ಬೆಂಗಳೂರು: ರಾಜ್ಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ಸಾಮಾಜಿಕ, ಶೈಕ್ಷಣಿಕ ವರದಿ ಕುರಿತು ಸಹಮತಕ್ಕೆ ಬರಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ವರದಿಗೆ ಪ್ರಬಲ ಸಮುದಾಯದ ಸಚಿವರು ಭಾರೀ ವಿರೋಧ ವ್ಯಕ್ತಪಡಿಸಿದ್ದು, ದಲಿತ, ಹಿಂದುಳಿದ ವರ್ಗದ ಸಚಿವರು ವರದಿ ಪರವಾಗಿ ವಕಾಲತ್ತು ವಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಪರ – ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವರದಿ ಕುರಿತ ಚರ್ಚೆಯನ್ನು ಮುಂದೂಡಲಾಗಿದೆ. ವರದಿ ಬಗ್ಗೆ ಏನೇ ಆಕ್ಷೇಪಣೆಗಳಿದ್ದರೂ ಮುಂದಿನ ಸಂಪುಟ ಸಭೆಯಲ್ಲಿ ಲಿಖಿತವಾಗಿ, ಇಲ್ಲವೆ ಮೌಖಿಕವಾಗಿ ಮಂಡಿಸುವಂತೆ ಮುಖ್ಯಮಂತ್ರಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸಂಪುಟ ಸಭೆಯಲ್ಲಿ ಸಚಿವರುಗಳಿಗೆ ಆರು ಪುಟಗಳ ವರದಿಯನ್ನು ಮಂಡಿಸಲಾಗಿತ್ತು. ಒಬಿಸಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸುವುದು ಸೇರಿದಂತೆ ಹಲವು ಅಂಶಗಳನ್ನು ನೀಡಲಾಗಿತ್ತು. ವರದಿಯನ್ನು ಸರ್ಕಾರ ಅಂಗೀಕರಿಸಬೇಕು ಎಂದು ಪ್ರಮುಖ ದಲಿತ, ಹಿಂದುಳಿದ ವರ್ಗಗಳ ಸಮುದಾಯದ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಎಚ್.ಸಿ. ಮಹದೇವಪ್ಪ. ಕೆ.ಎಚ್. ಮುನಿಯಪ್ಪ, ಕೆ.ಎನ್. ರಾಜಣ್ಣ, ಶಿವರಾಜ್ ತಂಗಡಗಿ ಮತ್ತಿತರರು ಆಗ್ರಹಿಸಿದರು. ಆದರೆ ಒಕ್ಕಲಿಗ ಮತ್ತು ವೀರಶೈವ ಸಚಿವರುಗಳಾದ ಎಂ.ಬಿ.ಪಾಟೀಲ್. ಎಸ್.ಎಸ್. ಮಲ್ಲಿಕಾರ್ಜುನ. ಈಶ್ವರ ಖಂಡ್ರೆ, ಚೆಲುವರಾಯಸ್ವಾಮಿ ಮತ್ತಿತರರು ವರದಿಗೆ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಚರ್ಚೆಯನ್ನು ಮುಂದೂಡಲು ಸಭೆ ತೀರ್ಮಾನಿಸಿತು.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್. ಮೇ ೨ ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಕುರಿತು ಮತ್ತಷ್ಟು ಚರ್ಚೆ ನಡೆಯಲಿದೆ. ದತ್ತಾಂಶಗಳ ಅಧ್ಯಯನದ ವರದಿಯನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಇನ್ನೂ ಕೆಲವು ಮಾಹಿತಿ, ತಾಂತ್ರಿಕ ವಿವರಗಳು ಚರ್ಚೆಗೆ ಅಗತ್ಯ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಹೀಗಾಗಿ ಮಾಹಿತಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಹೀಗಾಗಿ ಚರ್ಚೆ ಅಪೂರ್ಣವಾಗಿದೆ ಎಂದರು.
ಸಭೆಯಲ್ಲಿ ಸೌಹಾರ್ದಯುತ ಚರ್ಚೆಗಳು ನಡೆದಿವೆ. ಹಲವಾರು ವಿಚಾರಗಳು, ಆಯಾಮಗಳ ಕುರಿತು ವಿಚಾರ ವಿನಿಮಯ ನಡೆಯಿತು. ಜನಸಂಖ್ಯೆ, ಹಿಂದುಳಿದಿರುವಿಕೆ, ಶಿಕ್ಷಣ ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಅಧ್ಯಯನ ಸಂದರ್ಭದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವ ಯಾವ ಮಾನದಂಡಗಳನ್ನು ತೆಗೆದುಕೊಳ್ಳಲಾಗಿದೆ. ಆರ್ಥಿಕ ಸಮೀಕ್ಷೆಯಲ್ಲಿ ವಿಶೇಷತೆಗಳ ಕುರಿತು ಸ್ವಲ್ಪ ಮಟ್ಟಿಗೆ ಚರ್ಚೆ ನಡೆಸಲಾಗಿದೆ. ರಾಜ್ಯದ ೯೪.೧೭ ರಷ್ಟು ಜನಸಂಖ್ಯೆಯನ್ನು ನಾವು ಸಮೀಕ್ಷೆ ಮಾಡಿದ್ದೇವೆ. ವರದಿ ಸೋರಿಕೆ ಪ್ರಶ್ನೆ ಬರುವುದಿಲ್ಲ. ಈ ಕುರಿತ ವರದಿಗಳ ಪತ್ರಿಕೆಗಳಲ್ಲಿ ಬಂದಿದ್ದು, ಇವು ಸರಿಯಾಗಿವೆ. ಜಾತಿವಾರು ಜನಸಂಖ್ಯೆ ಬಗ್ಗೆ ಚರ್ಚೆ ನಡೆದಿಲ್ಲ. ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ ಸಂಪುಟ ಸಭೆಯಲ್ಲಿ ಮಂಡನೆಯಾಗಿದ್ದು, ಚರ್ಚೆ ಪ್ರಗತಿಯಲ್ಲಿದೆ ಎಂದರು.
ಮುಂದಿನ ಸಂಪುಟ ಸಭೆ ೨೪ ರಂದು ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿದ್ದು, ಅಲ್ಲಿ ಆ ಭಾಗದ ವಿಷಯಗಳ ಕುರಿತು ಪ್ರಸ್ತಾಪವಾಗಲಿವೆ. ಹೀಗಾಗಿ ಮೇ ೨ ರ ಸಂಪುಟ ಸಭೆಯಲ್ಲಿ ಈ ಕುರಿತಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.