ಬಳ್ಳಾರಿ: ಹಾಡುಹಗಲೇ ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯನ ಕಿಡ್ನಾಪ್ ಮಾಡಿದ್ದ ಆರೋಪಿಗಳ ಬಂಧಿಸುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇಲೆ ಆರೋಪಿಗಳು ಇದ್ದ ಸ್ಥಳಕ್ಕೆ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದ ಆರೋಪಿ ಮೇಲೆ ಪೊಲೀಸ್‌ರು ಗುಂಡು ಹಾರಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಶ್ರೀಕಾಂತ್, ರಾಕೇಶ್, ತರುಣ್, ಅರುಣ್, ಭೋಜರಾಜ್, ಸಾಯಿಕುಮಾರ್ ಸೇರಿದಂತೆ ಒಟ್ಟು ಏಳು ಜನರ ಬಂಧನವಾಗಿದೆ. ಆರೋಪಿಗಳಲ್ಲಿ ಬಳ್ಳಾರಿಯ ಆರು ಜನ, ಒಬ್ಬ ಆಂಧ್ರ ಮೂಲದವರು ಎಂದು ತಿಳಿದುಬಂದಿದೆ.
ಬಳ್ಳಾರಿ ತಾಲೂಕಿನ ಮೋಕಾ ರಸ್ತೆಯ ಬಳಿ ಆರೋಪಿಗಳು ಇರುವ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಲು ಹೋದಾಗ, ಪೊಲೀಸರ ಮೇಲೆಯೇ ಹಲ್ಲೆಗೆ ಮಾಡಲು ಆರೋಪಿಗಳು ಮುಂದಾಗಿದ್ದಾರೆ. ಸಿಪಿಐ ಮಲ್ಲಿಕಾರ್ಜುನ ಸಿಂಧೂರ್ ಆರೋಪಿ ಶ್ರೀಕಾಂತ್‌ಗೆ ಫೈರ್ ಮಾಡಿದ್ದಾರೆ. ಆರೋಪಿ ಶ್ರೀಕಾಂತ್ ಬಲಗಾಲಿಗೆ ಗುಂಡೇಟು ಬಿದ್ದಿದ್ದು, ಬಳ್ಳಾರಿಯ ಟ್ರಾಮಾ ಕೇರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೇಯೇ ಆರೋಪಿಗಳಿಂದ ಹಲ್ಲೆಗೆ ಒಳಗಾದ ಪೊಲೀಸ್ ಪೇದೆ ಕಾಳಿಂಗ ಅವರಿಗೂ ಕೂಡಾ ಚಿಕಿತ್ಸೆ ನೀಡಲಾಗುತ್ತಿದೆ.
ಜನವರಿ 25 ರಂದು ಡಾಕ್ಟರ್ ಸುನೀಲ್ ಎಂಬುವರು ವಾಕಿಂಗ್ ಮಾಡುತ್ತಿದ್ದಾಗ ಸತ್ಯನಾರಾಯಣಪೇಟೆಯ ಶನೇಶ್ವರಗುಡಿ ಬಳಿ ಟಾಟಾ ಇಂಡಿಗೋ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅವರ ಬಾಯಿಮುಚ್ಚಿ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಬಳಿಕ, ಡಾ.ಸುನೀಲ್ ಮೊಬೈಲ್‌ನಿಂದಲೇ ಕರೆ ಮಾಡಿ 6 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದೆ ದಿನ ರಾತ್ರಿ 9ಗಂಟೆಗೆ ಕುರುಗೋಡು ಬಳಿಯ ಸೋಮಸಮುದ್ರದ ಹೊಲದಲ್ಲಿ ಬಿಟ್ಟು ಹೋಗಿದ್ದರು.
ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳ ಸೆರೆ ಹಿಡಿಯಲು ಬಲೆ ಬೀಸಿದ್ದ ಬಳ್ಳಾರಿ ಪೊಲೀಸ್‌ರು ನಾಲ್ಕು ದಿನಗಳ ಬಳಿಕ ಖದೀಮರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.