ಕನ್ನಡದ ‘ಕಣ್ಣಪ್ಪ’ ಚಿತ್ರಗಳಿಗೂ ವಿಷ್ಣು ‘ಕಣ್ಣಪ್ಪ’ ಚಿತ್ರಕ್ಕೂ ಇರುವ ವ್ಯತ್ಯಾಸ ಏನು ಗೊತ್ತಾ ?
ಬೇಡರ ದಿಣ್ಣ ಮುಂದೆ ಭಕ್ತ ಕಣ್ಣಪ್ಪನಾಗಿ ಬದಲಾದ ಕಥೆ ಎಲ್ಲರಿಗೂ ಗೊತ್ತೇಯಿದೆ. ಕಾವ್ಯಗಳಲ್ಲಿ ಸಾಕಷ್ಟು ದಂತ ಕಥೆಗಳು ಸೇರಿಕೊಂಡಿದೆ. ಜನಪದದಲ್ಲಿ ಬೇರೆ ಬೇರೆ ರೀತಿಯ ವಿಶ್ಲೇಷಣೆ ಇದೆ. ಕಾವ್ಯಗಳಲ್ಲಿ ಇದ್ದ ಕಥೆಯನ್ನು ಸೇರಿಸಿ ಬಳಿಕ ನಾಟಕಗಳಾಗಿ ಪ್ರದರ್ಶಿಸಲಾಗುತ್ತಿತ್ತು. ಬಳಿಕ ಸಿನಿಮಾ ರೂಪದಲ್ಲಿ ಕಥೆ ತೆರೆಗೆ ಬಂದಿತ್ತು.
ನಾಸ್ತಿಕನಾಗಿದ್ದ ಬೇಡರ ದಿಣ್ಣ ಕೊನೆಗೆ ತನ್ನ ಕಣ್ಣುಗಳನ್ನು ಶಿವನಿಗೆ ಅರ್ಪಿಸಿ ‘ಕಣ್ಣಪ್ಪ’ ಎಂದೇ ಖ್ಯಾತನಾಗಿದ್ದನು. ಇದೇ ಕಥೆಯನ್ನು ಕವಿಗಳು ಬೇರೆ ಬೇರೆ ರೀತಿ ಚಿತ್ರಿಸಿದ್ದಾರೆ. ಸದ್ಯ ಈಗ ಬಂದಿರುವ ತೆಲುಗಿನ ‘ಕಣ್ಣಪ್ಪ’ ಚಿತ್ರದಲ್ಲಿ ಇದಕ್ಕೆ ಒಂದಷ್ಟು ಹೊಸ ಉಪಕಥೆಗಳನ್ನು ಸೇರಿಸಲಾಗಿದೆ. ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಸಿನಿಮಾ ಕನ್ನಡದ ‘ಬೇಡರ ಕಣ್ಣಪ್ಪ’ ಕಥೆಗಿಂತ ‘ಶಿವ ಮೆಚ್ಚಿನ ಕಣ್ಣಪ್ಪ’ ಕಥೆಗೆ ಹೆಚ್ಚು ಹತ್ತಿರ ಎನ್ನುವಂತಿದೆ. ಮಂಚು ವಿಷ್ಣು ಚಿತ್ರದಲ್ಲಿ ಟೈಟಲ್ ರೋಲ್ ಪ್ಲೇ ಮಾಡಿದ್ದಾರೆ. ಖುದ್ದು ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.
ವೀರಶೈವರು ಆರಾಧಿಸುವ 63 ಪವಿತ್ರ ಶೈವ ಸಂತರಲ್ಲಿ ಕಣ್ಣಪ್ಪ ಕೂಡ ಒಬ್ಬರು. ಸಾಕಷ್ಟು ಪುರಾಣದ ಕಥೆಗಳ ಜೊತೆಗೆ ಭಕ್ತ ಕಣ್ಣಪ್ಪನ ಕಥೆ ತಳುಕು ಹಾಕಿಕೊಂಡಿದೆ. 13ನೇ ಶತಮಾನ ಬಸವ ಪುರಾಣ ಹಾಗೂ ಮಹಾಕವಿ ದೂರ್ಜಟಿ ಬರೆದ ಶ್ರೀಕಾಳಹಸ್ತಿ ಮಹಾತ್ಮೆ ಕಾವ್ಯಗಳನ್ನು ಆಧರಿಸಿ ‘ಕಣ್ಣಪ್ಪ’ ಸಿನಿಮಾ ಮಾಡಿರುವುದಾಗಿ ಮೋಹನ್ ಬಾಬು ಹೇಳಿದ್ದಾರೆ.
ಕನ್ನಡದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದ ‘ಶಿವ ಮೆಚ್ಚಿನ ಕಣ್ಣಪ್ಪ’ ಚಿತ್ರಕ್ಕೂ ಈಗ ಚಿತ್ರಮಂದಿರಗಳಲ್ಲಿ ಇರುವ ‘ಕಣ್ಣಪ್ಪ’ ಚಿತ್ರಕ್ಕೂ ಸಾಕಷ್ಟು ಸಾಮ್ಯತೆ ಇದೆ. ಅಣ್ಣಾವ್ರ ‘ಬೇಡರ ಕಣ್ಣಪ್ಪ’ ಕಥೆಯನ್ನು ಕೇಂದ್ರವಾಗಿಟ್ಟುಕೊಂಡು ‘ಶಿವ ಮೆಚ್ಚಿನ ಕಣ್ಣಪ್ಪ’ ಚಿತ್ರದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿತ್ತು. ಅಣ್ಣಾವ್ರ ಚಿತ್ರಕ್ಕೂ ತೆಲುಗಿನಲ್ಲಿ ಕೃಷ್ಣಂರಾಜು ಮಾಡಿದ್ದ ‘ಕನ್ನಪ್ಪ’ ಚಿತ್ರ ಯಥಾವತ್ ಎನ್ನುವಂತಿತ್ತು. ಮುತ್ತುರಾಜ್ ರಂಗಭೂಮಿಯಲ್ಲಿ ಇದ್ದಾಗ ನಾಟಕಗಳಲ್ಲಿ ನಟಿಸುತ್ತಿದ್ದರು. ಆಗ ‘ಬೇಡರ ಕಣ್ಣಪ್ಪ’ ನಾಟಕ ಸಹ ಮಾಡುತ್ತಿದ್ದರು. ಅದೇ ಕಥೆಯನ್ನು ಸಿನಿಮಾ ರೂಪದಲ್ಲಿ ಅಂದು ತೋರಿಸಲಾಗಿತ್ತು
ಅಚಾನಕ್ ಆಗಿ ಮಣಿಮಂತ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿ ಕೊನೆಗೆ ಶಿವಣ ಆಣತಿಯಂತೆ ಭೂಲೋಕದಲ್ಲಿ ದಿಣ್ಣನಾಗಿ ಹುಟ್ಟಿ ಬಳಿಕ ಕಣ್ಣಪ್ಪನಾಗುವುದು ಒಂದು ಕಥೆ. ಇದನ್ನೇ ಅಣ್ಣಾವ್ರ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ದ್ವಾಪರ ಯುಗದಲ್ಲಿ ಅರ್ಜುನ ಅಹಂ ಇಳಿಸಲು ಕಿರಾತನಾಗಿ ಬರುವ ಶಿವ ಆತನಿಗೆ ಶಿಕ್ಷೆ ನೀಡುವುದು. ಮುಂದೆ ಕಲಿಯುಗದಲ್ಲಿ ದಿಣ್ಣನಾಗಿ ಹುಟ್ಟಿ ನಂತರ ಕಣ್ಣಪ್ಪನಾಗುವ ಕಿರಾತಾರ್ಜುನೀಯ ಕಥೆ ಕೂಡ ಇದೆ. ಇದನ್ನು ‘ಶಿವ ಮೆಚ್ಚಿನ ಕಣ್ಣಪ್ಪ’ ಚಿತ್ರದಲ್ಲಿ ಅಳವಡಿಸಿಕೊಂಡಿದ್ದರು. ಕೃಷ್ಣಂರಾಜು ನಟನೆಯ ‘ಭಕ್ತ ಕನ್ನಪ್ಪ’ ಚಿತ್ರದಲ್ಲೂ ಇದೇ ಕಥೆ ಇದೆ.
ಕಿರಾತಾರ್ಜುನೀಯ ಕಥೆಯನ್ನೇ ಮಂಚು ವಿಷ್ಣು ಈಗ ತಮ್ಮ ‘ಕಣ್ಣಪ್ಪ’ ಚಿತ್ರಕ್ಕೆ ಬಳಸಿಕೊಂಡಿದ್ದಾರೆ. ಆದರೆ ಫಸ್ಟ್ ಹಾಫ್‌ನಲ್ಲಿ ಒಂದಷ್ಟು ಮಾಸ್ ಅಂಶಗಳನ್ನು ಸೇರಿಸುವ ಪ್ರಯತ್ನ ಮಾಡಿದ್ದಾರೆ. ನಾಯಕಿ ಜೊತೆಗಿನ ಪ್ರೀತಿ, ರೊಮ್ಯಾನ್ಸ್‌ಗೆ ಹೆಚ್ಚು ಅವಕಾಶ ಮಾಡಿಕೊಟ್ಟಿದ್ದಾರೆ. ಇಡೀ ಚಿತ್ರದಲ್ಲಿ ಕಣ್ಣಪ್ಪ ಪಾತ್ರ ಬಿಟ್ಟರೆ ಆಕೆಯ ಮಡದಿ ಪಾತ್ರಕ್ಕೆ ಹೆಚ್ಚು ಸ್ಕೋಪ್ ಸಿಕ್ಕಿದೆ. ಭಕ್ತಿಪ್ರಧಾನ ಸಿನಿಮಾ ಎನ್ನುವುದಕ್ಕಿಂತ ಒಂದು ರೊಮ್ಯಾಂಟಿಕ್ ಆಕ್ಷನ್ ಸಿನಿಮಾದಂತೆ ಭಾಸವಾಗುತ್ತದೆ. ಕೊನೆಯ ಅರ್ಧ ಗಂಟೆ ಮಾತ್ರ ನಾಸ್ತಿಕ ದಿಣ್ಣ ಹೇಗೆ ಭಕ್ತ ಕಣ್ಣಪ್ಪನಾಗಿ ಬದಲಾದ ಎನ್ನುವ ಕಥೆ ಹೇಳಿದ್ದಾರೆ.
ಸಾಮಾನ್ಯ ಬೇಡನ ಕಥೆಯನ್ನು ಮಹಾನ್ ಸಾಹಸಿಯ ಕಥೆ ಎನ್ನುವಂತೆ ‘ಕಣ್ಣಪ್ಪ’ ಚಿತ್ರದಲ್ಲಿ ವಿಷ್ಣು ಚಿತ್ರಿಸಿಕೊಂಡಿದ್ದಾರೆ. ದ್ವಾಪರಯುಗದ ಕಥೆಯಲ್ಲಿ ಶಿವನೇ ಕಿರಾತನಾಗಿ ಬಂದು ಅರ್ಜುನನನ ಗರ್ವ ಇಳಿಸುತ್ತಾನೆ. ಕಿತಾತನ ಪಾತ್ರವನ್ನು ಮೋಹನ್ ಲಾಲ್ ಮಾಡಿದ್ದಾರೆ. ದಿಣ್ಣನನ್ನು ಕಣ್ಣಪ್ಪ ಆಗಿ ಬದಲಾಗಲು ದಾರಿ ತೋರಿಸುವ ಶಿವನ ಅಂಶ ರುದ್ರನಾಗಿ ಪ್ರಭಾಸ್ ಅಬ್ಬರಿಸಿದ್ದಾರೆ. ಅವರ ಅಭಿನಯದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ದಿಣ್ಣನಾಗಿ ನಟಿಸಿದ್ದ ಡಾ. ರಾಜ್‌ಕುಮಾರ್ ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ ಶಿವನ ಪಾತ್ರಕ್ಕೆ ಜೀವ ತುಂಬಿದ್ದರು. ಆ ಶಿವನೇ ಕಿರಾತನಾಗಿ ಮಾರು ವೇಷದಲ್ಲಿ ಅಂದರೆ ಅಣ್ಣಾವ್ರು ಬರುವಂತೆ ತೋರಿಸಲಾಗಿತ್ತು. ದಿಣ್ಣನಿಗೆ ಕಾಡಿನಲ್ಲಿ ಬೇಟೆ ಸಿಗದೇ ಪರಿತಪಿಸುತ್ತಿದ್ದಾಗ ಶಿವನ ಮೊರೆ ಹೋಗುವಂತೆ ಹೇಳಲು ಬರುವ ವೃದ್ಧನ ಪಾತ್ರದಲ್ಲಿ ಕೂಡ ಅಣ್ಣಾವ್ರು ಮಿಂಚಿದ್ದರು. ಅದೇ ಪಾತ್ರವನ್ನು ರುದ್ರನ ಪಾತ್ರವಾಗಿ ಚಿತ್ರಿಸಿ ಪ್ರಭಾಸ್ ನಟಿಸುವಂತಾಗಿದೆ.
ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಹಾಗೂ ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರಗಳಿಗೆ ಸಾಕಷ್ಟು ಹೋಲಿಕೆ ಇದ್ದರೂ ಮಂಚು ವಿಷ್ಣು ತಮ್ಮ ಚಿತ್ರಕ್ಕೆ ಸಾಕಷ್ಟು ಉಪಕಥೆಗಳನ್ನು ಸೇರಿಸಿ ಬೇರೆಯದ್ದೇ ರೂಪ ಕೊಟ್ಟಿದ್ದಾರೆ. ಅದು ಪ್ರೇಕ್ಷಕರಿಗೆ ಅಷ್ಟಾಗಿ ಹತ್ತಿರವಾಗುವುದಿಲ್ಲ. ಹಳೆ ಸಿನಿಮಾಗಳಲ್ಲಿ ಇದ್ದ ನೈಜತೆ ಈ ಚಿತ್ರದಲ್ಲಿ ಇಲ್ಲ. ನ್ಯೂಜಿಲೆಂಡ್ ಕಾಡಿನಲ್ಲಿ ಕಥೆ ಕಟ್ಟಿಕೊಟ್ಟಿರುವುದರಿಂದ ಪ್ರೇಕ್ಷಕರಿಗೆ ಅಷ್ಟಾಗಿ ಕನೆಕ್ಟ್ ಆಗುವುದಿಲ್ಲ.
ಈ ಹಿಂದಿನ ಸಿನಿಮಾಗಳಲ್ಲಿ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ದಿಣ್ಣ ಪೂಜೆ ಮಾಡುವಂತೆ ತೋರಿಸಲಾಗಿತ್ತು. ಆದರೆ ‘ಕಣ್ಣಪ್ಪ’ ಚಿತ್ರದಲ್ಲಿ ಬೆಟ್ಟದ ಮೇಲೆ ಬಯಲಿನಲ್ಲಿ ವಾಯು ಲಿಂಗ ಇರುವಂತೆ ಚಿತ್ರಿಸಲಾಗಿದೆ. ಕೊನೆಯ 30 ನಿಮಿಷ ಕಥೆ ಅಲ್ಲೇ ಸಾಗುತ್ತದೆ.