ಶಕ್ತಿ ಯೋಜನೆಯಿಂದ ಸ್ತ್ರೀ ಸಬಲೀಕರಣ : ಸಚಿವ ಬಿ.ನಾಗೇಂದ್ರ

ಬಳ್ಳಾರಿ: ಶಕ್ತಿ ಯೋಜನೆ ನಾನು ಉಸ್ತುವಾರಿ ಸಚಿವ ಆದ ನಂತರದ ಮೊದಲ, ನನ್ನ ರಾಜಕೀಯ ಬದಕಿನ ಅತ್ಯಂತ ಮಹತ್ವದ ಕಾರ್ಯಕ್ರಮ ಎಂದು ಪರಿಶಿಷ್ಟ ಪಂಗಡ ಕಲ್ಯಾಣ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗಳ ಸಚಿವ ಬಿ.ನಾಗೇಂದ್ರ ಹೇಳಿದರು.

ಬಳ್ಳಾರಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮಹಿಳೆಯರ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.  ಇಂತಹ ಒಂದು ಕಾರ್ಯಕ್ರಮ ಜಾರಿಗೆ ತಂದ ಸರ್ಕಾರಕ್ಕೆ ಧನ್ಯವಾದ ಹೇಳುವೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದಾಗ ಈ ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಸೂಚಿಸಿದರೆಂದು ತಿಳಿಸಿದರು.

ಇಂದು ಸುದ್ದಿ ಮಾಧ್ಯಮಗಳಲ್ಲಿ ಮಹಿಳೆಯರ ಹಾರೈಕೆ ಗಮನಿಸಿದರೆ ನಮ್ಮ ಸರ್ಕಾರ ಹಾಗೂ ಸಿಎಂ ಅವರಿಗೆ ಮಹಿಳೆಯರ ಪುಣ್ಯ ತಟ್ಟಲಿದೆ. ಮಹಿಳೆಯರು ಹಲವಾರು ಹಬ್ಬ ಆಚರಿಸುತ್ತಾರೆ, ಆದರೆ ಇಂದು ರಾಜ್ಯದ ಮಹಿಳೆಯರಿಗೆ ನಿಜವಾದ ಹಬ್ಬ ಎಂದು ಹೇಳಿದ ಸಚಿವ ಬಿ.ನಾಗೇಂದ್ರ, ಮಹಿಳೆಯರು ದಿನನಿತ್ಯದ ಕೆಲಸಗಳಿಗೆ ಖರ್ಚು ಮಾಡುವುದೇ ಕಷ್ಟ, ಇಂತಹ ಸಂದರ್ಭದಲ್ಲಿ ಸಾರಿಗೆ ವೆಚ್ಚ ಭರಿಸುವುದು ಕಷ್ಟವಾಗಿತ್ತು. ಈ ಯೋಜನೆ ಮಹಿಳೆಯರಿಗೆ ತುಂಬ ಸಹಕಾರಿಯಾಗಲಿದೆ ಎಂದರು.

 

 

ದಿನನಿತ್ಯದ ಬದುಕಿನಲ್ಲಿ ಯಾರಿಗೋ ಅನಾರೋಗ್ಯ ಇದ್ದರೆ ಭೇಟಿ ಆಗಲು, ತವರು ಮನೆಗೆ ಹೋಗಿ ಬರಲು, ವ್ಯಾಪಾರ ವಹಿವಾಟು ನಡೆಸುವ ಮಹಿಳೆಯರ ಸಬಲೀಕರಣ ಈ ಯೋಜನೆಯಿಂದ ಆಗಲಿದೆ. ವ್ಯಾಪಾರ ವಹಿವಾಟು ನಡೆಸುವ ಗ್ರಾಮೀಣ ಭಾಗದ ಮಹಿಳೆಯರಿಗೆ ಸಾಕಷ್ಟು ಅನುಕೂಲ ಆಗಲಿದೆ, ಗ್ರಾಮೀಣ ಭಾಗದ ಮಹಿಳಾ ವ್ಯಾಪಾರಿಗಳು ಗಳಿಸುವ ಲಾಭದಲ್ಲಿ ದೊಡ್ಡ ಪಾಲು ಸಾರಿಗೆಗೆ ಖರ್ಚಾಗುತ್ತಿತ್ತು, ಆದರೆ ಆ ಖರ್ಚು ತಪ್ಪಲಿದೆ. ರಾಜ್ಯದ ಯಾವುದೇ ಮಹಿಳೆಯರು ರಾಜ್ಯದ ಯಾವುದೇ ಗಡಿಯಿಂದ ಇನ್ನೊಂದು ಗಡಿವರೆಗೆ ಸಂಚರಿಸಬಹುದು ಎಂದು ಅವರು ಹೇಳಿದರು.

ಈ ಯೋಜನೆ ಇಡೀ ದೇಶದಲ್ಲಿ ಅಪರೂಪದ ಯೋಜನೆ, ದೇಶದ ಜನ ರಾಜ್ಯದತ್ತ ನೋಡುವಂತಾಗಿದೆ. ಮಹಿಳೆಯರಿಗೆ ಪ್ರಯಾಣ ಉಚಿತ ಆಗಿರುವುದರಿಂದ ಪುರುಷರ ಹಣವೂ ಉಳಿತಾಯ ಆಗಲಿದೆ. ಯೋಜನೆಯನ್ನು ಮಹಿಳೆಯರು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಮಾಧ್ಯಮದವರು ಯೋಜನೆ ಬಗ್ಗೆ ಧನಾತ್ಮಕ ಸುದ್ದಿ ಮಾಡಿ, ಸಹಕರಿಸಬೇಕು ಎಂದರು.

 

 

ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನ ನಾಯಕರು, ಸಾರ್ವಜನಿಕರು ಸಹಕಾರ ನೀಡಬೇಕು, ಅದರಲ್ಲೂ ಅಧಿಕಾರಿಗಳು ಈ ಹಿಂದೆ ಹೇಗೆ ಕೆಲಸ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಇನ್ಮುಂದೆ ಎಲ್ಲರೂ ನನಗೆ ಸಹಕಾರ ನೀಡಬೇಕು ಎಂದರು.

ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್ ಅವರು ಮಾತನಾಡಿ; ನಾವು ಭರವಸೆಗಳನ್ನು ನೀಡಿದ್ದೆವು, ಜನರು ನಮಗೆ ಬಹುಮತ ನೀಡಿದ್ದೀರಿ, ಜಿಲ್ಲೆಯ 5 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ನಾವು ನೀಡಿದ ಭರವಸೆಗಳನ್ನು ಜಾರಿಗೆ ತರುವ ಸಮಯ ಇದು. ಕಾಂಗ್ರೆಸ್ ಮೊದಲಿನಿಂದಲೂ ಬಡವರ, ದುರ್ಬಲರ ಪರ ಇರುವ ಪಕ್ಷ, ಈ ಹಿನ್ನೆಲೆಯಲ್ಲಿ ಇಂದು ಶಕ್ತಿ ಯೋಜನೆಯಂತಹ ಕಾರ್ಯಕ್ರಮ ಜಾರಿಗೆ ತರಲು ಸಾಧ್ಯ ಆಗಿದೆ ಎಂದರು.

 

ಪ್ರತಿನಿತ್ಯ ಕೆಲಸ ಮಾಡುವ ಮಹಿಳೆಯರು, ವ್ಯಾಪಾರಿ ಮಹಿಳೆಯರಿಗೆ ಹಾಗೂ ಸಾಮಾನ್ಯ ಮಹಿಳೆಯರಿಗೂ ಕೂಡ ಶಕ್ತಿ ಯೋಜನೆಯಿಂದ ಅನುಕೂಲ ಆಗಲಿದೆ ಎಂದರು.

 

 

ಡಿಎಂಎಫ್ ನಿಧಿಯಿಂದ ಬಳ್ಳಾರಿಗೆ 6 ಹೊಸ ಬಸ್ ತರಲಾಗಿದೆ, ಕೆಕೆಆರ್ ಡಿಬಿ ನಿಧಿಯಿಂದ 60 ನೂತನ ಬಸ್ ಗಳು ಬಳ್ಳಾರಿಗಾಗಿ ಖರೀದಿ ಆಗಲಿವೆ. ನಮ್ಮ ನಾಯಕ ರಾಹುಲ್ ಗಾಂಧಿಯವರು ಭರವಸೆ ನೀಡಿರುವಂತೆ ಬಳ್ಳಾರಿಯನ್ನು ಜೀನ್ಸ್ ರಾಜಧಾನಿ ಆಗಿ ರೂಪಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ; ನಾನು ಶಾಸಕನಾದ ನಂತರ ಮೊದಲ ಕಾರ್ಯಕ್ರಮ ಶಕ್ತಿ ಯೋಜನೆ ಕಾರ್ಯಕ್ರಮ. ನಮ್ಮ ಪಕ್ಷಕ್ಕೆ ಮಹಿಳೆಯರ ಆಶೀರ್ವಾದ ಇರಲಿದೆ. ಈ ಯೋಜನೆ ಬಗ್ಗೆ ಬಹಳಷ್ಟು ಕುಹಕದ ಮಾತುಗಳನ್ನಾಡಿದರು. ಇಂದು ಅಧಿಕಾರಕ್ಕೆ ಬಂದಿರುವ ಸರ್ಕಾರ ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ತಪ್ಪದಂತಹ ಪಕ್ಷ, ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಕೊಟ್ಟ ಮಾತು ತಪ್ಪುವುದಿಲ್ಲ ಎಂದರು.

 

ಮಹಿಳೆಯರಿಗೆ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅಗತ್ಯ ಇಲ್ಲ, ವಾರ್ಡ್ ನ ಸದಸ್ಯರು, ಶಾಸಕರು, ಸಚಿವರಿಗೆ ನೇರವಾಗಿ ಅರ್ಜಿ ಕೊಡಬಹುದು ಎಂದರು.

 

 

ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಎಎಸ್ಪಿ ನಟರಾಜ್, ಸಾರಿಗೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top