ಕಲುಷಿತ ನೀರು ಸೇವನೆ : ಹಲವರು ಅಸ್ವಸ್ಥ

ಬಳ್ಳಾರಿ:  ಇತ್ತೀಚೆಗಷ್ಟೇ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಕಲುಷಿತ ನೀರು ಸೇವಿಸಿ ಸಾಕಷ್ಟು ಮಂದಿ ಅಸ್ವಸ್ಥಗೊಂಡಿದ್ದ ಘಟನೆ ಮರೆಯುವಷ್ಟರಲ್ಲೇ ಇದೀಗ ಬಳ್ಳಾರಿ ನಗರದಲ್ಲಿ ಕಲುಷಿತ ನೀರು ಸೇವಿಸಿ ಸುಮಾರು 40 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸತತ 10 ದಿನಗಳಿಂದ ವಾಂತಿ, ಬೇಧಿ ಪ್ರಕರಣಗಳು ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲಿ ಪ್ರಮುಖವಾಗಿ ಕಳೆದ ಮೂರು ದಿನಗಳಲ್ಲಿ ಸುಮಾರು 18ಕ್ಕೂ ಹೆಚ್ಚು ಮಂದಿ ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅದರಲ್ಲಿ ಈಗಾಗಲೇ ಕೆಲವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಕೂಡ ಆಗಿದ್ದಾರೆ ಎಂದು ತಿಳಿದುಬಂದಿದೆ.

 

ನಗರದ ಮರಿಸ್ವಾಮಿ ಮಠ, ಪಟೇಲ್‌ನಗರ, ಗೊಲ್ಲರಹಟ್ಟಿ, ಮದ್ದಾನ್ ಸ್ವಾಮಿ ಮಠ ಸೇರಿದಂತೆ ನಗರದ ಸುತ್ತಮುತ್ತಲಿನ ಹಳ್ಳಿಗಳಿಂದ ಹೆಚ್ಚು ಜನ ಕಲುಷಿತ ನೀರು ಸೇವಿಸಿ ಆಸ್ಪತ್ರೆ ಪಾಲಾಗಿದ್ದು, ಇದೀಗ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಬೇಸಿಗೆ ಕಾಲ ಮುಗಿದರೂ ಇನ್ನೂ ಕೆರೆಗಳಿಗೆ ನೀರು ಬಾರದ ಕಾರಣ, ನಗರದಲ್ಲಿ ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆ ನೀರು ಬಿಡುವುದರಿಂದ ನೀರು ಕಲುಷಿತಗೊಂಡು, ಆ ನೀರನ್ನು ಸೇವಿಸಿದ ಸಾರ್ವಜನಿಕರಿಗೆ ವಾಂತಿ ಬೇಧಿಗಳಾಗಿವೆ. ಆರಂಭದಲ್ಲಿ ಆಸ್ಪತ್ರೆಗೆ ಬಂದ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸ್ವಲ್ಪ ಹೆಚ್ಚಿನದಾಗಿ ಸಮಸ್ಯೆ ಕಂಡು ಬಂದ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಅವರಿಗೆ ಬೇಕಾದ ಔಷಧಿಗಳನ್ನು ನೀಡಲಾಗಿದೆ. ಸದ್ಯ 7 ರಿಂದ 7 ಜನ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಯಾರಿಗೂ ಯಾವುದೇ ಸಮಸ್ಯೆಗಳಾಗಿಲ್ಲ. ವಾಂತಿ ಬೇಧಿ ಕಂಡು ಬಂದ ತಕ್ಷಣವೇ ಆಸ್ಪತ್ರೆಗೆ ಬಂದರೆ ಬೇಗನೆ ಗುಣಮುಖರಾಗಬಹುದು. ಮುನ್ನೆಚ್ಚರಿಕೆಯಾಗಿ ನೀರನ್ನು ಕಾಯಿಸಿ ಕುಡಿದರೆ ಒಳ್ಳೆಯದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಪತ್ರಿಕೆಗೆ ಮಾಹಿತಿ ನೀಡಿದರು.

ರೋಗಿಯ ಸಂಬಂಧಿಕರೊಬ್ಬರು ಪತ್ರಿಕೆಯೊಂದಿಗೆ ಮಾತನಾಡಿ, ಮದ್ದಾನ್ ಸ್ವಾಮಿ ಮಠದ ಬಳಿ ಸುಮಾರು 15 ದಿನಗಳಿಗೊಮ್ಮೆ ಕುಡಿಯುವ ನೀರು ಬರುತ್ತಿದ್ದು, ಇತ್ತೀಚೆಗೆ ನಲ್ಲಿಯಲ್ಲಿ ಬಂದ ನೀರಿನಲ್ಲಿ ಚರಂಡಿ ನೀರು ಮಿಶ್ರಣಗೊಂಡು ವಾಂತಿ ಬೇಧಿಗಳಾಗಿ ಆಸ್ಪತ್ರೆ ಸೇರಿದ್ದಾರೆ. ನಿನ್ನೆ ಸಂಜೆ ಹಾಗೂ ಇಂದು ಬೆಳಗ್ಗೆ ಹಲವರು ಡಿಸ್ಚಾರ್ಜ್ ಆಗಿ ಹೋಗಿದ್ದಾರೆ. ಇಲ್ಲಿನ ವೈದ್ಯರು ಸರಿಯಾದ ಸಮಯಕ್ಕೆ ಬಂದು ಆರೋಗ್ಯ ವಿಚಾರಿಸುತ್ತಿದ್ದು, ಬೇಗ ಗುಣಮುಖರಾಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

 

ಒಟ್ಟಾರೆಯಾಗಿ ಕಳೆದ ಕೆಲ ದಿನಗಳಿಂದಲೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ನೀರನ್ನು ಶುದ್ಧೀಕರಿಸಿ, ಕಾಯಿಸಿ ನಂತರ ಸೇವಿಸುವ ಮೂಲಕ ಆಗಬಹುದಾದ ವಾಂತಿ ಬೇಧಿ ಇನ್ನಿತರೆ ಕಾಯಿಲೆಗಳಿಂದ ದೂರವಿರುವಂತೆ ಜಾಗೃತಿ ಮೂಡಿಸುತ್ತಿದ್ದರೂ ಇಂತಹ ಘಟನೆ ನಡೆದಿರುವುದು ಜನರಲ್ಲಿ ಆತಂಕ ಮೂಡುವಂತಾಗಿದೆ. ಈ ಬಗ್ಗೆ ಪಾಲಿಕೆ ಆರೋಗ್ಯ ಅಧಿಕಾರಿಗಳೂ ಕೂಡ ಗಮನ ಹರಿಸಿ ನಗರದ ಯಾವ ಯಾವ ಭಾಗಗಳಲ್ಲಿ ಪೈಪುಗಳು ಹಾಳಾಗಿವೆ ಎಂಬುದನ್ನು ಪರಿಶೀಲಿಸಿ, ಸರಿಪಡಿಸಿದರೆ ಮತ್ತೆ ಇಂತಹ ಘಟನೆಗಳು ಮರುಕಳಿಸದು ಎಂಬುದು ಕನ್ನಡನಾಡು ಪತ್ರಿಕೆಯ ಕಳಕಳಿಯಾಗಿದೆ. 

ಬೇಸಿಗೆ ಆಗಿರುವುದರಿಂದ ನೀರಿನ ಸಮಸ್ಯೆ ಹೆಚ್ಚಾಗಿ ಇದರಿಂದ ಕೆಲವರ ಆರೋಗ್ಯದಲ್ಲಿ ಏರುಪೇರಾಗಿದೆ. ವಾಂತಿ ಬೇಧಿ ಆಗಿರುವುದರಿಂದ ಕರುಳಬೇನೆ ಆಗಿರುತ್ತದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಈಗಾಗಲೇ ಹಲವರು ಗುಣಮುಖರಾಗಿದ್ದಾರೆ.                                       

 

·        ಡಾ.ಎನ್.ಬಸರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕರು, ಬಳ್ಳಾರಿ

ಮೂರು ದಿನಗಳ ಹಿಂದೆ ನೀರು ಬಿಟ್ಟಾಗ ಚರಂಡಿ ವಾಸನೆ ಬರುತ್ತಿತ್ತು. ಅದರ ಬಗ್ಗೆ ಹೆಚ್ಚಾಗಿ ಗಮನ ಹರಿಸಿರಲಿಲ್ಲ. ನೀರಲ್ಲಿ ಚರಂಡಿ ನೀರು ಮಿಶ್ರಣಗೊಂಡು ವಾಂತಿ ಬೇಧಿಗಳಾಗಿವೆ. ನಮ್ಮ ಏರಿಯಾದಲ್ಲಿ ಸುಮಾರು 7 -8 ಮಂದಿಗೆ ವಾಂತಿ ಬೇಧಿಗಳಾಗಿವೆ. ನಾನು ಈಗ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ.

 

·        ಅಸ್ವಸ್ಥ ಮಹಿಳೆ

Facebook
Twitter
LinkedIn
Pinterest
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top