ಚುನಾವಣಾ ಆಯೋಗವು ನಿಷ್ಪಕ್ಷವಾಗಿ ತನ್ನ ಜವಾಬ್ದಾರಿ ನಿರ್ವಹಿಸಲಿ

ಬೆಂಗಳೂರು : ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷವನ್ನು ಬೆದರಿಸುವುದು, ಕಿವಿ ಹಿಂಡುವುದನ್ನು, ಬುದ್ದಿ ಹೇಳುವುದನ್ನು ಬಿಟ್ಟು,ನ್ಯಾಯ ಸಮ್ಮತ, ನಿಷ್ಪಕ್ಷಪಾತವಾಗಿ ತನ್ನ ಜವಾಬ್ದಾರಿ ನಿರ್ವಹಿಸಿಲಿ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮತಿ ಖಾಯಂ ಸದಸ್ಯರಾದ ಬಿ.ಕೆ.ಹರಿಪ್ರಸಾದ್‍ ಹೇಳಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯೂ ಹಿಂದೆಂದೂ ನಡೆಯದ ದ್ವೇಷ, ಅರಾಜಕತೆ, ಪಕ್ಷಪಾತಿತನದಿಂದಲೇ ನಡೆಯುತ್ತಿರುವುದನ್ನ ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬಾರಿಯ ಚುನಾವಣೆ ಪ್ರಜಾಪ್ರಭುತ್ವ, ಸಂವಿಧಾನದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಇಂತಹ ಅಪಾಯವನ್ನು ದೇಶದ ಜನರಿಂದ ಮುಚ್ಚಿಡಬೇಕೆಂದು ಚುನಾವಣಾ ಆಯೋಗ ತಾಕೀತು ಮಾಡಿರುವುದು ಆಶ್ಚರ್ಯ..!

 

ಬಿಜೆಪಿ ಸಂಸದರು, ಹಿರಿಯ ನಾಯಕರುಗಳು ಈ ಬಾರಿ ಅಧಿಕಾರಕ್ಕೆ ಬಂದರೆ ನಾವು ಸಂವಿಧಾನ ಬದಲಾವಣೆ ಮಾಡಿಯೇ ಸಿದ್ಧ ಎಂದು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. “ದೇಶದ ಹಿತಕ್ಕಾಗಿ ಸಂವಿಧಾನ ಬದಲಾವಣೆ ಮಾಡುವುದು ಅನಿವಾರ್ಯ” ಎಂದು ಬಹಿರಂಗ ಚುನಾವಣಾ ಪ್ರಚಾರದಲ್ಲಿ ರಾಜಸ್ತಾನದ ನಾಗೌರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜ್ಯೋತಿ ಮಿರ್ಧಾ ಹೇಳಿಕೆ ನೀಡಿದ್ದಾರೆ. “ಮತ್ತೆ ಅಧಿಕಾರಕ್ಕೆ ಬಂದರೆ ದೇಶಕ್ಕೆ ಹೊಸ ಸಂವಿಧಾನ ನೀಡುತ್ತೇವೆ” ಎಂದು ಅಯೋಧ್ಯೆಯ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಲಲ್ಲೂ ಸಿಂಗ್ ಕೂಡಿ ಹೇಳಿಕೆ ನೀಡಿದ್ದಾರೆ. ಇನ್ನೂ ಮುಂದುವರೆದು ಹಾಲಿ ಸಂಸದ, ಕೇಂದ್ರದ ಮಾಜಿ ಮಂತ್ರಿ ಅನಂತ್ ಕುಮಾರ ಹೆಗಡೆ “ಸಂವಿಧಾನ ಬದಲಾವಣೆ ಮಾಡಲು 400 ಸ್ಥಾನಗಳು ಬಿಜೆಪಿಗೆ ಅನಿವಾರ್ಯ” ಎಂದು ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಅಪಾಯಕಾರಿ ಹೇಳಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿಯಾಗಲಿ, ಬಿಜೆಪಿ ಪಕ್ಷವಾಗಲಿ ಕನಿಷ್ಟ ಸ್ಪಷ್ಟನೆಯನ್ನೂ ನೀಡಿಲ್ಲ ಎಂದು ಬಿ.ಕೆ.ಹರಿಪ್ರಸಾದ್‍ ಆರೋಪಿಸಿದ್ದಾರೆ.

ಪ್ರಧಾನಿ ಮೋದಿಯ ಸುತ್ತಾಮುತ್ತಾ ಸಂವಿಧಾನ ಬದಲಾಯಿಸುವವರನ್ನೇ ಆರ್ಥಿಕ ಸಲಹೆಗಾರರನ್ನಾಗಿ ಮಾಡಿಕೊಂಡಿದ್ದಾರೆ. ಪ್ರಧಾನಿಯ ಆರ್ಥಿಕ ಮುಖ್ಯ ಸಲಹೆಗಾರ “ಬಿಬೇಕ್ ದೇಬ್ರಾಯ” ಹೊಸ ಸಂವಿಧಾನದ ಅಗತ್ಯವಿದೆ ಎಂದು ಅಂಕಣವೇ ಬರೆದಿದ್ದು ಜಗಜ್ಜಾಹೀರಾಗಿದೆ. ಸಂವಿಧಾನ ಹಾಗೂ ಮೀಸಲಾತಿ ವಿರೋಧಿ ಮನಸ್ಥಿತಿ ಬಿಜೆಪಿಯ ಹುಟ್ಟಿನಿಂದಲೇ ಇರುವುದು ಗೌಪ್ಯ ವಿಷಯವಲ್ಲ. ಆದರೆ ಸಂವಿಧಾನದಡಿಯಲ್ಲಿ ಕಾರ್ಯನಿರ್ಹವಹಿಸಬೇಕಾದ ಚುನಾವಣಾ ಆಯೋಗದ ಮೌನದ ಹಿಂದಿನ ಉದ್ದೇಶವೇನು? ಈ ಕ್ಷಣದವರೆಗೂ ನೋಟಿಸ್ ನೀಡಲು ಕೂಡ ಯಾರ ಒಪ್ಪಿಗೆಗೆ ಕಾಯುತ್ತಿದ್ದೆ? ದೇಶದ ಅತಿದೊಡ್ಡ ವಿರೋಧ ಪಕ್ಷವನ್ನು ಬೆದರಿಸುತ್ತಿರುವುದು ಯಾರ ಅಣತಿಯಂತೆ?

 

“ದೇಶದ ಸಂವಿಧಾನವನ್ನು ರದ್ದುಪಡಿಸಬಹುದು ಎಂಬಂತಹ ತಪ್ಪು ಭಾವನೆ ಮೂಡಿಸುವ ಹೇಳಿಕೆಗಳನ್ನು ನೀಡಬಾರದು” ಎಂದು ಕಾಂಗ್ರೆಸ್ ಪಕ್ಷವನ್ನು ತಾಕೀತು ಮಾಡುತ್ತಿರುವುದನ್ನ ನೋಡಿದರೆ ಸಂವಿಧಾನ ಬದಲಾವಣೆ ಮಾಡುವ ಬಿಜೆಪಿಯ ಉದ್ದೇಶಕ್ಕೆ ಚುನಾವಣಾ ಆಯೋಗದ ಸಮ್ಮಿತಿ ಇದೆಯೇ? ಸಂವಿಧಾನ ಅಪಾಯದಲ್ಲಿರುವುದು ದೇಶದ ಜನರಿಗೆ ತಿಳಿಸುವುದು ತಪ್ಪೇ? ಧರ್ಮದ ಆಧಾರದಲ್ಲಿ ಪ್ರಧಾನಿಯಾದಿಯಾಗಿ ಬಿಜೆಪಿಯ ನಾಯಕರು ಬಹಿರಂಗವಾಗಿ ದ್ವೇಷ ಭಾಷಣವನ್ನು ಮಾಡುತ್ತಿದ್ದರೂ ಚುನಾವಣಾ ಆಯೋಗದ ಕಣ್ಣಿಗೆ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದರು.

 

ಭಾರತದ ಚುನಾವಣಾ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಚುನಾವಣಾ ಆಯೋಗದ ಪಕ್ಷಪಾತಿತನ ಹಾಗೂ ನಿಷ್ಕ್ರಿಯತೆಯನ್ನು ದೇಶ ನೋಡುತ್ತಿದೆ. ದೇಶದ ಮತದಾರರೂ ಚುನಾವಣಾ ಆಯೋಗದ ಮೇಲಿನ ಸಂಪೂರ್ಣ ಭರವಸೆ ಕಳೆದುಕೊಳ್ಳುವ ಮೊದಲು, ತನ್ನ ಘನತೆ,ಪರಂಪರೆಗೆ ಪೂರಕವಾಗಿ ಕಾರ್ಯನಿರ್ವಹಿಸಲಿ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top