ಅರಣ್ಯಭೂಮಿ ಒತ್ತುವರಿ ಮಾಡಿದ ರೆಸಾರ್ಟ್, ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ – ಈಶ್ವರ ಖಂಡ್ರೆ
ಹಾಸನ: ಅರಣ್ಯದಂಚಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಅರಣ್ಯ ಭೂಮಿಯನ್ನು ಯಾವುದೇ ರೆಸಾರ್ಟ್ ಅಥವಾ ಹೋಂಸ್ಟೇ ಒತ್ತುವರಿ ಮಾಡಿದ್ದರೆ ಸೂಕ್ತ ಕಾನೂನುಕ್ರಮ ಜರುಗಿಸಿ, ಒತ್ತುವರಿ ತೆರವು ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಇತ್ತೀಚೆಗೆ ಆನೆ ಕಾರ್ಯಾಚರಣೆ ವೇಳೆ ಮೃತಪಟ್ಟ ಶಾರ್ಪ್ ಶೂಟರ್ ವೆಂಕಟೇಶ್ ಅವರ ನಿವಾಸಕ್ಕೆ ತೆರಳಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ತರುವಾಯ ಹಾಸನ ಅರಣ್ಯ ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಗಳು ಕಾಡಿನಿಂದ ನಾಡಿಗೆ ಬರುವುದಕ್ಕೆ ಅರಣ್ಯ ಒತ್ತುವರಿ, ಅಕ್ರಮ ಗಣಿಗಾರಿಕೆಯ ಸ್ಫೋಟ, ಮಳೆಯ ಅಭಾವದಿಂದ ಆಹಾರ ಮತ್ತು ನೀರಿನ ಕೊರತೆ ಕಾರಣವಾಗಿದ್ದು, ವನ್ಯಮೃಗಳು ಕಾಡಿಗೆ ಬಾರದಂತೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾನವ ಮತ್ತು ವನ್ಯ ಜೀವಿ ಸಂಘರ್ಷದಿಂದ ಈ ವರ್ಷ 28 ಜನ ಮೃತಪಟ್ಟಿದ್ದಾರೆ. ಸರಾಸರಿ ಪ್ರತಿ ವರ್ಷ ವನ್ಯ ಜೀವಿಯಿಂದ 50 ಜನ ಸಾವಿಗೀಡಾಗುತ್ತಿದ್ದಾರೆ. ಇದು ಆತಂಕದ ವಿಚಾರ. ಕರ್ನಾಟಕ ಸರ್ಕಾರ ಇದನ್ನು ತಡೆಯಲು ಶಾಶ್ವತ ಯೋಜನೆ ಹಾಕಿಕೊಳ್ಳಲು ಕಾರ್ಯೋನ್ಮುಖವಾಗಿದೆ ಎಂದರು.
640ಕಿ.ಮೀ. ಪೈಕಿ 312 ಕಿ.ಮೀ. ರೈಲ್ವೆ ಬ್ಯಾರಿಕೇಡ್: ರಾಜ್ಯದಲ್ಲಿ ಒಟ್ಟಾರೆ 640 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿದರೆ ಆನೆಗಳು ನಾಡಿಗೆ ಬಾರದಂತೆ ತಡೆಯಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 312 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಇನ್ನೂ 330 ಕಿ.ಮೀ. ಬಾಕಿ ಇದ್ದು, ಈ ವರ್ಷ 54 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ಎಂದರು.
ಈ ಬಾರಿ ಆಯವ್ಯಯದಲ್ಲಿ 100 ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷದ 54 ಕೋಟಿ ರೂ. ಬಾಕಿ ಇದೆ. ಮುಖ್ಯಮಂತ್ರಿಯವರು ಈ ವರ್ಷ ಇನ್ನೂ 100 ಕೋಟಿ ಹೆಚ್ಚುವರಿ ಹಣದಲ್ಲಿ ಯುದ್ಧೋಪಾದಿಯಲ್ಲಿ ಬ್ಯಾರಿಕೇಡ್ ನಿರ್ಮಿಸಲು ಅನುಮತಿಸಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಆನೆ ಕಂದಕ ಮತ್ತು ಸೌರಬೇಲಿಗೆ ವಾರ್ಷಿಕ ನಿರ್ವಹಣಾ ವೆಚ್ಚ ಆಗುತ್ತದೆ. ಆದರೆ, ರೈಲ್ವೆ ಬ್ಯಾರಿಕೇಡ್ ಗೆ ಯಾವುದೇ ನಿರ್ವಹಣಾ ವೆಚ್ಚ ಇರುವುದಿಲ್ಲ. ಆನೆಗಳು ಬುದ್ಧಿವಂತ ಪ್ರಾಣಿಗಳಾಗಿದ್ದು, ಅದನ್ನೂ ದಾಟಿ ಬರುತ್ತವೆ. ಆದರೂ ಶೇ.80ರಷ್ಟು ಅದು ಪರಿಣಾಮಕಾರಿ ಎಂದು ಭಾರತೀಯ ವಿಜ್ಞಾನ ಮಂದಿರ (ಐ.ಐ.ಎಸ್.ಸಿ.)ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಕೇಂದ್ರದ ಅಸಹಕಾರ: ಕ್ಯಾಂಪಾ ನಿಧಿಯಲ್ಲಿ ರಾಜ್ಯಕ್ಕೆ ಬರಬೇಕಾದ 500ರಿಂದ 600 ಕೋಟಿ ರೂ. ಇದೆ. ನಾವು ಆ ಹಣದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದರೂ ಕೇಂದ್ರ ಸರ್ಕಾರ ಅದನ್ನ ತಿರಸ್ಕಿರಿಸಿದೆ. ತಾವೇ ನಿಯೋಗದಲ್ಲಿ ತೆರಳಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಅಗತ್ಯ ತಿಳಿಸಿದ್ದರೂ ಅವರು ವೆಚ್ಚ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಯತ್ನ ಮುಂದುವರಿದಿದೆ ಎಂದರು.
ಕೊಡಗು, ಹಾಸನ, ಸಕಲೇಶಪುರ, ಚಾಮರಾಜನಗರ, ರಾಮನಗರ, ಬನ್ನೇರುಘಟ್ಟ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಇಲ್ಲಿ ಮಾನವ ಹಾನಿ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಆನೆಗಳ ಸಂಖ್ಯೆ ಕಡಿಮೆ ಇದ್ದರೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ನಾವು ಕೈಗೊಂಡಿರುವ ಕ್ರಮಗಳಿಂದಾಗಿ ಸಾವಿನ ಸಂಖ್ಯೆ ಕಡಿಮೆ ಇದೆ. ಆದರೂ ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಈ ಜೀವ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಆನೆ ಶಿಬಿರ: ಕಾಡಿನಲ್ಲಷ್ಟೇ ಅಲ್ಲದೆ, ಖಾಸಗಿ ತೋಟದಲ್ಲೂ ಹಲವು ಆನೆಗಳು ಬೀಡು ಬಿಟ್ಟಿವೆ. ಇಂತಹ ಆನೆಗಳನ್ನು ಹಿಡಿದು ಆನೆ ಶಿಬಿರಕ್ಕೆ ಕಳುಹಿಸಬೇಕು ಎಂಬ ಬೇಡಿಕೆ ಇದೆ. ಹಾಸನದಲ್ಲಿ ಒಂದು ಆನೆ ಶಿಬಿರ ಸ್ಥಾಪಿಸಲು ಚಿಂತಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಖಾಲಿ ಹುದ್ದೆ ಭರ್ತಿ: ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಸೂಚಿಸಲಾಗಿದೆ ಎಂದರು.
ಹಸಿರು ವ್ಯಾಪ್ತಿ: ರಾಜ್ಯದಲ್ಲಿ ಹಸಿರು ವಲಯ ವ್ಯಾಪ್ತಿ ಹೆಚ್ಚಿಸಲು ನಮ್ಮ ಸರ್ಕಾರ ಕ್ರಮ ಕೈಗೊಂಡಿದ್ದು, ಈ ವರ್ಷ 5 ಕೋಟಿ ಸಸಿ ನೆಡುವ ಕಾರ್ಯಕ್ರಮ ಆರಂಭಿಸಿದ್ದೇವೆ. ಈವರೆಗೆ 3 ಕೋಟಿ ಸಸಿ ನೆಡಲಾಗಿದೆ. ಮಳೆಯ ಅಭಾವದಿಂದ 5 ಕೋಟಿ ಸಸಿ ನೆಡಲು ಸಾಧ್ಯವಾಗಿಲ್ಲ. ಮಳೆ ಆರಂಭವಾದರೆ ತ್ವರಿತವಾಗಿ ಸಸಿ ನೆಡಲಾಗುವುದು ಎಂದರು.
ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಸಸ್ಯ ಸಂಕುಲ, ಪಕ್ಷಿ ಸಂಕುಲ, ಪ್ರಾಣಿ ಸಂಕಲ, ಕೀಟ ಸಂಕುಲಕ್ಕೂ ನಾವು ಬದುಅಕಲು ಬಿಡಬೇಕು. ಆ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದರು.
ಅರಣ್ಯ ವಿಸ್ತರಣೆಗೆ ಕ್ರಮ: ಅರಣ್ಯದಂಚಿನಲ್ಲಿರುವ ರೈತರು ಆನೆಗಳ ಹಾವಳಿಯಿಂದಾಗಿ 3 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಾರುಕಟ್ಟೆ ಬೆಲೆ ನೀಡಲು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಹಣಕಾಸಿನ ಲಭ್ಯತೆಯ ಆಧಾರದ ಮೇಲೆ ಈ ಜಮೀನು ಸ್ವಾಧೀನಪಡಿಸಿಕೊಂಡು ಅರಣ್ಯ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.
ಅಕ್ರಮ ಒತ್ತುವರಿ ವಿರುದ್ಧ ಕ್ರಮ: ಸ್ಟೋನ್ ವ್ಯಾಲಿ ರೆಸಾರ್ಟ್ 5 ಎಕರೆ ಭೂಮಿ ಪಡೆದು, ಅರಣ್ಯದ 9 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿದೆ. ಈ ಬಗ್ಗೆ ಏನು ಕ್ರಮ ಜರುಗಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಆ ರೆಸಾರ್ಟ್ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು, ಆದರೆ ಅವರು ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದು, ಡಿ.ಸಿ.ಎಫ್. ಸಿಸಿಎಫ್ ಹಾಗೂ ಕಾನೂನು ತಜ್ಞರ ಜೊತೆ ಚರ್ಚಿಸಿ ತಡೆಯಾಜ್ಞೆ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ರಮ ಮಂಜೂರಾತಿ ವಿರುದ್ಧ ಕ್ರಮ: ಕಂದಾಯ ಇಲಾಖೆಯ ಯಾವುದೇ ಅಧಿಕಾರಿ ಅರಣ್ಯ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದರೆ, ಅವರ ವಿರುದ್ಧ ಅರಣ್ಯ ಇಲಾಖೆಯೂ ಕ್ರಮ ಕೈಗೊಳ್ಳುತ್ತದೆ. ಕಂದಾಯ ಇಲಾಖೆಯೂ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಇಂತಹ ಅಧಿಕಾರಿಗಳ ವಿರುದ್ಧ ಎಫ್.ಐ.ಆರ್. ಆಗಿದ್ದು, ಬಂಧನವೂ ಆಗಿದೆ ಎಂದರು.
ಒಂದೇ ಸರ್ವೆ ನಂಬರ್ ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಇರುವ ಹಿನ್ನೆಲೆಯಲ್ಲಿ ಗೊಂದಲ ಇದೆ. ಹೀಗಾಗಿ ಜಂಟಿ ಸರ್ವೆ ಆಗಬೇಕಿದ್ದು, ಇದಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.