ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಅಡ್ಡಗಾಲು 

ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಆರೋಪ

ಬಳ್ಳಾರಿ : ಹಸಿವು ಮುಕ್ತ ರಾಜ್ಯವನ್ನಾಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಜಾರಿಗೊಳಿಸಲು ಹೊರಟಿರುವ  ಅನ್ನಭಾಗ್ಯ ಯೋಜನೆಗೆ ತಡೆಯೊಡ್ಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಲಕ್ಷಾಂತರ ಬಡ ಕುಟುಂಬಗಳ ಹೊಟ್ಟೆ ಮೇಲೆ ಬರೆ ಎಳೆದಿದೆ. ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಅಡ್ಡಾಗಲು ಹಾಕಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

          ನಗರದ ರಾಯಲ್ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಚಿವ ನಾಗೇಂದ್ರ ಅವರು, ದೇಶ ಮೆಚ್ಚುವಂತಹ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಯೋಜನೆಯನ್ನು ವಿಫಲಗೊಳಿಸಲು ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದರು.

 

ಇದು ಕಾಂಗ್ರೆಸ್ ಸರ್ಕಾರಕ್ಕೆ ಮಾಡಿದ ಅನ್ಯಾಯವಲ್ಲ ಬದಲಿಗೆ ಹಸಿವಿನಿಂದ ಕೂಡಿದ ರಾಜ್ಯದ ಬಡ ಜನರಿಗೆ ಮಾಡಿದ ಅನ್ಯಾಯವಾಗಿದೆ. ನೀವು ಕೊಡದಿದ್ದರು ಪರವಾಗಿಲ್ಲ ಎಂದು ಪಕ್ಕದ ರಾಜ್ಯದಿಂದ ಕೊಂಡು ಬಡವರಿಗೆ ನೀಡಲು ಹೋದರೆ, ನಮಗೆ ಅಕ್ಕಿ ನೀಡಲು ನೆರವಿಗೆ ಬಂದ ರಾಜ್ಯಗಳ ಮೇಲೆ ಒತ್ತಡ ಹಾಕಿ, ಹೆದರಿಸಿ ರಾಜ್ಯಕ್ಕೆ ಅಕ್ಕಿ ಸಿಗದಂತೆ ಮಾಡಲು ಹೊರಟಿದ್ದೀರಿ ಇದನ್ನು ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಈಗಾಗಲೇ ರಾಜ್ಯದಲ್ಲಿ ಹೀನಾಯ ಸೋಲಿನಿಂದ ಪಾಠ ಕಲಿಯದ ಬಿಜೆಪಿಯ ಮುಖಂಡರು ಮತ್ತೆ ಹಳೆಯ ಚಾಳಿ ಮುಂದುವರಿಸಿದ್ದು ಮುಂದಿನ ದಿನಗಳಲ್ಲಿ ಜನರು ಮತ್ತೊಮ್ಮೆ ತಕ್ಕಪಾಠ ಕಲಿಸಲಿದ್ದಾರೆ ಎಂದರಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ಎಷ್ಟೇ ಅಡೆತಡೆಗಳು ಬಂದರು ಲೆಕ್ಕಿಸದೆ ರಾಜ್ಯದ ಜನರ ಹಸಿವು ನೀಗಿಸುವ ಯೋಜನೆಯನ್ನ ಜಾರಿ ಮಾಡಿಯೇ ತಿರುತ್ತೇವೆ. ಇನ್ನಾದರೂ ಕೇಂದ್ರ ಬಿಜೆಪಿಗರು ಅಭಿವೃದ್ಧಿ ಕಾರ್ಯಕ್ರಮಗಳ ಜಾರಿ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನ ನಿಲ್ಲಿಸಲಿ ಎಂದು ಆಗ್ರಹ ವ್ಯಕ್ತ ಪಡಿಸಿದರು.

 

ಪ್ರತಿಭಟನೆಯಲ್ಲಿ ಸಂಡೂರು ಕ್ಷೇತ್ರದ ಶಾಸಕ ಟಿ.ತುಕಾರಾಂ, ಮಾಜಿ ಸಂಸದ ಉಗ್ರಪ್ಪ, ಜಿ.ಪಂ ಮಾಜಿ ಸದಸ್ಯ ಅಲ್ಲಂ ಪ್ರಶಾಂತ್, ಎ.ಮಾನಯ್ಯ, ಮೇಯರ್ ತ್ರಿವೇಣಿ, ಉಪಮೇಯರ್ ಜಾನಕಮ್ಮ, ಪಾಲಿಕೆ ಸದಸ್ಯರಾದ ಕುಬೇರ, ಪೇರಂ ವಿಕ್ಕಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ, ಮುಖಂಡರಾದ ಎಲ್ ಮಾರೆಣ್ಣ, ಕಲ್ಲುಕಂಬ ಪಂಪಾಪತಿ,  ಎಂ.ಶ್ರೀಧರ್,  ಶಿವರಾಜ್, ಟಿ.ಪದ್ಮಾ, ಬಿ.ಎಂ.ಪಾಟೀಲ್, ಬೋಯಪಾಟಿ ವಿಷ್ಣು, ಅರುಣ್ ಕುಮಾರ್, ಜಿ.ಜೆ.ರವಿಕುಮಾರ್, ಶೋಭಾ ಕಳಿಂಗ, ಯತೀಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Facebook
Twitter
LinkedIn
Telegram
Facebook
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top