ಬೆಳೆ ಸಮೀಕ್ಷೆ ಮತ್ತು ಗ್ರೌಂಡ್ ಟ್ರುತಿಂಗ್ ವಾರದಲ್ಲಿ ಮುಗಿಸಿ ವರದಿ ಸಲ್ಲಿಸಿ

ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ!

ತಕರಾರು ಅರ್ಜಿ ವಿಲೇವಾರಿಗೂ 7 ದಿನದ ಗಡುವು

ಇ-ಆಫೀಸ್ ಬಳಕೆಗೆ ಅಧಿಕಾರಿಗಳು ಹಿಂದೇಟು, ಸಚಿವರ ಅಸಮಾಧಾನ

ನಾಡಕಚೇರಿಗಳಿಗೆ ದಿಢೀರ್ ಭೇಟಿ ಅಧಿಕಾರಿ ವರ್ಗಕ್ಕೆ ಚುರುಕು

ಭೂ-ಕುಸಿತ-ಬಾಕಿ ಕಾಮಗಾರಿ ಬಗ್ಗೆಯೂ ಸುದೀರ್ಘ ಚರ್ಚೆ

ಶಿವಮೊಗ್ಗ: ರಾಜ್ಯ ಸರ್ಕಾರ ಬರ ಘೋಷಣೆಗೆ ಸಿದ್ದತೆ ನಡೆಸುತ್ತಿದ್ದು, ಜಿಲ್ಲೆಯಾದ್ಯಂತ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಮತ್ತು ಗ್ರೌಂಡ್ ಟ್ರುತಿಂಗ್ ( ಬೆಳೆ ಪರಿಶೀಲನೆ ) ನಡೆಸಿ ವಾರಾಂತ್ಯದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

          ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ರಾಜ್ಯದಲ್ಲಿ ಆರಂಭದಲ್ಲಿಯೇ 2023ರ ಮಂಗಾರು ದುರ್ಬಲಗೊಂಡು, ಜೂನ್ ತಿಂಗಳಿನಲ್ಲಿ ಶೇ.56ರಷ್ಟು ಮಳೆ ಕೊರತೆಯಾಗಿತ್ತು. ನಂತರ ಜುಲೈ ತಂಗಳಿನಲ್ಲಿ ಉತ್ತಮವಾಗಿ ಮಳೆಯಾದರೂ, ಆಗಸ್ಟ್ ತಿಂಗಳಿನಲ್ಲಿ ಶೇಕಡಾ 73 ರಷ್ಟು ಮಳೆ ಕೊರತೆಯಾಗಿದೆ. ಒಟ್ಟಾರೆ ಪ್ರಸಕ್ತ ಮಂಗಾರು ಜೂನ್ 1 ರಿಂದ ಸೆಪ್ಟೆಂಬರ್ 4 ರವರೆಗೆ ವಾಡಿಕೆಯಾಗಿ 711ಮಿ.ಮೀ ಮಳೆಯಾಗಬೇಕಿದ್ದು, ಕೇವಲ 526 ಮಿ.ಮೀ ಮಳೆಯಾಗಿದೆ. ಶೇಕಡಾ 26ರಷ್ಟು ಮಳೆ ಕೊರತೆಯಾಗಿದ್ದು, ಬರ ಪರಿಸ್ಥಿತಿ ತಲೆದೋರಿದೆ.

 

 

          ಸೆಪ್ಟೆಂಬರ್ 19ರಲ್ಲಿದ್ದಂತೆ 113 ತಾಲೂಕುಗಳ ಪೈಕಿ ಜಂಟಿ ಸಮೀಕ್ಷೆಯಲ್ಲಿ ಮಾರ್ಗಸೂಚಿ ಅನ್ವಯ 62 ತಾಲೂಕುಗಳ ಬರ ಘೋಷಣೆಗೆ ಅರ್ಹವಾಗಿದೆ. ಆದರೆ, ಜಂಟಿ ಸಮೀಕ್ಷೆಯ ನಂತರ ಬೆಳೆ ಪರಿಸ್ಥಿತಿ ಮತ್ತೆ ಕುಸಿದಿದೆ ಎಂದು ವರದಿಗಳು ಬಂದಿರುತ್ತವೆ. ಹೀಗಾಗಿ 134 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ (ground truthing) ಮಾಡಲು ಸಚಿವ ಸಂಪುಟ ಉಪಸಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ರೈತರಿಗೆ ಮತ್ತಷ್ಟು ಸಹಾಯವಾಗಲಿದ್ದು, ಅಧಿಕಾರಿಗಳು ವಾರಾತ್ಯದೊಳಗೆ ಸಮೀಕ್ಷೆ ಮುಗಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ತಕರಾರು ಪ್ರಕರಣಗಳ ವಿಲೇವಾರಿಗೆ ಒಂದು ವಾರದ ಗಡುವು

          ತಕರಾರು ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಈ ಹಿಂದಿಗಿಂತಲೂ ಶಿವಮೊಗ್ಗ ಪ್ರಸ್ತುತ ಉತ್ತಮ ಸಾಧನೆ ಮಾಡಿದೆ. ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಸೂಚಿಸಿದ ಸಚಿವ ಕೃಷ್ಣ ಬೈರೇಗೌಡ ಆದರೂ, ಜಿಲ್ಲೆಯಲ್ಲಿ ನೂರಾರು ತಕರಾರು ಪ್ರಕರಣಗಳು ಈಗಲೂ ಬಾಕಿ ಇವೆ ಎಂದು ಗಮನ ಸೆಳೆದರು. ಅಲ್ಲದೆ, ಈ ಎಲ್ಲಾ ಪ್ರಕರಣಗಳನ್ನೂ ಶೀಘ್ರದಲ್ಲೇ ವಿಲೇವಾರಿ ಮಾಡಬೇಕು. ಪ್ರತಿಯೊಂದು ಪ್ರಕರಣವನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಗೊಳಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದರು.

          ತಕರಾರರು ಪ್ರಕರಣಗಳ ಇತ್ಯರ್ಥ ವಿಳಂಭವಾಗುತ್ತಿರುವುದರಿಂದ ಜನ ಸಾಮಾನ್ಯರು ತಾಲೂಕು-ಜಿಲ್ಲಾ ಕಚೇರಿಗಳಿಗೆ ಪ್ರತಿದಿನ ನಡೆದಾಡು ವಂತಾಗಿದೆ. ಇದರಿಂದ ಸರ್ಕಾರಕ್ಕೂ ಕೆಟ್ಟ ಹೆಸರು. ಜನ ಸಾಕಷ್ಟು ನಿರೀಕ್ಷೆಗಳಿಂದ ಕಾಂಗ್ರೆಸ್ ಗೆ ಮತ ನೀಡಿ ಅಧಿಕಾರ ಕೊಟ್ಟಿದ್ದಾರೆ. ಹೀಗಾಗಿ ಜನಪರ ಆಡಳಿತ ನೀಡುವುದು ನಮ್ಮ ಗುರಿಯಾಗಬೇಕು. ಆ ನಿಟ್ಟಿನಲ್ಲಿ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳು ವಾರದಲ್ಲಿ ಕನಿಷ್ಟ ನಾಲ್ಕು ದಿನ ಕಾರ್ಯ ನಿರ್ವಹಿಸಬೇಕು. ಎಲ್ಲಾ ಬಾಕಿ ಪ್ರಕರಣಗಳನ್ನೂ ಶೀಘ್ರ ವಿಲೇವಾರಿಗೆ ಒತ್ತು ನೀಡಬೇಕು. ಆದರೆ,  ಶೀಘ್ರ ವಿಲೇ ನೆಪದಲ್ಲಿ ಗುಣಮಟ್ಟದ ಜೊತೆಗೆ ಹೊಂದಾಣಿಕೆ ಇಲ್ಲ ಎಂದು ಅವರು ತಿಳಿಸಿದರು.

          ವಿಚಾರಣೆಯಾಗಿ ಆದೇಶಕ್ಕಾಗಿ ಕಾಯ್ದಿರಿಲ್ಪಟ್ಟ ಪ್ರಕರಣಗಳ ಬಗ್ಗೆಯೂ ಗಮನ ಸೆಳೆದ ಸಚಿವರು, “ಸಾಗರ ಉಪ ವಿಭಾಗದಲ್ಲಿ 76 ಪ್ರಕರಣಗಳ ವಿಚಾರಣೆ ಮುಗಿದು ಆದೇಶಕ್ಕಾಗಿ ಕಾಯ್ದಿರಿಸಲ್ಪಟ್ಟಿದ್ದರೂ ಆದೇಶ ಪ್ರಕಟವಾಗಿರುವುದಿಲ್ಲ. ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳ ವಿಲೇವಾರಿಗೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ 15 ದಿನಗಳೊಳಗಾಗಿ ಆದೇಶ ಹೊರಡಿಸಬೇಕು ಎಂಬ ಕಾನೂನು ಇದೆ. ಕಾನೂನಿನನ್ವಯ ಅಧಿಕಾರಿಗಳು ತುರ್ತಾಗಿ ಆದೇಶ ಹೊರಡಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಾಕೀತು ಮಾಡಿದರು.

          ನಮೂನೆ 57ರ ಅಕ್ರಮ-ಸಕ್ರಮಕ್ಕೆ ಆ್ಯಪ್

          ನಮೂನೆ 57ರ ಅಕ್ರಮ ಸಕ್ರಮ ಪ್ರಕರಣಗಳೂ ಆದಷ್ಟು ಶೀಘ್ರದಲ್ಲಿ ಇತ್ಯರ್ಥ ಮಾಡಬೇಕು. ಈ ನಿಟ್ಟಿನಲ್ಲಿ ಅಕ್ರಮ-ಸಕ್ರಮ ಸಮಿತಿಯನ್ನು ಶೀಘ್ರದಲ್ಲಿ ನೇಮಕ ಮಾಡಲಾಗುವುದು. ಈ ಪ್ರಕರಣಗಳ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ತಾಂತ್ರಿಕ ಸಹಾಯವನ್ನೂ ಒದಗಿಸಲಾಗುವುದು ಎಂದು ಸಭೆಯಲ್ಲಿ ಸಚಿವರು ತಿಳಿಸಿದರು.

          ಅಕ್ರಮ-ಸಕ್ರಮ ಅರ್ಜಿದಾರರು ನಿಜಕ್ಕೂ ಆ ಭೂಮಿಯಲ್ಲಿ ಕೃಷಿಯಲ್ಲಿ ತೊಡಗಿದ್ದಾರಾ? ಎಂಬ ಮಾಹಿತಿಯನ್ನು ಗೂಗಲ್ ಇಮೇಜ್ ಮೂಲಕ ಅಧಿಕಾರಿಗಳಿಗೆ ಒದಗಿಸಲಾಗುವುದು. ಈ ಸಂಬಂಧ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಯೋ ಫೆನ್ಸಿಂಗ್ ಅನ್ನು ಅಳೆಯಲು, ಸ್ಥಳಕ್ಕೆ ಭೇಟಿ ನೀಡಲು ಮತ್ತು ಸಂಬಂಧಿತ ವಿವರಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ಅಪ್ಲಿಕೇಷನ್ ಮೂಲಕ ಅಪ್ಲೋಡ್ ಮಾಡಬಹುದು. ಇದರ ಸಹಾಯದಿಂದ ನಮೂನೆ 57ರ ಪ್ರಕರಣವನ್ನು ಇತ್ಯರ್ಥಗೊಳಿಸಬಹುದು ಎಂದು ಅವರು ಮಾಹಿತಿ ನೀಡಿದರು.

          ಸರ್ಕಾರಿ ಭೂಮಿಯನ್ನು ಪತ್ತೆಹಚ್ಚುವ ಹಾಗೂ ಒತ್ತುವರಿಯಾಗ ದಿರುವುದನ್ನು ತಡೆಯುವ ಸಲುವಾಗಿ ಮತ್ತೊಂದು ಆ್ಯಪ್ ಅಭಿವೃದ್ಧಿಪಡಿಸುವ ಚಿಂತನೆಯೂ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಗ್ರಾಮ ಲೆಕ್ಕಾಧಿಕಾರಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಜಮೀನಿಗೆ ಭೇಟಿ ನೀಡಿ ವರದಿ ಸಲ್ಲಿಸುವ “ಬೀಟ್ ವ್ಯವಸ್ಥೆಗೆ ಈ ಆ್ಯಪ್ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

 

          ಅಲ್ಲದೆ, 94ಸಿ ಹಾಗೂ 94ಸಿಸಿ ಪ್ರಕರಣಗಳ ಬಗ್ಗೆಯೂ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ ಅವರು, 94ಸಿ ಹಾಗೂ 94ಸಿಸಿ ಪ್ರಕರಣಗಳನ್ನೂ ಕಾನೂನು ಪ್ರಕಾರವೇ ಇತ್ಯರ್ಥಗೊಳಿಸಬೇಕು. ಈ ವಿಚಾರದಲ್ಲಿ ಅಧಿಕಾರಿಗಳು, ರೈತರ ಹಾಗೂ ಜನಸಾಮಾನ್ಯರ ಪರ ಕೆಲಸ ನಿರ್ವಹಿಸಬೇಕೆ ವಿನಃ ಭೂಮಾಫಿಯಾ ಪರ ಕೆಲಸ ನಿರ್ವಹಿಸಬಾರದು ಎಂದು ಕಿವಿಮಾತು ಹೇಳಿದರು.

ಡಿಸೆಂಬರ್ ಒಳಗೆ 2000 ಸರ್ವೇಯರ್ ನೇಮಕ:

          ಶಿವಮೊಗ್ಗದಲ್ಲಿ ಶರವತಿ ಪ್ರಕರಣ ಮತ್ತು ಅರಣ್ಯ ಪ್ರದೇಶ ಗ್ರ್ಯಾಂಟ್ ನೀಡುವ ಪ್ರಕರಣಗಳು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಇದಲ್ಲದೆ, ರಾಜ್ಯದಲ್ಲಿ 2000 ಹೆಚ್ಚುವರಿ ಪರವಾನಿಗೆ ಸರ್ವೇಯರ್ ಗಳನ್ನು (ಭೂ ಮಾಪಕರು) ಡಿಸೆಂಬರ್ ತಿಂಗಳ ಒಳಗಾಗಿ ನೇಮಕ ಮಾಡಲಾಗುವುದು. ಪಕ್ಕದ ಜಿಲ್ಲೆಗಳಿಂದಲೂ ಜಂಟಿ ಸಮೀಕ್ಷೆಗಾಗಿ ಅಗತ್ಯ ಸಂಖ್ಯೆಯ ಸರ್ವೇಯರ್ ಗಳನ್ನು ಒದಗಿಸುವಂತೆ ಮಾನ್ಯ ಸಚಿವರು ಸರ್ವೆ ಆಯುಕ್ತರಿಗೆ ಸೂಚನೆ ನೀಡಿದರು. ಇದಲ್ಲದೇ 354 ಸರ್ಕಾರಿ ಭೂಮಾಪಕರನ್ನು ಮತ್ತು 1800 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಕ್ಕೆ ಅವಶ್ಯಕ ಕ್ರಮವಹಿಸಲು ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

 

          ಬಾಕಿ ಕಾಮಗಾರಿಗಳಿಗೆ ಗಡುವು!

          ಸಾರ್ವಜನಿಕ ಆಸ್ತಿಗಳಿಗೆ ಉಂಟಾಗಿರುವ ಹಾನಿ ದುರಸ್ಥಿಗೆ 2019 ರಿಂದ 2022 ರ ಅವಧಿಯಲ್ಲಿ ಮಂಜೂರಾಗಿ ಇನ್ನೂ ಪೂರ್ಣಗೊಳ್ಳದ 137 ಕಾಮಗಾರಿಗಳನ್ನು(ಕೊರೋನಾ ಸೇರಿದಂತೆ) ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

          ಈ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರಲು ಕಾರಣವೇನು? 45 ದಿನಗಳಲ್ಲಿ ಮುಗಿಯಬೇಕಾದ ಕಾಮಗಾರಿಗಳು 2019ರಿಂದಲೂ ಬಾಕಿ ಉಳಿದಿವೆ ಎಂದರೆ ಏನರ್ಥ? ಎಂದು ಆಕ್ರೋಶ ಹೊರಹಾಕಿದ ಸಚಿವರು, ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳಿಸಬೇಕು, ಸಂಬಂಧಪಟ್ಟ ಕಾಮಗಾರಿಗೆ ಹಣ ಪಾವತಿ ಮಾಡಬೇಕು. ಕಳೆದ ವರ್ಷದ ಬಾಕಿಯನ್ನೂ ಸಂಪೂರ್ಣವಾಗಿ ವಿಲೇವಾರಿ ಮಾಡಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಮುಂದಿನ ವಾರದಲ್ಲಿ ಎಲ್ಲಾ ಕಾಮಗಾರಿ ಮುಗಿಸಿ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

          ಭೂ ಕುಸಿತದ ಬಗ್ಗೆ ಇರಲಿ ಎಚ್ಚರ!

          ಸಭೆಯಲ್ಲಿ ಭೂ ಕುಸಿತದ ಬಗ್ಗೆಯೂ ಚರ್ಚೆ ನಡೆಸಲಾಯಿತು. ಈ ವೇಳೆ ಸಚಿವರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಕಳೆದ ಮಳೆಗಾಳದ ಋತುವಿನಲ್ಲಿ 135 ಕಡೆಗಳಲ್ಲಿ ಭೂ ಕುಸಿತ ಪ್ರದೇಶಗಳನ್ನು ಗುರುತಿಸಲಾಗಿದ್ದು ಅಂದಾಜು 40 ಕೋಟಿ ರೂಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

 

          ಈ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಜನ ಭೂ ಕುಸಿತಕ್ಕೆ ಸಿಲುಕಿ ಮೃತಪಟ್ಟ ನಂತರ ಪರಿಹಾರ ನೀಡುವುದಲ್ಲ ನಮ್ಮ ಕೆಲಸ. ಬದಲಾಗಿ ಭೂ ಕುಸಿತಕ್ಕೂ ಮೊದಲ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಜೀವ ಉಳಿಸುವುದು ನಮ್ಮ ಕೆಲಸ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಂತ್ರಜ್ಞಾನದ ಸಹಾಯದಿಂದ ಎಲ್ಲೆಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಪಟ್ಟಿ ತಯಾರಿಸಬೇಕು. ಆ ಭಾಗಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕು. ಜಿಲ್ಲಾಡಳಿತ ಪ್ರಾಮಾಣಿಕ ಪಟ್ಟಿ ಸಿದ್ದಪಡಿಸಿದರೆ, ಭೂ ಕುಸಿತ ತಡೆಗೆ ಸರ್ಕಾರವೂ ಮತ್ತಷ್ಟು ಹಣ ಸಹಾಯ ಮಾಡಲಿದೆ ಎಂದು ತಿಳಿಸಿದರು.  

 

          ನಾಡ ಕಚೇರಿಗಳಿಗೆ ದಿಢೀರ್ ಭೇಟಿ, ಆಡಳಿತ ವ್ಯವಸ್ಥೆಗೆ ಚುರುಕು

 ಹೊಳೆಹೊನ್ನೂರು ಹಾಗೂ ಆಯನೂರು ಹೋಬಳಿ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ ಸಚಿವರು, ಅಧಿಕಾರಿಗಳಿಂದ ಅನೇಕ ಮಾಹಿತಿಗಳನ್ನು ಪಡೆದರು. ಈ ವೇಳೆ ಎರಡೂ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಕ್ತ ತರಬೇತಿ ನೀಡದಿರುವುದು ತಿಳಿದ ಅವರು ಅಸಮಾಧಾನ ಹೊರಹಾಕಿದರು. ಅಲ್ಲದೆ, ಸೂಕ್ತ ತರಬೇತಿ ಇಲ್ಲದೆ, ಗ್ರಾಮ ಲೆಕ್ಕಾಧಿಕಾರಿಗಳು ಕೆಲಸ ನಿರ್ವಹಿಸುವುದು ಹೇಗೆ? ಎಂದು ಪ್ರಶ್ನಿಸಿದರಲ್ಲದೆ, ಶೀಘ್ರದಲ್ಲೇ ತರಬೇತಿ ನೀಡುವಂತೆಯೂ ಸೂಚಿಸಿದರು.

          ಇನ್ನೂ ಆಯನೂರಿನಲ್ಲಿ ನಕಾಶೆ ರಸ್ತೆ ಒತ್ತುವರಿಯಾಗಿರುವ ಕುರಿತ ಜನರ ಆರೋಪಕ್ಕೂ ಕಿವಿಗೊಟ್ಟ ಸಚಿವರು, ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

 

          ಇದೇ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರ ಕೆಲಸದ ಮಹತ್ವವನ್ನು ತಿಳಿಸಿಕೊಟ್ಟ ಸಚಿವ ಕೃಷ್ಣ ಬೈರೇಗೌಡ ಅವರು, “ನೀವು ನೀಡುವ ವರದಿಯನ್ನು ರಾಷ್ಟ್ರಪತಿಗಳೂ ಸಹ ಬದಲಿಸಲು ಸಾಧ್ಯವಿಲ್ಲ. ನಿಮ್ಮ ಹುದ್ದೆಗೆ ಸಾಕಷ್ಟು ಮಹತ್ವವಿದೆ. ಹೀಗಾಗಿ ಹುದ್ದೆಯ ಜವಾಬ್ದಾರಿ ಅರಿತು ಜನಪರವಾಗಿ ಕೆಲಸ ನಿರ್ವಹಿಸಬೇಕು ಎಂದು ಮನವಿ ಮಾಡಿದರು. ಜೊತೆಗೆ  ಭೂ ಕಂದಾಯವೂ ಸೇರಿದಂತೆ ಇತರೆ ಸೇವೆಗಳಿಗೆ ಹಣ ಪಾವತಿಯನ್ನು ಆನ್ಲೈನ್ ಪೇಮೆಂಟ್ ಮೂಲಕವೂ ಸ್ವೀಕರಿಸುವ ಬಗ್ಗೆ ಪರಿಶೀಲಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು., 

 

          ಇ-ಆಡಳಿತಕ್ಕೆ ಅನುಷ್ಠಾನ ವಿಳಂಭ, ಅಸಮಾಧಾನ:

 

          ಶಿವಮೊಗ್ಗ ನಗರ ಸಬ್ ರಿಜಿಸ್ಟ್ರಾರ್ ಕಚೇರಿಗೂ ದಿಢೀರ್ ಭೇಟಿ ನೀಡಿದ ಕಂದಾಯ ಸಚಿವರು, ತಹಶೀಲ್ದಾರ್ ಜಿಲ್ಲಾಧಿಕಾರಿ ಹಾಗೂ ಉಪ ಆಡಳಿತಾಧಿಕಾರಿಗಳು ಈವರೆಗೆ ಇ-ಆಡಳಿತ ಅನುಷ್ಠಾನಗೊಳಿಸದಿರಲು ಕಾರಣವೇನು? ಎಂದು ಅಧಿಕಾರಿಗಳಿಗೆ ಕಟು ಪ್ರಶ್ನೆಗಳನ್ನು ಮುಂದಿಟ್ಟರು.

 

          ಜಿಲ್ಲಾಧಿಕಾರಿಗಳು ಆಗಸ್ಟ್-15ರಿಂದಲೇ ಇ-ಆಡಳಿತವನ್ನು ಪಾಲಿಸಬೇಕು ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಗಳು ಸೆಪ್ಟೆಂಬರ್ 01 ರಿಂದ ಇ-ಆಫೀಸ್ ಆಡಳಿತಕ್ಕೆ ಮುಂದಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೂ, ಶಿವಮೊಗ್ಗದಲ್ಲಿ ಈವರೆಗೆ ಇ-ಆಡಳಿತ ಜಾರಿಯಾಗಿಲ್ಲ. ಇದಕ್ಕೆ ಕಾರಣವೇನು? ಇಂಟರ್ ನೆಟ್ ಸಮಸ್ಯೆ ಸೇರಿದಂತೆ ಬೇರೆ ಯಾವುದೇ ಸಮಸ್ಯೆ ಇದ್ದರೂ ಸಹ ಶೀಘ್ರದಲ್ಲೇ ಪರಿಹರಿಸಬೇಕು. ಅಧಿಕಾರಿಗಳು ಶೀಘ್ರದಲ್ಲಿ ಇ-ಆಡಳಿತಕ್ಕೆ ಮುಂದಾಗಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು.

 

 

          ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆಯ ಆಯುಕ್ತ ಸುನಿಲ್ ಕುಮಾರ್, ಸರ್ವೆ ಆಯುಕ್ತರಾದ ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಆರ್. ಹಾಗೂ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top