ದೇವನಹಳ್ಳಿ: ದಲಿತರಿಗೆ ಮೀಸಲಾತಿ ನೀಡಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಎನ್ನುವುದು ಕಾಂಗ್ರೆಸ್ ನವರಿಗೆ ತಿಳುವಳಿಕೆ ನೀಡಬೇಕು ಹಾಗೂ ಅಂದು ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದಾಗ ದುರ್ಬಳಕೆ ಆಗಬೇಕು ದುರ್ಬಲಗೊಳಿಸಬೇಕು ಎನ್ನುವ ಹುನ್ನಾರ ನಡೆಸಿ ಚುನಾವಣೆ ಸಂದರ್ಭದಲ್ಲಿ ಬೇರೆ ಬೇರೆ ಜಾತಿಯನ್ನು ಎಸ್ಸಿ ಗೆ ಸೇರಿಸಿ ಈಗ 116 ಉಪಜಾತಿಗಳಾಗಿ ಮಾಡಿದ್ದಾರೆ ಇಂತಹ ಕಾಂಗ್ರೆಸ್ ನಾಯಕರು ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಹನುಮಂತಪ್ಪ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ನೀಡಿದ ಸೂಚನೆ ಮೇರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ಕಾಂಗ್ರೆಸ್ ಪಕ್ಷ ಜನರನ್ನು ಬಳಸಿಕೊಂಡು ಅಧಿಕಾರಕ್ಕೆ ಬರುತ್ತಾರೆ. ಅಂಬೇಡ್ಕರ್ ರವರು ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ ಇದೇ ಕಾಂಗ್ರೆಸ್ ನಾಯಕರು ಇವರ ಸೋಲಿಗೆ ಹುನ್ನಾರ ನಡೆಸಿ ಕಾರಣರಾಗಿದ್ದಾರೆ. ಅವರ ಮರಣ ನಂತರವೂ ತೊಂದರೆ ಕೊಡುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ ದಲಿತರ ವಿರೋಧಿ ಎಂದು ಗಂಟಾಘೋಷವಾಗಿ ಹೇಳುತ್ತೇವೆ ಎಂದರು.ರಾಜ್ಯ ಎಸ್ಸಿ ಮೋರ್ಚಾ ಖಜಾಂಚಿ ಎ.ಕೆ.ಪಿ.ನಾಗೇಶ್ ಮಾತನಾಡಿ ಇತ್ತೀಚೆಗೆ ದಲಿತರು ಹೆಚ್ಚಾಗಿ ಬಿಜೆಪಿ ಪಕ್ಷದ ಕಡೆ ಒಲವು ತೋರಿ ಪಕ್ಷಕ್ಕೆ ಬರುತ್ತಿರುವುದನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಸಹಿಸದೇ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ನೋಡಿದರೆ ಮುಂಬರುವ ಚುನಾವಣೆಯಲ್ಲಿ ಸೋಲಿನ ಭಯ ಶುರುವಾಗಿದೆ. ಸಿದ್ದರಾಮಯ್ಯನವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದು ಅವರ ಹೊಟ್ಟೆಪಾಡಿಗಾಗೋ ಇಲ್ಲಾ ಮೀರ್ ಸಾಧಿಕ್ ಕೆಲಸ ಮಾಡಲು ಬಂದರೋ ಎಂದು ಪ್ರಶ್ನೆ ಮಾಡಿದರು.

ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಎಸ್ಸಿ ಸಮುದಾಯದವರು 29 ಮಂದಿ ಸಚಿವರಾಗಿದ್ದಾರೆ, ಹೆಚ್ಚು ಶಾಸಕರಿರುವುದು ನಮ್ಮ ಬಿಜೆಪಿ ಪಕ್ಷದಲ್ಲಿ ಎಲ್ಲಾ ಸಮುದಾಯಕ್ಕೂ ಸಮಾನವಾದ ಸ್ಥಾನ ಮಾನ ನೀಡುತ್ತಿರುವುದನ್ನು ಅರಿತ ಕಾಂಗ್ರೆಸ್ ಪಕ್ಷದಲ್ಲಿನ ನಾಯಕರು ಬಿಜೆಪಿ ಗೆ ಬರುತ್ತಿರುವುದನ್ನು ಸಹಿಸದ ಸಿದ್ದರಾಮಯ್ಯನವರು ಹೊಟ್ಟೆ ಪಾಡಿಗಾಗಿ ಹೋಗುತ್ತಿದ್ದಾರೆ ಎಂದಿರುವುದು ಖಂಡನೀಯ, ಅಲ್ಪಸಂಖ್ಯಾತ ಮತ್ತು ದಲಿತರು ಎಂದರೆ ಕಾಂಗ್ರೆಸ್ ಎನ್ನುವ ಮಾತು ಮರೆಯಾಗುತ್ತಿದೆ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಕಾಂಗ್ರೆಸ್ ಪಕ್ಷದ ದಲಿತ ಹಿರಿಯ ನಾಯಕರಿಗೆ ಸೋಲಿನ ರುಚಿ ತೋರಿಸಿದ್ದೇ ಸಿದ್ಧರಾಮಯ್ಯ ನಿಮ್ಮ ಹೊಟ್ಟೆ ಪಾಡಿಗಾಗಿ ದಲಿತರನ್ನು ಬಲಿಕೊಡುತ್ತಿದ್ದೀರಾ ಎಂದು ತಾಲ್ಲೂಕು ಅಸಂಘಟಿತ ಪ್ರಕೋಷ್ಠಾ ಸಂಚಾಲ ಸುರೇಶ್ ಕಿಡಿ ಕಾರಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ತಾಲ್ಲೂಕು ಎಸ್ಸಿ ಮೋರ್ಚಾ ಮುನಿರಾಜ, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ ಬಾಬು, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗವೇಣಿ, ಹಾಗೂ ತಾಲ್ಲೂಕು ಮತ್ತು ಜಿಲ್ಲೆಯ ಬಿಜೆಪಿ ಮುಂಚೂಣಿ ನಾಯಕರು ಇದ್ದರು.