ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ : ಮೂರೂ ಪಕ್ಷಗಳಲ್ಲಿ ಟಿಕೆಟ್‍ಗಳಿಗಾಗಿ ಲಾಬಿ ಶುರು

Ø ನಂಜುಡಪ್ಪ ವಿ

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಜೂನ್ ಆರರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ಯತೀಂದ್ರ,ಸಚಿವ ಎನ್.ಎಸ್ ಭೋಸರಾಜು ಮತ್ತು ಬಿಜೆಪಿಯಿಂದ ಅಶೋಕ್ ಹಾರ್ನಳ್ಳಿ,ರವಿಕುಮಾರ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

 

ವಿಧಾನಪರಿಷತ್ತಿನ ಹನ್ನೊಂದು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 7,ಬಿಜೆಪಿಗೆ 3 ಮತ್ತು ಜೆಡಿಎಸ್ ಗೆ 1 ಸ್ಥಾನ ಸಿಗುವುದು ನಿಶ್ಚಿತವಾಗಿದ್ದು,ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಟಿಕೆಟ್ ಗಾಗಿ ಮೂರೂ ಪಕ್ಷಗಳಲ್ಲಿ ಬಿರುಸಿನ ಲಾಬಿ ಆರಂಭವಾಗಿದೆ.

 

ಕಾಂಗ್ರೆಸ್ ಗೆಲ್ಲಬಹುದಾದ ಏಳು ಸ್ಥಾನಗಳಿಗೆ ಸುಮಾರು 100 ಮಂದಿ ಆಕಾಂಕ್ಷಿಗಳಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ,ಮಾಜಿ ಶಾಸಕರಾದ ಯತೀಂದ್ರ ಅವರು ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

 

 

ಇದೇ ರೀತಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಸದಸ್ಯರಾಗಿರುವ ಎನ್.ಎಸ್.ಭೋಸರಾಜು ಅವರ ಸದಸ್ಯತ್ವದ ಅವಧಿ ಮುಕ್ತಾಯವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಪುನ: ವಿಧಾನಪರಿಷತ್ತಿನ ಕಣಕ್ಕಿಳಿಸುವುದು ಖಚಿತವಾಗಿದೆ.

 

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು ಅವರ ಸದಸ್ಯತ್ವದ ಅವಧಿ ಮುಕ್ತಾಯವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಮತ್ತೊಂದು ಅವಧಿಗೆ ಮುಂದುವರಿಯಲು ಅವರು ಬಯಸಿದ್ದಾರೆ.

 

ಇದೇ ರೀತಿ ನಟರಾಜ್ ಗೌಡ,ಹೆಚ್.ಎಂ.ರೇವಣ್ಣ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ಟಿಕೆಟ್ ಗಾಗಿ ಲಾಬಿ ನಡೆಸಿದ್ದು,ಈ ಮಧ್ಯೆ ಜಾತಿ,ಪ್ರದೇಶಾವಾರು ಪ್ರಾತಿನಿಧ್ಯ ನೀಡಲು ಕಾಂಗ್ರೆಸ್ ಕಸರತ್ತು ಆರಂಭಿಸಿದೆ.

 

ಕುರುಬ,ಒಕ್ಕಲಿಗ,ಲಿಂಗಾಯತ,ಪರಿಶಿಷ್ಟ ಜಾತಿ,ಪಂಗಡ,ಅಲ್ಪಸಂಖ್ಯಾತ ಮತ್ತು ಮಹಿಳೆಗೆ ಪ್ರಾತಿನಿಧ್ಯ ನೀಡಲು ನಿರ್ಧರಿಸಿರುವ ಕಾಂಗ್ರೆಸ್ ಟಿಕೆಟ್ ನೀಡುವ ಸಂಬಂಧ ಮೇ 23 ರ ಗುರುವಾರ ಆರಂಭಿಕ ಸುತ್ತಿನ ಚರ್ಚೆ ನಡೆಸಲಿದೆ.

 

 

ಈ ಚರ್ಚೆಯ ನಂತರ ವಿಧಾನಪರಿಷತ್ತಿನಲ್ಲಿ ಸ್ಪರ್ಧಿಸಲಿರುವ ಪಕ್ಷದ ಅಭ್ಯರ್ಥಿಗಳ ಪಟ್ಟಿ ತಯಾರಾಗಲಿದ್ದು ಮೇ 29 ರಂದು ದಿಲ್ಲಿಯಲ್ಲಿ ನಡೆಯಲಿರುವ ಚರ್ಚೆಯ ನಂತರ ಅಂತಿಮ ಪಟ್ಟಿ ಸಿದ್ಧವಾಗಲಿದೆ.

 

ಇನ್ನು ಪ್ರತಿಪಕ್ಷ ಬಿಜೆಪಿಗೆ 3 ಸ್ಥಾನಗಳನ್ನು ಗೆಲ್ಲಲು ಅವಕಾಶವಿದ್ದು ಹಿರಿಯ ನ್ಯಾಯವಾದಿ ಅಶೋಕ್ ಹಾರ್ನಳ್ಳಿ,ಹಾಲಿ ಸದಸ್ಯರಾಗಿರುವ ರವಿಕುಮಾರ್ ಅವರಿಗೆ ಟಿಕೆಟ್ ನೀಡಲು ಬಿಜೆಪಿಯ ರಾಜ್ಯ ನಾಯಕರು ತೀರ್ಮಾನಿಸಿದ್ದು,ಮೂರನೇ ಟಿಕೆಟ್ ಗಾಗಿ ತೀರ್ವ ಸ್ಪರ್ಧೆ ಏರ್ಪಟ್ಟಿದೆ.

 

ಮಾಜಿ ಸಚಿವರಾದ ಸಿ.ಟಿ.ರವಿ,ರಾಜ್ಯ ಬಿಜೆಪಿಯ ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ,ಮೈಸೂರಿನ ರಘು ಕೌಟಿಲ್ಯ ಸೇರಿದಂತೆ ಹಲವರು ಟಿಕೆಟ್ ಗಾಗಿ ಬಿರುಸಿನ ಯತ್ನ ನಡೆಸಿದ್ದಾರೆ.

 

ಜಾತ್ಯಾತೀತ ಜನತಾದಳಕ್ಕೆ 1 ಸ್ಥಾನ ಗೆಲ್ಲುವ ಅವಕಾಶವಿದ್ದು ಕುಪೇಂದ್ರರೆಡ್ಡಿ,ಬಿ.ಎಂ.ಫಾರೂಕ್ ಮತ್ತು ಜವರಾಯಿ ಗೌಡರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ಉನ್ನತ ಮೂಲಗಳು ಹೇಳಿವೆ.

 

 

ಅಂದ ಹಾಗೆ ಅಭ್ಯರ್ಥಿಯ ಗೆಲುವಿಗೆ ತಲಾ 19 ಮತಗಳ ಅಗತ್ಯವಿದ್ದು,ಇದರ ಆಧಾರದ ಮೇಲೆ ಕಾಂಗ್ರೆಸ್ ಗೆ ಏಳು,ಬಿಜೆಪಿಗೆ ಮೂರು ಹಾಗೂ ಜೆಡಿಎಸ್ ಗೆ ಒಂದು ಸ್ಥಾನ ದಕ್ಕಲಿದ್ದು,ಮೂರೂ ಪಕ್ಷಗಳು ತಮ್ಮ ತಮ್ಮ ಶಕ್ತಿಗನುಗುಣವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದು,ಹಾಗೇನಾದರೂ ಆದರೆ 11 ಮಂದಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top