ಜಯಣ್ಣ ಶೆಡ್‍ನಲ್ಲಿ ಜಫ್ತಿಯಾಗಿರುವ ವಾಹನಗಳ ಬಿಡುಗಡೆಗೆ ಡ್ರೈವರ್ಸ್ ಯೂನಿಯನ್ ಆಗ್ರಹ

ಬೆಂಗಳೂರು: ರಾಜರಾಜೇಶ್ವರಿ ನಗರದ ಪಟ್ಟಣಗೆರೆಯಲ್ಲಿರುವ ಜಯಣ್ಣ ಶೆಡ್‍ನಲ್ಲಿ 8 ಸಾವಿರಕ್ಕೂ ಅಧಿಕ ವಾಹನಗಳನ್ನು ಜಫ್ತಿ ಮಾಡಲಾಗಿದ್ದು, ಸಾಲ ಮರುಪಾವತಿ ಮಾಡುವವರ ವಾಹನಗಳ ಬಿಡುಗಡೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇಂಡಿಯನ್ ವೆಹಿಕಲ್ಸ್ ಡ್ರೈವಸರ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಒತ್ತಾಯಿಸಿದ್ದಾರೆ.

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಚಾಲಕರು ಹಾಗೂ ಮಾಲೀಕರಿಗೆ ಆಗಿರುವ ತೊಂದರೆ ಸರಿಪಡಿಸಬೇಕು. ಚಿತ್ರನಟ ದರ್ಶನ್ ಪ್ರಕರಣದ ನಂತರ ಪಟ್ಟಣಗೆರೆ ಜಯಣ್ಣ ಶೆಡ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದರಿಂದ ಚಾಲಕರು ಹಾಗೂ ಮಾಲೀಕರಿಗೆ ತಮ ವಾಹನಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಸಚಿವರು ಮಧ್ಯಪ್ರವೇಶಿಸಿ ಆಗಿರುವ ತೊಂದರೆ ತಪ್ಪಿಸಬೇಕು ಎಂದು ಅವರು ಮನವಿ ಮಾಡಿದರು. 

ಫೈನಾನ್ಸ್ ಹಾಗೂ ಇಎಂಐ ಕಟ್ಟಲು ಸಾಧ್ಯವಾಗದ ಬಸ್, ಲಾರಿ, ಕಾರುಗಳು ಹಾಗೂ ಹಳದಿ ಬೋರ್ಡ್‍ನ  ಕ್ಯಾಬ್‍ಗಳು ಸೇರಿದಂತೆ ಸಾವಿರಾರು ವಾಹನಗಳನ್ನು ಬ್ಯಾಂಕ್ ನವರು ಜಫ್ತಿ ಮಾಡಿ ಜಯಣ್ಣ ಶೆಡ್‍ನಲ್ಲಿ ನಿಲ್ಲಿಸಿದ್ದಾರೆ. ಬ್ಯಾಂಕ್‍ಗೆ ಹಣ ಪಾವತಿಸಿ ಚಾಲಕರು ಹಾಗೂ ಮಾಲೀಕರು ತಮ ವಾಹನಗಳನ್ನು ಬಿಡಿಸಿಕೊಂಡು ಹೋಗುವುದು ವಾಡಿಕೆಯಾಗಿತ್ತು. ಆದರೆ, ದರ್ಶನ್ ಪ್ರಕರಣದ ನಂತರ  ಶೆಡ್ ಬಳಿಗೆ ಹೋಗಿ ವಾಹನ ಬಿಡಿಸಿಕೊಳ್ಳಲು ಮುಂದಾಗಿರುವ ಚಾಲಕರು ಹಾಗೂ ಮಾಲೀಕರುಗಳಿಗೆ ಪೋಲೀಸರು ಅವಕಾಶ ನೀಡುತ್ತಿಲ್ಲ ಎಂದರು. 

ಸಾಲ ಸೋಲ ಮಾಡಿ ವಾಹನ ಖರೀದಿಸಿರುವವರ ಬದಕು ಮೂರಾಬಟ್ಟೆಯಾಗಿದೆ.  ಶೆಡ್‍ನಲ್ಲಿರುವ ವಾಹನಗಳನ್ನು ಬಿಡುಗಡೆ ಮಾಡದಿದ್ದರೆ ನೂರಾರು ಚಾಲಕರು ಹೊಟ್ಟೆಗೆ ತಣ್ಣಿರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬರಲಿದೆ. ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಆದರೆ ಇದೇ ವಿಚಾರ ಮುಂದಿಟ್ಟುಕೊಂಡು ಅಮಾಯಕ ಚಾಲಕರು ಮತ್ತು ಮಾಲೀಕರಿಗೆ ತೊಂದರೆ ನೀಡಬಾರದು ಎಂದು ಗಂಡಸಿ ಸದಾನಂದಸ್ವಾಮಿ ಆಗ್ರಹಿಸಿದ್ದಾರೆ.

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top