ತುಮಕೂರು : ಜಿಲ್ಲೆಯ ಪಾವಗಡ ತಾಲ್ಲೂಕು ತಿರುಮಣಿಯಲ್ಲಿರುವ ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್‌ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಿರುಮಣಿಯಲ್ಲಿರುವ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ಕಚೇರಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರುಗಳು, ಇಲಾಖೆ ವತಿಯಿಂದ ನೀಡಿದ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೋಲಾರ್ ಪಾರ್ಕ್‌ನಲ್ಲಿ ವಿದ್ಯುತ್ ಉತ್ಪಾದನೆ, ರೈತರ ಜಮೀನಿನ ಬಾಡಿಗೆ ಪಾವತಿ ಸೇರಿದಂತೆ ಎಲ್ಲ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದರು.
ನಂತರ ನೆರೆದಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ತಾವು ಇಂಧನ ಸಚಿವರಾಗಿದ್ದಾಗ ಈ ಭಾಗದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಮೀನು ಖರೀದಿ ಮಾಡದೆ ಉತ್ತಮ ಬೆಲೆಯನ್ನು ನಿಗಧಿ ಮಾಡಿ ಬಾಡಿಗೆ ರೂಪದಲ್ಲಿ ಜಮೀನನ್ನು ಪಡೆದು ಏಷ್ಯಾದಲ್ಲೇ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಯಿತು. ಸೌರಶಕ್ತಿ ವಿದ್ಯುತ್ ಕೇಂದ್ರದಲ್ಲಿ 2400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರತೀ ತಿಂಗಳು ಜಮೀನಿನ ಮಾಲೀಕರಾಗಿರುವ ರೈತರ ಖಾತೆಗೆ ಬಾಡಿಗೆ ಹಣ ಜಮೆಯಾಗುತ್ತಿದೆ. ಎಲ್ಲ ಪಾರ್ಕ್‌ಗಳನ್ನು ಚೆನ್ನಾಗಿ ನಿರ್ವಹಣೆ ಮಾಡಲಾಗುತ್ತಿದೆ. ಸುಮಾರು ನಾಲ್ಕೈದು ಸಾವಿರ ಜನ ಉದ್ಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರೈತರ ಜಮೀನಿನಲ್ಲಿ ಸೌರಶಕ್ತಿ ಅಳವಡಿಸಿದ್ದರೂ ಕೂಡಾ ರೈತರ ಜಮೀನು ಅವರ ಪಹಣಿ, ಖಾತೆ ಅವರ ಹೆಸರಲ್ಲೇ ಇರುತ್ತದೆ. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸಹ ಪಡೆಯಬಹುದು ಎಂದರು.
ಸೋಲಾರ್ ಪಾರ್ಕ್ ಅನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ. ರೈತರಿಗೆ ಸರಿಯಾದ ರೀತಿಯಲ್ಲಿ ಭೂ ದಾಖಲೆಗಳನ್ನು ಕಂದಾಯ ಅಧಿಕಾರಿಗಳು ಮಾಡಿಕೊಟ್ಟಿದ್ದಾರೆ. ಇಲ್ಲಿರುವ ವಾಸ್ತವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಳಿಮೆಗೆ ಯೋಗ್ಯವಿಲ್ಲದ ಇನ್ನೂ 10 ಸಾವಿರ ಎಕರೆ ಜಮೀನನ್ನು ರೈತರು ಸೋಲಾರ್ ಪ್ಲಾಂಟ್‌ಗೆ ನೀಡಿದರೆ ಮತ್ತಷ್ಟು ಸೌರ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ. ಪಾವಗಡ ತಾಲ್ಲೂಕಿಗೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯು ಶೇಕಡಾ 90ರಷ್ಟು ಮುಗಿದಿದೆ ಎಂದರು.
ಸೋಲಾರ್ ಪಾರ್ಕ್‌ಗೆ ಜಮೀನು ನೀಡಿರುವ ರೈತರಿಗೆ ಎಕರೆಗೆ ವಾರ್ಷಿಕ 25 ಸಾವಿರ ರೂ. ಬಾಡಿಗೆ ನೀಡುತ್ತಿ ದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ಜಾಸ್ತಿ ಮಾಡಬಹುದಾಗಿದೆ. ಈ ಬಾಡಿಗೆ ಆಧಾರದ ಮೇಲೆ ಸಾಲ ಸಹ ಪಡೆಯ ಬಹುದಾಗಿದೆ ಎಂದು ಅವರು ಹೇಳಿದರು.
ಪಾವಗಡ ಸೋಲಾರ್ ಪಾರ್ಕ್ ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಗೆ ಕರ್ನಾಟಕದ ಬದ್ಧ ತೆಗೆ ಸಾಕ್ಷಿಯಾಗಿದೆ. ರಾಜ್ಯದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಅತಿದೊಡ್ಡ ಸೋಲಾರ್ ಪಾರ್ಕ್, ಶುದ್ಧ- ಹಸಿರು ಇಂಧನ ಮೂಲಗಳನ್ನು ಬಳಸಿ ಕೊಳ್ಳುವಲ್ಲಿ ಸಾಕ್ಷಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಹವಾಮಾನ ಬದಲಾವಣೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಇಂಗಾಲದ ಹೊರ ಸೂಸುವಿಕೆಯನ್ನು ಕಡಿಮೆ ಮಾಡುವ ಜತೆಗೆ, ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರ ಮಗನಾ ಗಿರುವುದಕ್ಕೆ ಈ ಭಾಗದ ರೈತರ ಜಮೀ ನನ್ನು ಸ್ವಾಧೀನಪಡಿಸಿಕೊಳ್ಳದೆ ಬಾಡಿಗೆ ರೂಪದಲ್ಲಿ ಶಾಶ್ವತವಾಗಿ ಆದಾಯ ಬರುವಂತೆ ಮಾಡಿದ್ದಾರೆ. ನಿಜಕ್ಕೂ ಅವರ ಈ ದೂರದೃಷ್ಟಿಯುಳ್ಳ ಆಲೋಚನೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಸೋಲಾರ್ ಪಾರ್ಕ್‌ಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುವುದು. ರಾಜ್ಯದ ಹಲವು ಕಡೆ ಸೋಲಾರ್ ಪಾರ್ಕ್ ಸ್ಥಾಪಿಸುವ ಚಿಂತನೆಯನ್ನು ಹೊಂದಲಾಗಿದೆ ಎಂದು ಹೇಳಿದರು.
ಮತ್ತೆ ಈ ಭಾಗದಲ್ಲೂ ರೈತರು ಜಮೀನನ್ನು ನೀಡಲು ಮುಂದೆ ಬಂದರೆ ಮತ್ತಷ್ಟು ಸೋಲಾರ್ ಪಾರ್ಕ್‌ಗಳನ್ನು ನಿರ್ಮಾಣ ಮಾಡಲು ಸರ್ಕಾರ ಬದ್ಧ ವಾಗಿದೆ ಎಂದು ತಿಳಿಸಿದರು.
ಈ ಸೋಲಾರ್ ಪಾರ್ಕ್‌ನಲ್ಲಿ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಸದ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲದಂತೆ ಈ ಸೋಲಾರ್ ಪಾರ್ಕ್‌ನಲ್ಲಿ ಕಾರ್ಯನಿರ್ವಹಣೆಯಾಗುತ್ತಿದೆ ಎಂದರು.
ಪಾವಗಡ ಸೋಲಾರ್ ಪಾರ್ಕ್ ಸ್ವಚ್ಛ ಮತ್ತು ಸುಸ್ಥಿರ ಇಂಧನ ಪರಿಹಾರಗಳಿಗೆ ನಮ್ಮ ಬದ್ಧತೆಯ ಕುರುಹಾಗಿದೆ. ಸರ್ಕಾರ ಮತ್ತು ನವೀಕರಿಸಬಹುದಾದ ಇಂಧನ ಉದ್ಯಮದ ನಡುವಿನ ಬಾಂಧವ್ಯ ಉತ್ತಮ ಪಡಿಸುವ ಜತೆಗೆ ಹೂಡಿಕೆ, ಸಹಯೋಗವನ್ನು ಉತ್ತೇಜಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ. ಮುಖ್ಯವಾಗಿ ಉದ್ಯೋಗ ಸೃಷ್ಟಿಗೆ ಹೊಸ ಮಾರ್ಗಗಳನ್ನು ಅನ್ವೇಷಿಸುವುದು ನಮ್ಮ ಗುರಿ ಎಂದು ವಿವರಿಸಿದರು.
ಶುದ್ಧ ಇಂಧನ ಉತ್ಪಾದನೆಗೆ ರಾಷ್ಟ್ರ ಹಾಕಿಕೊಂಡಿರುವ ಗುರಿಗೆ ನಮ್ಮ ಸೋಲಾರ್ ಪಾರ್ಕ್ ಈಗಾಗಲೇ ದೊಡ್ಡ ಕೊಡುಗೆ ನೀಡಿದೆ. ಅದರ ಅತ್ಯಾಧುನಿಕ ದ್ಯುತಿವಿದ್ಯುಜ್ಜನಕ ಫಲಕಗಳು, ಅತ್ಯಾಧುನಿಕ ತಂತ್ರಜ್ಞಾನ, ಸುಧಾರಿತ ವಿದ್ಯುತ್ ಸಂಗ್ರಹ ವ್ಯವಸ್ಥೆ ಮತ್ತು ಸಮರ್ಥ ಗ್ರಿಡ್ ಏಕೀಕರಣದೊಂದಿಗೆ ಸೋಲಾರ್ ಪಾರ್ಕ್ ವರ್ಷಕ್ಕೆ 4.5 ಶತಕೋಟಿ ಸೌರ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆ ಮೂಲಕ ವಾರ್ಷಿಕ 3.6 ಮಿಲಿಯನ್ ಟನ್‌ಗಳಷ್ಟು ಸಿಒ2 ಹೊರಸೂಸುವಿಕೆಯನ್ನು ತಗ್ಗಿಸಲು ನೆರವಾಗುತ್ತಿದೆ. ನವೀಕರಿಸಬಹುದಾದ ಇಂಧನ ಮೂಲಗಳು ನಮ್ಮ ಪರಿಸರ ಮತ್ತು ಆರ್ಥಿಕತೆಯ ಮೇಲೆ ಬೀರಬಹುದಾದ ಪ್ರಭಾವವನ್ನು ಈ ಅಂಕಿ-ಅಂಶಗಳೇ ಸಾರಿ ಹೇಳುತ್ತವೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಹೆಚ್.ವಿ. ವೆಂಕಟೇಶ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್ ಪಾಂಡೆ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಪ್ರಭಾರ ಡಿಸಿ ಡಾ. ಕೆ. ವಿದ್ಯಾಕುಮಾರಿ, ಕೆಪಿಟಿಸಿಎಲ್‌ನ ಗೋವಿಂದಪ್ಪ, ಬೆಸ್ಕಾಂನ ಲೋಕೇಶ್, ಉಪವಿಭಾಗಾಧಿಕಾರಿ ರಿಷಿ ಆನಂದ್, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ, ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತದ ಪ್ರತಿನಿಧಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮತ್ತಿತರರು ಭಾಗವಹಿಸಿದ್ದರು.