ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಿಬ್ಬಂದಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಬೆಂಗಳೂರು, ಜನವರಿ, ೨೦: ಸಮಾಜ ವಿರೋಧಿ ಶಕ್ತಿಗಳೊಂದಿಗೆ ಗುರುತಿಸಿಕೊಂಡು ಅಪರಾಧಿ ಕೃತ್ಯಗಳಲ್ಲಿ ಭಾಗವಹಿಸುವ ಯಾವುದೇ ಪೊಲೀಸ್ ಸಿಬ್ಬಂದಿಗಳ ವಿರುದ್ದ ನಿರ್ದಾಕ್ಷಿಣ ಕ್ರಮ ಕೈಗೊಳ್ಳುವುದಾಗಿ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರರವರು, ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಸಚಿವರು, ಇಂದು, ನಗರದಲ್ಲಿ, ಚಾಮರಾಜಪೇಟೆ ವ್ಯಾಪ್ತಿಯಲ್ಲಿ, ರೂ ೭.೪೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಟ್ರಾಫಿಕ್ ಪೊಲೀಸ್ ಠಾಣೆಯ ಶಂಕುಸ್ಥಾಪನೆ ಕಾರ್ಯ ನೆರವೇರಿಸಿ, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಇತ್ತೀಚಿಗೆ ಮಾನ್ಯ ಮುಖ್ಯಮಂತ್ರಿಗಳ ನಿವಾಸದ ಬಳಿ, ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿತವಾಗಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳು, ನಿಷೇಧಿತ ಗಾಂಜಾ ಮಾರಾಟ ಜಾಲದೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ, ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. “ಇಂತಹ ಹೀನ ಕೃತ್ಯಗಳನ್ನು ಸಹಿಸಲಾಗುವುದಿಲ್ಲ, ಕೇವಲ ಬೆರಳಣಿಕೆ ಯಷ್ಟು ಮಂದಿ ಸಿಬ್ಬಂದಿಯಿಂದ, ಸುಮಾರು ಒಂದು ಲಕ್ಷಕ್ಕೂ ಮೀರಿ ಇರುವ ಇಲಾಖೆ ಸಿಬ್ಬಂದಿಗಳಿಗೆ ಕೆಟ್ಟ ಹೆಸರು ಬರುತ್ತದೆ” ಎಂದರು.

ಅಪರಾಧ ಜಗತ್ತನ್ನು ಬಗ್ಗು ಬಡಿಯಲು ನೇಮಕವಾದ, ಸಿಬ್ಬಂದಿಗಳು, ಅವರೊಂದಿಗೇ ಶಾಮೀಲಾಗುವುದು ಅಕ್ಷಮ್ಯ ಅಪರಾಧ ಎಂದು ಅಭಿಪ್ರಾಯಿಸಿದ ಸಚಿವರು “ಅಂಥವರನ್ನು ಕೇವಲ ಸೇವೆಯಿಂದ ಅಮಾನತು ಮಾಡಿದರೆ ಸಾಲಾದು, ಅಂಥವರು, ಇಲಾಖೆಯಲ್ಲಿ ಇರಬಾರದು,” ಎಂದು ಖಾರವಾಗಿ ನುಡಿದರು.

“ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ಪಡೆದುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು. ಕೆಲವು ಯುವ ಕಾಂಗ್ರೆಸ್ ನಾಯಕರು, ಕಳೆದ ರಾತ್ರಿ ಹೊಡೆದಾಡಿಕೊಂಡಿದ್ದಾರೆ, ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ, ಉತ್ತರಿಸಿದ ಸಚಿವರು, “ನಗರದ ಪೊಲೀಸರು, ಈವರೆಗೆ ಯಾವುದೇ ದೂರನ್ನು ಯಾರಿಂದಲೂ ಪಡೆದುಕೊಂಡಿಲ್ಲ, ದೂರು ದಾಖಲಾದರೆ, ನಮ್ಮ ಪೊಲೀಸರು ವಿಚಾರಣೆ ನಡೆಸುತ್ತಾರೆ” ಎಂದರು. ಈ ಸಂದರ್ಭದಲ್ಲಿ, ಲೋಕ ಸಭಾ ಸದಸ್ಯ ಶ್ರೀ ಪಿ ಸಿ ಮೋಹನ್, ಕಾಂಗ್ರೆಸ್ ಎಂ ಎಲ್ ಎ ಶ್ರೀ ಜಮೀರ್ ಅಹ್ಮದ್, ವಿಧಾನ ಪರಿಷತ್ತಿನ ಸದಸ್ಯರಾದ, ಶ್ರೀ ಯು ಬಿ ವೆಂಕಟೇಶ್, ಶ್ರೀ ರಮೇಶ್ ಗೌಡ ಹಾಗೂ ಲೆಹರ್ ಸಿಂಗ್ ಅವರೂ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top