತ್ತಿರುವುದು ಸರಿಯಲ್ಲ. ಹಾಗೇನಾದರೂ ಲೋಪ ಇದ್ದರೆ ಸರಿಪಡಿಸುತ್ತೇವೆ. ಇಡೀ ದೇಶದಲ್ಲಿ ಜಾತಿ ಗಣತಿಯನ್ನು ಮೊದಲ ಬಾರಿಗೆ ತಂದಿದ್ದು, ತಾವು. ಇದಕ್ಕಾಗಿ ೧೬೫ ಕೋಟಿ ರೂಪಾಯಿ ನೀಡಲಾಗಿತ್ತು. ಯಾವ ಯಾವ ಜಾತಿ ಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿದುಕೊಂಡರೆ ಆಯಾ ಸಮುದಾಯಕ್ಕೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲು ಸಹಕಾರಿಯಾಗಲಿದೆ. ಈ ಬಾರಿ ಗಾಣಿಗರು, ತಿಗಳರು, ಮಡಿವಾಳ ಸಮುದಾಯಕ್ಕೆ ಬಜೆಟ್‌ ನಲ್ಲಿ ವಿಶೇಷ ಅನುದಾನ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.   

ಮಡಿಮಾಳ ಮಾಚಿದೇವರು ವಚನ ಸಾಹಿತ್ಯ ರಕ್ಷಿಸಿದ ಮಹಾನ್‌ ಚೇತನ. ಪಟ್ಟಭದ್ರರು ಈಗಲೂ ಸಂವಿಧಾನ ಬದಲಾವಣೆಯಾಗಬೇಕು ಎಂದು ಒತ್ತಾಯಿಸುತ್ತಿದ್ದು, ಈ ಸಾಲಿನಲ್ಲಿ ಬಿಜೆಪಿಯ ಅನಂತ್‌ ಕುಮಾರ್‌ ಹೆಗಡೆ ಅವರಂತಹವರು ಇದ್ದಾರೆ.  ಸಂವಿಧಾನ ಇಲ್ಲದಿದ್ದರೆ ಶೋಷಣೆಗೆ ಅವಕಾಶ ಸಿಗುವುದಿಲ್ಲ. ಹೀಗಾಗಿಯೇ ಸಂವಿಧಾನ ಬದಲಾವಣೆಗೆ ಅವರು ಒತ್ತಾಯಿಸುತ್ತಿದ್ದಾರೆ. ಪಟ್ಟಭದ್ರ ಹಿತಾಸಕ್ತಿ ಉಳ್ಳವರು ಸಮಾಜದಲ್ಲಿ ಅಂಕುಡೊಂಕು ನಿರ್ಮಿಸಿದ್ದು, ಇದನ್ನು ತಿದ್ದಲು ಬಂದವರು ಬಸವವಾದಿ ಶರಣರು. ವಚನ ಸಾಹಿತ್ಯಕ್ಕೆ ಮಾಚಿದೇವರು ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಮಾಚಿದೇವರು ೧೨ ನೇ ಶತಮಾನದ ಶರಣರು. ಬಸವಣ್ಣನವರಿಗೆ ಮಾಚಿದೇವರ ಬಗ್ಗೆ ಅಪಾರ ಅಭಿಮಾನವಿತ್ತು. ಸಮಾಜದಲ್ಲಿನ ಜಾತಿ ವ್ಯವಸ್ಥೆ, ಮೌಢ್ಯ, ಕಂದಾಚಾರವನ್ನು ತಿರಸ್ಕರಿಸಿದವರು ಬಸವಾದಿ ಶರಣರು. ಅಂತಹ ಬಸವಣ್ಣನ ಸಮಕಾಲೀನರಾಗಿದ್ದ ಮಾಚೀದೇವರ ಜಯಂತೋತ್ಸವವನ್ನು ಪ್ರತಿವರ್ಷ ಮಾಡುತ್ತಿದೆ. ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಮಾಡಿದ ಸೇವೆಯನ್ನು ಇಂದಿನ ಪೀಳಿಗೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

 

 ಈ ಸಮಾರಂಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವರಾದ ಶಿವರಾಜ ಎಸ್. ತಂಗಡಗಿ,   ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರ ಡಾ. ಹೆಚ್. ರವಿಕುಮಾರ್, ಕರ್ನಾಟಕ ರಾಜ್ಯ ಮಡಿವಾಳ ಸಂಘ ಅಧ್ಯಕ್ಷ ಸಿ. ನಂಜಪ್ಪ, ಕೆಪಿಸಿಸಿ  ಹಿಂದುಳಿದ  ವರ್ಗಗಳ ವಿಭಾಗ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top